ಹಾಡಲೇ ಎಂದು ಪತ್ನಿಗೆ ಕೇಳಿದ್ದ ಡಾ. ರಾಜ್ !

niramalanathananda swamiji
ಶಿವಮೊಗ್ಗ ಆದಿಚುಂಚನಗಿರಿ ಮಠದಲ್ಲಿ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಗಣಪತಿ ಮೂರ್ತಿಗೆ ಪೂಜೆ ಸಲ್ಲಿಸಿದರು. ಶ್ರೀ ಪ್ರಸನ್ನನಾಥ ಸ್ವಾಮೀಜಿ ಇದ್ದರು.
Published on

ಶಿವಮೊಗ್ಗ: ಪತ್ನಿ ಗಂಡನಿಗೆ ಹೇಗೆ ಮುಖ್ಯವಾಗುತ್ತಾಳೆ. ಸುಖ ದಾಂಪತ್ಯದಿಂದ ಬದುಕು ಹೇಗೆ ಸುಂದರವಾಗುತ್ತದೆ ಎಂಬುದಕ್ಕೆ ವರನಟ ಡಾ. ರಾಜಕುಮಾರ್ ಅವರ ಬಗ್ಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದಾಹರಣೆ ನೀಡಿದರು.

ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದ 26ನೇ ವಾರ್ಷಿಕೋತ್ಸವ ಸಮಾರಂಭ ನಿಮಿತ್ತ ಬುಧವಾರ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಹಾಗೂ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಹಿರಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರಿದ್ದಾಗ ನಮ್ಮ ಅಂಧಮಕ್ಕಳ ಶಾಲೆಗೆ ಡಾ. ರಾಜಕುಮಾರ್ ಬಂದಿದ್ದರು. ಶ್ರೀಗಳು ಮಕ್ಕಳಿಗಾಗಿ ಹಾಡು ಹಾಡುವಂತೆ ರಾಜ್‌ಕುಮಾರ್ ಬಳಿ ಕೇಳಿದ್ದರು. ಆಗ ಪಕ್ಕದಲ್ಲಿಯೇ ಕುಳಿತಿದ್ದ ಪತ್ನಿ ಪಾರ್ವತಮ್ಮ ಅವರಿಗೆ ರಾಜಕುಮಾರ್, ಶ್ರೀಗಳು ಹಾಡುವಂತೆ ಕೇಳುತ್ತಿದ್ದಾರೆ, ನಾನು ಹಾಡಲೇ ಎಂದು ಪ್ರಶ್ನಿಸಿದರು. ಇದು ತಗ್ಗಿ-ಬಗ್ಗಿ ನಡೆಯುವುದಲ್ಲ. ಪತ್ನಿಯ ಬಗ್ಗೆ ಡಾ. ರಾಜ್‌ಕುಮಾರ್ ಅವರಿಗಿದ್ದ ಪ್ರೀತಿ, ವಿಶ್ವಾಸ ತೋರಿಸುತ್ತದೆ ಎಂದರು.

ಗಮನ ಸೆಳೆದ ನಾದೋಪಾಸನೆ
ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶ್ರೀ ಆದಿಚುಂಚನಗಿರಿ ಮಠದಲ್ಲಿ ಬುಧವಾರ ಇಡೀ ಕಾರ್ಯಕ್ರಮದ ಜತೆಗೆ ಬೆಳಗ್ಗೆಯಿಂದ ಗಾನಯೋಗಿ ಭೈರವಿ ಕೆಂಪೇಗೌಡ ಸಂಗೀತಾ ಸಭಾದಿಂದ ಆಯೋಜಿಸಿದ್ದ ನಾದೋಪಾಸನೆ ಕಾರ್ಯಕ್ರಮ ಗಮನ ಸೆಳೆಯಿತು. ಬೆಳಗ್ಗೆಯಿಂದ ರಾತ್ರಿವರೆಗೆ ನಡೆದ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ವಿದ್ವಾಂಸರು, ಪ್ರಖ್ಯಾತ ಗಾಯಕರು ಸಂಗೀತ ಸುಧೆ ಹರಿಸಿದರು. ವಿದ್ವಾನ್ ಮಣಿ ಮತ್ತು ತಂಡದವರಿಂದ ಮಂಗಳವಾದ್ಯ ನೆರವೇರಿತು. ಬೆಂಗಳೂರಿನ ಶ್ರೀ ಆದಿಚುಂಚನಗಿರಿ ಶಾಖಾಮಠ ನಾರಾಯಣಧಾಮ ಮಕ್ಕಳಿಂದ ವೇದ ಪಾರಾಯಣ ಹಾಗೂ ಭಜನೆ ನಡೆಯಿತು. ಶ್ರೀಮಠದಲ್ಲಿ ವಿಶೇಷವಾಗಿ ಶಿವಮೊಗ್ಗದ ಕುಮಾರಿ ಮಹತಿ ಭಟ್, ರೇಖಾ ಸುಬ್ರಹ್ಮಣ್ಯಂ, ಶ್ರೇಯಸ್, ನಿಖಿಲ್ಕುಮಾರ್, ವಿದ್ವಾನ್ ಹೊಸಹಳ್ಳಿ, ಪಂಡಿತ್ ಹುಮಾಯೂನ್ ಹರ್ಲಾಪುರ್, ವಿನಾಯಕ ಭಟ್, ರಾಜೀವ್, ಶ್ರೇಯಸ್, ಹೊಸಳ್ಳಿ ಕೆ ವೆಂಕಟರಾವ್, ಶಿವರಾಜಪ್ಪ ಅವರ ಹಾರ್ಮೋನಿಯಂ ಸೇರಿ ಭಜನೆ ಹಾಗೂ ಸಂಗೀತ ಸುಧೆ ಹರಿಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net