

ನವದೆಹಲಿ: ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಡಾ.ಎಸ್.ಎಲ್. ಭೈರಪ್ಪ, ಮೂರ್ತಿ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ, ಡಾ.ಖಾದರ್, ಸಂಗೀತ ಸಂಯೋಜಕ ಎಂ.ಎಂ.ಕೀರವಾಣಿ ಸೇರಿದಂತೆ ಹಲವರಿಗೆ ಇಂದು ಪದ್ಮಪ್ರಶಸ್ತಿಗಳನ್ನು ನೀಡಲಾಯಿತು.
ಪ್ರಸಕ್ತ ಸಾಲಿನ ಪದ್ಮಪ್ರಶಸ್ತಿಗಳನ್ನು ಜನವರಿಯಲ್ಲಿ ಘೋಷಿಸಲಾಗಿದ್ದು, ಈಗಾಗಲೇ ಮಾಜಿ ಸಿಎಂ ಎಸ್.ಎಂ.ಕೃಷ್ಣ ಸೇರಿದಂತೆ ಹಲವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಉಳಿದ ಕೆಲವರಿಗೆ ಇಂದು ಪ್ರಶಸ್ತಿ ಪ್ರದಾನ ಮಾಡಲಾಗಿದೆ. ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದರು.
ಎಸ್.ಎಲ್. ಭೈರಪ್ಪ, ಸುಧಾಮೂರ್ತಿ ಅವರು ಇಂದು ಪದ್ಮಭೂಷಣ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸ್ವೀಕರಿಸಿದರು. ಹಾಗೆಯೇ 'ಮಿಲೆಟ್ ಮ್ಯಾನ್ ಆಫ್ ಇಂಡಿಯಾ' ಎಂದೇ ಹೆಸರಾಗಿರುವ ಡಾ.ಖಾದರ್, 'ಆರ್ಆರ್ಆರ್' ಚಿತ್ರದ 'ನಾಟು ನಾಟು' ಗೀತೆ ಖ್ಯಾತಿಯ ಎಂ.ಎಂ.ಕೀರವಾಣಿ ಅವರಿಗೆ ಇಂದು ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇವರೊಂದಿಗೆ ದೇಶದ ವಿವಿಧೆಡೆಯ ಇನ್ನೂ ಕೆಲವು ಸಾಧಕರು ಕೂಡ ಪದ್ಮಪ್ರಶಸ್ತಿ ಸ್ವೀಕರಿಸಿದರು.
ದೇಶದಲ್ಲಿ ಈ ಸಲ ಒಟ್ಟು 106 ಮಂದಿಯನ್ನು ಪದ್ಮಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಆ ಪೈಕಿ 6 ಸಾಧಕರನ್ನು ಪದ್ಮವಿಭೂಷಣ, 9 ಸಾಧಕರನ್ನು ಪದ್ಮಭೂಷಣ ಮತ್ತು 91 ಸಾಧಕರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.