ದೇವರ ಅನುಗ್ರಹ ಆಗಲೇಬೇಕು ಎಂದಾದರೆ ವೇದ ಹೇಳಿದ ಸಂದೇಶಗಳಿಗೆ ಶರಣಾಗಿ

MAHULI Dr. vidya simhachar 1
Published on

 ಶ್ರೀ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ ಡಾ. ಮಾಹುಲಿ ವಿದ್ಯಾಸಿಂಹಾಚಾರ್ಯ ಸಂದೇಶ 

ಮೈಸೂರು: ದಡ್ಡರ ಗುಂಪಿನಲ್ಲಿ ನಾವು ಬುದ್ಧಿವಂತ ಎನಿಸಿಕೊಳ್ಳುವುದಕ್ಕಿಂತ ಜ್ಞಾನಿಗಳು ನಮ್ಮನ್ನು ಪರಿಣತ, ಪಂಡಿತ ಎಂದು ಗುರುತಿಸುವ ಮಟ್ಟಕ್ಕೆ ಬೆಳೆಯಬೇಕು. ಅದೇ ನಿಜವಾದ ಸಾಧನೆ ಎಂದು ಎಂದು ಮುಂಬೈನ ಶ್ರೀ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ, ಮಹಾ ಮಹೋಪಾಧ್ಯಾಯ ಡಾ. ಮಾಹುಲಿ ವಿದ್ಯಾಸಿಂಹಾಚಾರ್ಯ ನುಡಿದರು.

ನಗರದ ಶ್ರೀರಾಮಪುರದ ಶ್ರೀ ವೆಂಕಟೇಶ ಧ್ಯಾನ ಕೇಂದ್ರದಲ್ಲಿ ಹಮ್ಮಿಕೊಂಡಿರುವ ಜ್ಞಾನಸತ್ರ ‘ಗೀತಾಭಾಷ್ಯ ಒಂದು ವಿಶೇಷ ಚಿಂತನ’ ಸರಣಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಏನೂ ತಿಳಿಯದವರ ಮಧ್ಯದಲ್ಲಿ ಎಂದೂ ಇರಬಾರದು. ಆ ಸ್ಥಳದಲ್ಲಿ ನಮಗೆ ತಿಳಿದ ಅಲ್ಪ ಸಲ್ಪವೂ ಮರೆತುಹೋಗುತ್ತದೆ.ಅಪ್ರಬುದ್ಧರು ಇಲ್ಲ ಸಲ್ಲದ ಸಂಗತಿಗಳ ಬಗ್ಗೆ ಸದಾ ಗಲಾಟೆಯನ್ನಷ್ಟೇ ಮಾಡುತ್ತಾರೆ. ಇದರಿಂದ ಜೀವನದ ಅಮೂಲ್ಯ ಕ್ಷಣಗಳು ಕಳೆದು ಹೋಗುತ್ತವೆ. ಯಾವ ಫಲವೂ ಲಭಿಸದು. ಹಾಗಾಗಿ ಸಜ್ಜನರ ಸಂಘ ಮಾಡಬೇಕು.ಸದಾ ಪ್ರಾಜ್ಞರ ಸಮೂಹದಲ್ಲಿ ಇದ್ದ ವ್ಯಕ್ತಿ ಅಭ್ಯುದಯದ ಕಡೆಗೆ ಸಾಗುತ್ತಾನೆ. ಆತನಿಗೆ ಈ ಪ್ರಕ್ರಿಯೆಗೆ ಬೇಕಾದ ಪೂರಕ, ಪ್ರೇರಕ ವಾತಾವರಣ ಅಲ್ಲಿ ತಾನಾಗಿಯೇ ದೊರಕುತ್ತದೆ ಎಂದು ಅವರು ಹೇಳಿದರು.

ನಮಗೆ ದೇವರ ಅನುಗ್ರಹ ಆಗಲೇಬೇಕು ಎಂದಾದರೆ ವೇದಗಳು ಹೇಳಿದ ಸಂದೇಶಗಳಿಗೆ ಶರಣಾಗಬೇಕು. ಅದು ನಮ್ಮನ್ನು ಸಾಧನೆಯಲ್ಲಿ ತೊಡಗಲು ಶಕ್ತಿ ನೀಡುತ್ತದೆ ಎಂದರು.

ನಿಷ್ಕಾಮ ಕರ್ಮವನ್ನೇ ಮಾಡಬೇಕು: ಜೀವ ನಿರಾಶವಾಗಬಾರದು ಎಂಬುದಕ್ಕಾಗಿ ಸತ್ಕಾಮ ಕರ್ಮಗಳನ್ನು ಮಾಡಬೇಕು. ಆದರೆ ಮೋಕ್ಷ ಸಾಧನೆಗಾಗಿ ನಾವು ನಿಷ್ಕಾಮ ಕರ್ಮವನ್ನೇ ಮಾಡಬೇಕು ಎಂದು ವೇದಗಳು ಹೇಳಿವೆ. ಎಲ್ಲ ಯುಗಕ್ಕೂ ಇದು ಸತ್ಯ. ಆ ನಿಟ್ಟಿನಲ್ಲಿ ಚಿಂತನೆ ಹರಿಸುತ್ತಿದ್ದರೂ ಸಾಕು. ಅದು ನಮ್ಮನ್ನು ಮುಂದೆ ಮುಂದೆ ನಡೆಸುತ್ತದೆ ಎಂದು ಆಚಾರ್ಯರು ಹೇಳಿದರು.

ಶ್ರವಣ, ಮನನ, ಜ್ಞಾನ, ಧ್ಯಾನಾದಿಗಳು ನಮ್ಮನ್ನು ಸನ್ಮಾರ್ಗದಲ್ಲಿ ಮುಂದೆ ಮುಂದೆ ನಡೆಯುವಂತೆ ಮಾಡುತ್ತವೆ. ಜೀವನದ ಸಾರ್ಥಕತೆಗೆ ಮತ್ತು ಮೋಕ್ಷ ಸಾಧನೆಗೆ ಈ ಹಾದಿಯಲ್ಲೇ ಸಾಗಬೇಕು ಎಂದು ವೇದಗಳು ಹೇಳಿದ್ದು. ಅವುಗಳಿಂದ ವಿಮುಖರಾಗಿ ಮಾನವ ಜನ್ಮವನ್ನು ಹಾನಿ ಮಾಡಿಕೊಳ್ಳಬಾರದು ಎಂದು ಅವರು ಹೇಳಿದರು.

ಜ್ಞಾನ, ಭಕ್ತಿ ಮತ್ತು ವೈರಾಗ್ಯ- ಪರಿ ಪರಿಯಾಗಿ ಬೇಡಬೇಕು: 

ರಾಘವೇಂದ್ರ ಸ್ವಾಮಿಗಳು ಬೇಡಿದ್ದನ್ನು ಕೊಡುವ ಕಲ್ಪವೃಕ್ಷ. ಅವರ ವೃಂದಾವನದ ಬಳಿ ತೆರಳಿ ಕೇವಲ ಕಾರು, ಮನೆ, ಬಂಗಲೆ ಸೇರಿದಂತೆ ಐಷಾರಾಮಿ ವಸ್ತುಗಳನ್ನು ಕೇಳುವುದು ಖಂಡಿತಾ ತರವಲ್ಲ. ಜ್ಞಾನ, ಭಕ್ತಿ ಮತ್ತು ವೈರಾಗ್ಯಗಳನ್ನು ದಯಪಾಲಿಸಿ ಎಂದು ಪರಿ ಪರಿಯಾಗಿ ಬೇಡಬೇಕು. ಇವೆಲ್ಲವೂ ಇಹ ಮತ್ತು ಪರದಲ್ಲಿ ಶಾಶ್ವತವಾದ ಸುಖವನ್ನು, ನಂತರ ಮೋಕ್ಷವನ್ನು ನೀಡುತ್ತವೆ ಎಂದು ಆಚಾರ್ಯರು ಸಂದೇಶ ನೀಡಿದರು. ಯಾರ‌್ಯಾರದ್ದೋ ಪ್ರೀತಿಗಿಂತ ಭಗವಂತ ಪ್ರೀತಿಯನ್ನು ಅಪೇಕ್ಷಿಸಿದರೆ ಅದರಲ್ಲಿ ಯಾವುದೇ ತಪ್ಪು ಇಲ್ಲ. ಇದರ ಜತೆಜತೆಗೇ ದೇವರ ಪ್ರೀತಿಗಾಗಿ ನಾವು ಏನೆಲ್ಲಾ ಉತ್ತಮ ಕಾರ್ಯಗಳನ್ನು ಮಾಡಬಹುದೋ ಅದನ್ನೆಲ್ಲಾ ಆಯಾ ಕ್ಷಣದಲ್ಲೇ ಮಾಡಬೇಕು ಎಂದರು.

ಪಂಡಿತರಾದ ಬಾದರಾಯಣಾಚಾರ್ಯ, ವ್ಯಾಸತೀರ್ಥಾಚಾರ್ಯ, ಹೇಮಂತ ಆಚಾರ್ಯ ಗುಡಿ ಸೇರಿದಂತೆ ನೂರಾರು ವಿದ್ವಾಂಸರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net