

ತುಮಕೂರು: ರಾಜ್ಯ ಕಾಂಗ್ರೆಸ್ನಲ್ಲಿ ಕಳೆದ ಕೆಲ ದಿನಗಳಿಂದ ಬದಲಾವಣೆಯ ಕೂಗು ಜೋರಾಗಿ ಕೇಳಿ ಬರುತ್ತಿದ್ದು, ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಪ್ರಮುಖವಾಗಿ ನಾಯಕರ ಬಣ ದೆಹಲಿಗೆ ಓಡಾಡುತ್ತಿದ್ದಾರೆ. ಇದೆಲ್ಲದರ ನಡುವೆ ಗೃಹಸಚಿವ ಪರಮೇಶ್ವರ್ (Parameshwar) ಅವರು ನಾನು ರಾಜೀನಾಮೆ ಕೊಡಲು ಸಿದ್ಧ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲವನ್ನ ಸೃಷ್ಟಿಸಿದ್ದಾರೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಗೃಹಸಚಿವ ಪರಮೇಶ್ವರ್ (Parameshwar) ಈ ಹೇಳಿಕೆಯನ್ನು ನೀಡಿದ್ದು, ಸದ್ಯ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಕಾಂಗ್ರೆಸ್ನಲ್ಲಿ ಬದಲಾವಣೆಯ ಕೂಗು ಕೇಳಿ ಬರುತ್ತಿರುವ ನಡುವೆಯೇ ಈ ಹೇಳಿಕೆ ಬಂದಿರುವುದು ಹಲವು ಊಹಾಪೋಹಗಳಿಗೆ ಎಡೆ ಮಾಡಿದೆ.
ಇತ್ತೀಚೆಗೆ ಕ್ಷೇತ್ರದ ಕಾರ್ಯಕರ್ತರ ಜೊತೆ ಬೆರೆಯಲು ಸಾಧ್ಯವಾಗುತ್ತಿಲ್ಲ. ನಿಮ್ಮ ಮನಸ್ಸಿನ ಆಕಾಂಕ್ಷೆಯಂತೆ ಸ್ಪಂದಿಸಲು ಆಗ್ತಿಲ್ಲ, ಇದಕ್ಕಾಗಿ ಕ್ಷಮೆ ಕೇಳ್ತೀನಿ. ನಿಮಗೆಲ್ಲ ನಿರಾಸೆಯಾಗಿರಬಹುದು ನಿಮ್ಮ ಕೈಗೆ ಸಿಗೋದಿಲ್ಲ, ಪಂಚಾಯಿತಿಗೆ ಬರೋದಿಲ್ಲ, ನಮನ್ನ ಮಾತಾಡಿಸೋದಿಲ್ಲ. ಇದೆಲ್ಲಾ ನಮಗೂ ಅನಿಸುತ್ತೆ ನಿಮಗೂ ಅನಿಸುತ್ತೆ. ಆದರೆ ಸಮಯ ನನ್ನ ಕೈಯಲ್ಲಿ ಇಲ್ಲ. ನೀವೆಲ್ಲಾ ದೊಡ್ಡ ಮನುಸ್ಸು ಮಾಡಿ ಒಂದೇ ಮಾತಲ್ಲಿ ಹೇಳಿಬಿಟ್ರೆ ನಾಳೇನೆ ರಾಜೀನಾಮೆ ಕೊಡುತ್ತೇನೆ. ಆಗ ನಾನು ನಿಮ್ಮ ಜೊತೆಯಲ್ಲಿ ಇರುತ್ತೇನೆ ಎಂದು ಗೃಹಸಚಿವ ಪರಮೇಶ್ವರ್ (Parameshwar) ಅವರು ಹೇಳಿದ್ದಾರೆ.
ಇತ್ತ ಗೃಹಸಚಿವರು ರಾಜೀನಾಮೆಯ ಮಾತುಗಳನ್ನು ಆಡುತ್ತಿದ್ದಂತೆ ಕಾರ್ಯಕರ್ತರು ಬೇಡ ನೀವು ಮುಖ್ಯಮಂತ್ರಿಯಾಗಬೇಕು, ರಾಜೀನಾಮೆ ಕೊಡಲು ಹೋಗಬೇಡಿ ಎಂದು ಜೋರಾಗಿ ಕೂಗಲು ಶುರು ಮಾಡಿದರು. ಸದ್ಯ ಪರಮೇಶ್ವರ್ ಅವರ ರಾಜೀನಾಮೆಯ ಮಾತುಗಳು ರಾಜ್ಯ ಕಾಂಗ್ರೆಸ್ನಲ್ಲಿ ಹಸೊ ಚರ್ಚೆಗೆ ನಾಂದಿ ಹಾಡಿದ್ದು, ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.