

ಬೆಂಗಳೂರು : ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂದಿ ಭಾಷೆಯ ಶಿಕ್ಷಣ, ತರಬೇತಿ ಮತ್ತು ಸಂಶೋಧನೆಯ ಪ್ರಸಾರಕ್ಕಾಗಿ ಇರುವ "ಕೇಂದ್ರೀಯ ಹಿಂದಿ ಸಂಸ್ಥಾನ"ವು ನೀಡುವ "ಗಂಗಾಶರಣ ಸಿನ್ಹಾ ರಾಷ್ಟ್ರ ಪ್ರಶಸ್ತಿ" ಗೆ ಬೆಂಗಳೂರಿನ ಹಿರಿಯ ಹಿಂದಿ ವಿದ್ವಾಂಸ ಡಾ. ಪ್ರಭಾಶಂಕರ ‘ಪ್ರೇಮಿ’ ಅವರು ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ಐದು ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಆಗ್ರಾದಲ್ಲಿರುವ ಈ ರಾಷ್ಟ್ರೀಯ ಸಂಸ್ಥೆಯು, ಹಿಂದಿ ಭಾಷೆಯ ಬೆಳವಣಿಗೆ ಗಮನಾರ್ಹ ಕೊಡುಗೆ ನೀಡಿರುವ ಹಿಂದಿಯೇತರ ರಾಜ್ಯಗಳ ವಿದ್ವಾಂಸರು ಮತ್ತು ಸಾಹಿತಿಗಳಿಗೆ ಹಲವಾರು ಪ್ರಶಸ್ತಿಗಳನ್ನು 1989 ರಿಂದ ನೀಡುತ್ತಿದೆ. ಅತ್ಯುನ್ನತ ಶ್ರೇಣಿಯ "ಗಂಗಾಶರಣ ಸಿನ್ಹಾ ರಾಷ್ಟ್ರ ಪ್ರಶಸ್ತಿ" ಗೆ 2017 ರ ಸಾಲಿಗೆ ಆಯ್ಕೆಯಾಗಿರುವ ನಾಲ್ವರು ಸಾಧಕರಲ್ಲಿ ಡಾ. ಪ್ರಭಾಶಂಕರ ‘ಪ್ರೇಮಿ’ ಸೇರಿದ್ದಾರೆ. ಅಲ್ಲದೆ, ಮಣಿಪುರದ ರಾಧಾಗೋವಿಂದ ಥಂಗಂ, ಒಡಿಶಾದ ಡಾ. ವಿಜಯಕುಮಾರ್ ಮಹಾನಟಿ ಮತ್ತು ಪಂಜಾಬ್‌ನ ಪ್ರೊ. ಮನಮೋಹನ್ ಸೆಹಗಲ್ ಅವರಿಗೂ ಪ್ರಶಸ್ತಿ ನೀಡಲಾಗಿದೆ. ನಾಲ್ವರು ವಿದ್ವಾಂಸರು ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಂದ ಸ್ವೀಕರಿಸಲಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಡಾ. ಪ್ರಭಾಶಂಕರ ‘ಪ್ರೇಮಿ’ ಅವರು ಹಿಂದಿ ಭಾಷೆಯಲ್ಲಿ ಕವಿ ಮತ್ತು ವಿಮರ್ಶಕರಾಗಿ ಖ್ಯಾತರಾಗಿದ್ದಾರೆ. ನುರಿತ ಅನುವಾದಕರಾಗಿರುವ ಅವರು ವಚನ ಸಾಹಿತ್ಯವನ್ನು ಹಿಂದಿ ಭಾಷೆಗೆ ಅನುವಾದಿಸಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ.