

ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯಿಂದ ಡಾ. ಎಂ.ಗೋಪಾಲಕೃಷ್ಣ ಅಡಿಗರ ಜನ್ಮದಿನದ ನಿಮಿತ್ತ ಅಡಿಗರ ಕಾವ್ಯ ಚಿಂತನ-ಮಂಥನ-ಗಾಯನ ವಿಶೇಷ ಕಾರ್ಯಕ್ರಮ ಫೆ.20ರಂದು ಸಂಜೆ 5.30ಕ್ಕೆ ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಉಪಾಧ್ಯಕ್ಷ ಹಾಲಸ್ವಾಮಿ ತಿಳಿಸಿದರು.
ಅಡಿಗರು ನವ್ಯ ಕಾವ್ಯ ಲೋಕದಲ್ಲಿ ಪ್ರವೇಶ ಪಡೆದವರು. ಅವರ ಕಾವ್ಯಗಳು ಚಿಂತನೆಗೆ ದಾರಿ ಮಾಡಿಕೊಡುತ್ತವೆ. ಕನ್ನಡ ಕಾವ್ಯ ಶ್ರೀಮಂತಗೊಳಿಸಿದ ಅವರ ಕವಿತೆಗಳಲ್ಲಿ ಸೃಜನಶೀಲತೆ ಕಾಣಬಹುದು. ಕೇಂದ್ರ ಸಾಹಿತ್ಯ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದು ಒಬ್ಬ ಶ್ರೇಷ್ಠ ಭಾರತೀಯ ಕವಿ. ಅಂತಹ ಕವಿ ಕುರಿತ ವಿಶೇಷ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮಕ್ಕೆ ಶಿವಮೊಗ್ಗದ ಬಹುಮಖಿ ಸಹಯೋಗ ನೀಡುತ್ತಿದೆ ಎಂದರು.
ಅಡಿಗರ ಕುರಿತು ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಮಾತನಾಡುವರು. ಆನಂದಪುರದ ಯಡೇಹಳ್ಳಿಯ ಎಂ.ಎಸ್.ಭದ್ರಪ್ಪಗೌಡ ಮತ್ತು ಸಹನಾ ಜಿ. ಭಟ್ ಅಡಿಗರ ಕಾವ್ಯ ಗಾಯನದ ಜತೆಗೆ ಕವಿತೆಯ ಅರ್ಥ ಕೂಡ ಹೇಳುವರು. ಸಂಘದ ಜಿಲ್ಲಾಧ್ಯಕ್ಷ ಕೆ.ವಿ. ಶಿವಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯ ನಿರ್ದೇಶಕ ಎನ್.ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ದರ್ಶಿ ವಿ.ಟಿ.ಅರುಣ್ ಕಾಲೇಜಿನ ಪ್ರಾಚಾರ್ಯ ಡಾ. ಎಚ್.ಎಸ್.ನಾಗಭೂಷಣ್ ಉಪಸ್ಥಿತರಿರುವರು ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್, ಕಾರ್ಯದರ್ಶಿ ಕೆ.ಆರ್.ಸೋಮನಾಥ್ ಸುದ್ದಿಗೋಷ್ಠಿಯಲ್ಲಿದ್ದರು.