ಡಿಜಿ-ಐಜಿಪಿ ಹುದ್ದೆಗೆ ಡಾ. ಸಲೀಂ ಮುಂಚೂಣಿಯಲ್ಲಿ

Saleem
Published on

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಅಲೋಕ್ ಮೋಹನ್ ಬುಧವಾರ (ಮೇ 21) ಸೇವೆಯಿಂದ ನಿವೃತ್ತಿಯಾಗುತ್ತಿದ್ದು, ಇವರಿಂದ ತೆರವಾಗುವ ಸ್ಥಾನಕ್ಕೆ ಅಂದೇ ಹೊಸ ಡಿಜಿ-ಐಜಿಪಿಯನ್ನು ಸರ್ಕಾರ ನೇಮಕ ಮಾಡಲಿದೆ. ಸಿಐಡಿ ಡಿಜಿಪಿ ಡಾ. ಎಂ.ಎ. ಸಲೀಂ ಹೆಸರು ಹೊಸ ಡಿಜಿ-ಐಜಿಪಿ ಹುದ್ದೆಗೆ ಮುಂಚೂಣಿಯಲ್ಲಿದೆ.

ಡಾ. ಅಲೋಕ್ ಮೋಹನ್ ಏ.30ಕ್ಕೆ ನಿವೃತ್ತಿಯಾಗಬೇಕಿತ್ತು. ಸುಪ್ರೀಂ ಕೋರ್ಟ್ ಆದೇಶದಂತೆ ಮತ್ತು ಕರ್ನಾಟಕ ಪೊಲೀಸ್ ನಿಯಮಾವಳಿ ಅನ್ವಯ 21 ದಿನ ಅಧಿಕಾರಾವಧಿ ವಿಸ್ತರಣೆ ಮಾಡಲಾಗಿತ್ತು. ಬುಧವಾರ ಬೆಳಗ್ಗೆ 8 ಗಂಟೆಗೆ ಕೋರಮಂಗಲದ ಕೆಎಸ್‌ಆರ್‌ಪಿ ಮೈದಾನದಲ್ಲಿ ಬೀಳ್ಕೊಡುಗೆ ಪರೇಡ್ ಆಯೋಜನೆ ಮಾಡಲಾಗಿದೆ.

ಈಗಾಗಲೇ ಸೇವಾ ಹಿರಿತನ ಆಧಾರದ ಮೇಲೆ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ಸಿಐಡಿಯ ಡಿಜಿಪಿ ಡಾ.ಎಂ.ಎ. ಸಲೀಂ, ಹಿರಿಯ ಐಪಿಎಸ್ ಅಧಿಕಾರಿಗಳಾದ ಡಾ.ಕೆ. ರಾಮಚಂದ್ರ ರಾವ್, ಮಾಲಿನಿ ಕೃಷ್ಣಮೂರ್ತಿ ಮತ್ತು ಪ್ರಣವ್ ಮೊಹಾಂತಿ ಹೆಸರುಗಳನ್ನು ಲೋಕಸೇವಾ ಆಯೋಗಕ್ಕೆ ರಾಜ್ಯ ಸರ್ಕಾರ ರವಾನೆ ಮಾಡಿದೆ. ಇವರಲ್ಲಿ ಮೂವರ ಹೆಸರನ್ನು ಆಯ್ಕೆ ಮಾಡಿ ಕಳುಹಿಸಿದ ಮೇಲೆ ಅದರಲ್ಲಿ ಒಬ್ಬರನ್ನು ಅಂತಿಮಗೊಳಿಸಲಾಗುತ್ತದೆ.

ಡಿಜಿ-ಐಜಿಪಿ ಪ್ರಶಸ್ತಿ:

ಪೊಲೀಸ್ ಸೇವೆಯಲ್ಲಿ ಉತ್ತಮ ಸಾಧನೆ ಮಾಡಿದ ಅಧಿಕಾರಿ, ಸಿಬ್ಬಂದಿಗೆ ಇದೆ ಮೊದಲ ಬಾರಿಗೆ ಡಿಜಿ-ಐಜಿಪಿ ಪ್ರಶಸ್ತಿ ನೀಡಲಾಗುತ್ತಿದೆ. ರಾಜ್ಯ ಪೊಲೀಸ್ ಮತ್ತು ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಕರ್ನಾಟಕ ಕೇಡರ್ ಐಪಿಎಸ್‌ಗಳು ಸೇರಿ 200 ಅಧಿಕಾರಿ, ಸಿಬ್ಬಂದಿ ಡಿಜಿ-ಐಜಿಪಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಡಾ. ಅಲೋಕ್ ಮೋಹನ್ ಬೀಳ್ಕೊಡುಗೆ ಪರೇಡ್ ವೇಳೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net