

ಶಿವಮೊಗ್ಗ: ನೈತಿಕ ಅಧಃಪತನಕ್ಕೆ ಇಳಿಯುತ್ತಿರುವ ಕಾಲಘಟ್ಟದಲ್ಲಿ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಅಪ್ರತಿಮ ಕೊಡುಗೆ ನೀಡಿದ ಶಿಕ್ಷಕ, ದಾರ್ಶನಿಕ, ದೇಶದ ಮೊದಲ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನಾದರ್ಶಗಳು ಪ್ರಸ್ತುತವಾಗುತ್ತವೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಜಿಲ್ಲಾಡಳಿತದಿಂದ ಶುಕ್ರವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ದೇಶದ ಉಜ್ವಲ ಭವಿಷ್ಯಕ್ಕೆ ಶಿಕ್ಷಕರ ಮಹತ್ವವನ್ನು ಚೆನ್ನಾಗಿ ಅರಿತಿದ್ದ ರಾಧಾಕೃಷ್ಣನ್ ಅವರು ಮಹಾನ್ ಸಾಧಕರ ಮೇಲ್ಪಂಕ್ತಿಯಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯೆ ಬಲ್ಕಿಷ್ ಬಾನು ಮಾತನಾಡಿ, ಪ್ರತಿ ವ್ಯಕ್ತಿಯ ಬೆಳವಣಿಗೆ ಮತ್ತು ಆತನ ಸಾಧನೆ ಹಿಂದೆ ಶಿಕ್ಷಕರ ಸಮರ್ಪಣಾ ಭಾವವನ್ನು ನೆನಪಿಸಿಕೊಳ್ಳಬೇಕು. ಸ್ವಾತಂತ್ರೃ ಸಂಗ್ರಾಮದಲ್ಲಿ ರಾಜಕಾರಣಿಗಳ ಜತೆಗೆ ಶಿಕ್ಷಕರ ಪಾತ್ರವೂ ಮಹತ್ವದ್ದಾಗಿತ್ತು ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಶಿಕ್ಷಕರು ಇಂದು ಹಲವು ಕೆಲಸಗಳನ್ನು ನಿರ್ವಹಿಸಬೇಕಾದ ಒತ್ತಡದಲ್ಲಿದ್ದಾರೆ. ಆದರೂ ವೃತ್ತಿ ಗೌರವವನ್ನು ಎತ್ತಿ ಹಿಡಿಯುವಲ್ಲಿ ಸಫಲರಾಗಿದ್ದಾರೆ. ಇದು ಜ್ಞಾನದ ಯುಗ. ಜ್ಞಾನದಿಂದ ವಿಜ್ಞಾನ, ತಂತ್ರಜ್ಞಾನ ರೂಪ ಪಡೆದುಕೊಂಡಿದೆ. ಇಂತಹ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಕರು ಕಾಳಜಿಯಿಂದ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪುರಸ್ಕಾರ ಪ್ರದಾನ ಮಾಡಲಾಯಿತು. ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಸಾಹಿತಿ, ಚಿಂತಕ ವೈ.ವಿ.ಗುಂಡೂರಾವ್, ಉಪವಿಭಾಗಾಧಿಕಾರಿ ಸತ್ಯನಾರಾಯಣ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಧು, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಡಿ.ಬಿ.ರುದ್ರಪ್ಪ, ಪ್ರಮುಖರಾದ ಧರ್ಮಪ್ಪ, ದಿನೇಶ್, ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ, ಡಿಡಿಪಿಐ ಮಂಜುನಾಥಸ್ವಾಮಿ ಇತರರಿದ್ದರು.