ತುಂಬು ಗರ್ಭಿಣಿಯಾಗಿದ್ರೂ ದೇಶದ ಮೊದಲ ಕರೊನಾ ಟೆಸ್ಟಿಂಗ್​ ಕಿಟ್​ ತಯಾರಿಸಿದ ಮಹಿಳೆ ಯಾರು ಗೊತ್ತಾ?

Minal
Published on

ಮುಂಬೈ: ದೇಶದಲ್ಲಿ ಕಿಲ್ಲರ್​ ಕರೊನಾ ವೈರಸ್​ ಮೊದಲ ಟೆಸ್ಟಿಂಗ್​ ಕಿಟ್​​ ತಯಾರಿಸಿದ ಕೀರ್ತಿ ಸೂಕ್ಷ್ಮರೋಗಾಣು ಶಾಸ್ತ್ರಜ್ಞೆ ಡಾ. ಮಿನಾಲ್​ ದಖವೇ ಭೋಸಲೆ ನೇತೃತ್ವದ ತಂಡಕ್ಕೆ ಸಲ್ಲುತ್ತದೆ. ಮೆಚ್ಚುಗೆ ಸೂಚಿಸುವಂತಹ ವಿಚಾರವೆಂದರೆ ಕಿಟ್​ ತಯಾರಿಸುವಾಗ ಮಿನಾಲ್​ ಕೊನೆಯ ಹಂತದ ಗರ್ಭಿಣಿಯಾಗಿದ್ದರು.

ಮೌಲ್ಯಮಾಪನಕ್ಕಾಗಿ ಟೆಸ್ಟಿಂಗ್​ ಕಿಟ್​ ಅನ್ನು ಅಧಿಕಾರಿಗಳಿಗೆ ನೀಡುವ ಒಂದು ದಿನದ ಮುಂಚೆಯೇ ಮಿನಾಲ್​ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಈ ಬಗ್ಗೆ ಮಾತನಾಡಿರುವ ಅವರು ಇದೊಂದು ರೀತಿಯಲ್ಲಿ ಎರಡು ಮಗುವಿಗೆ ಜನ್ಮ ನೀಡಿದಂತಾಯಿತು ಎಂದಿದ್ದಾರೆ. ಕಿಟ್​ ತಯಾರಿಕೆ ಮತ್ತು ಗರ್ಭಿಣಿಯಾವಸ್ಥೆ ಒಂದೇ ಹಳಿಯ ಮೇಲೆ ಸಾಗಿತು. ಎಲ್ಲಿಯೂ ಕೂಡ ಯಾವುದೇ ತೊಂದರೆಗಳು ಎದುರಾಗಲಿಲ್ಲ ಎಂದು ಮಿನಾಲ್​ ತಿಳಿಸಿದ್ದಾರೆ.

ಗರ್ಭಿಣಿಯಾಗಿ ಟೆಸ್ಟಿಂಗ್​ ಕಿಟ್​ ತಯಾರಿಸುವಾಗ ಒಂದಿಷ್ಟು ತೊಡಕುಗಳಾಯಿತು. ಸಿಸೇರಿಯನ್​ ಮೂಲಕ ಹೆರಿಗೆ ನಡೆಯಿತು. ಕರೊನಾ ವೈರಸ್​ ವಿರುದ್ಧ ಹೋರಾಡಲು ಮತ್ತು ಜನರಿಗೆ ನೆರವು ನೀಡಲು ಇದೊಂದ ಒಳ್ಳೆಯ ಸಮಯ ಅನಿಸಿತು. ಹೀಗಾಗಿ ಗರ್ಭಿಣಿ ಎಂಬುದನ್ನು ಲೆಕ್ಕಿಸದೇ ಟೆಸ್ಟಿಂಗ್​ ಕಿಟ್​ ತಯಾರಿಕೆಗೆ ಮುಂದಾದೆ ಎಂದು ಹೇಳಿದ್ದಾರೆ.

ಇದೇ ಕ್ಷೇತ್ರದಲ್ಲಿ ಐದು ವರ್ಷ ಸೇವೆ ಸಲ್ಲಿಸಿದ್ದೇನೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನನ್ನ ಸೇವೆಯ ಅಗತ್ಯ ಹೆಚ್ಚಾಗಿರುತ್ತದೆ. ಹೀಗಿರುವಾಗ ನಾನು ಗರ್ಭಿಣಿ ಎಂದು ಸುಮ್ಮನಾದರೆ ಏನು ಉಪಯೋಗ ಎಂದು ಪ್ರಶ್ನಿಸಿದರು. ಕಿಟ್​ ತಯಾರಿಕ ಸಮಯದಲ್ಲಿ ಗರ್ಭಿಣಿಯಾಗಿದ್ದರಿಂದ ಮಿನಾಲ್​ ಕಚೇರಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಆದರೆ, ಪುಣೆಯ ಮೈಲ್ಯಾಬ್​ ಡಿಸ್ಕವರಿಯಲ್ಲಿ ಕಿಟ್​ ಯೋಜನೆ ಮೇಲೆ ಕೆಲಸ ಮಾಡುತ್ತಿದ್ದ ತಂಡದ 10 ಸದಸ್ಯರಿಗೆ ಮಿನಾಲ್​ ಮಾರ್ಗದರ್ಶನ ಮಾಡುತ್ತಿದ್ದರು.

ಹತ್ತು ವರ್ಷಗಳಿಂದ ತಮ್ಮ ತಂಡದ ಜತೆ ಒಳ್ಳೆಯ ಸಂಬಂಧ ಇರುವುದರಿಂದ ಕಿಟ್​​ ತಯಾರಿಕೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಯಿತು ಎನ್ನತ್ತಾರೆ ಮಿನಾಲ್​. ದೇಶಕ್ಕಾಗಿ ಸೇವೆಯೊಂದನ್ನು ಮಾಡಿದ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಇವರ ತಂಡ ನೀಡಿರುವ ಟೆಸ್ಟಿಂಗ್​ ಕಿಟ್​, 2.5 ಗಂಟೆಗಳಲ್ಲಿ ಫಲಿತಾಂಶವನ್ನು ನೀಡುತ್ತದೆ. ಅದಕ್ಕೂ ಮುನ್ನ 8 ಗಂಟೆಗಳಾಗುತ್ತಿತ್ತು.

ಅಂದಹಾಗೆ ಮಿನಾಲ್ ಅವರು ಪುಣೆಯ ಮೈಲ್ಯಾಬ್​ ಡಿಸ್ಕವರಿ ಸಲ್ಯೂಷನ್​ನಲ್ಲಿ ಸೂಕ್ಷ್ಮರೋಗಾಣು ಶಾಸ್ತ್ರಜ್ಞೆ ಹಾಗೂ ರೀಸರ್ಚ್​ ಆ್ಯಂಡ್​ ಡೆವಲಪ್ಮೆಂಟ್​ ಚೀಫ್​ ಆಗಿದ್ದಾರೆ. 2009ರಲ್ಲಿ ಸ್ಪೋಟಗೊಂಡ ಸ್ವೈನ್​ ಫ್ಲ್ಯೂ ಸಮಯದಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net