

ಬೆಂಗಳೂರು: ‘ಕಾಂಗ್ರೆಸ್ ಸುಡುವ ಮನೆ ಸುಟ್ಟು ಬೂದಿ ಆಗ್ತೀರಾ’ ಎಂದು ದಲಿತರಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು 1948ರಲ್ಲಿ ಹೇಳಿದ್ದನ್ನೇ ಪ್ರತಿಪಕ್ಷ ಬಿಜೆಪಿ ಮುಂದಿಟ್ಟುಕೊಂಡು, ಜನರು ಅದರಲ್ಲೂ ದಲಿತ ಸಮುದಾಯಗಳ ಜಾಗೃತಿಗೆ ಮುಂದಾಗಿದೆ.
ಬಾಬಾಸಾಹೇಬರ ಹೇಳಿಕೆಯ ವಾಕ್ಯದಡಿ ‘ಡಾ.ಅಂಬೇಡ್ಕರ್ ವಿಚಾರ ಯಾತ್ರೆ’ಯನ್ನು ಸೋಮವಾರ ವಿಜಯಪುರದಿಂದ ಆರಂಭಿಸಲಿದೆ. ಏ.27ರವರೆಗೆ ನಡೆಯಲಿರುವ ಈ ಯಾತ್ರೆಯಡಿ ಜಾಗೃತಿ ಮೂಡಿಸುವ ವಿಚಾರ ಸಂಕಿರಣ, ಕಾರ್ಯಕ್ರಮಗಳು ನಡೆಯಲಿವೆ.
ಜಿಲ್ಲಾ ಮತ್ತು ಮಂಡಲಮಟ್ಟದಲ್ಲಿ ವಿಚಾರ ಸಂಕಿರಣ ಸಂಘಟಿಸಿ, ಡಾ.ಅಂಬೇಡ್ಕರ್‌ಗೆ ಕಾಂಗ್ರೆಸ್ ಪಕ್ಷ ಹೇಗೆಲ್ಲ ಅವಮಾನ ಮಾಡಿತು ತಿಳಿಸಲಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ನಿಮಿತ್ತ ಈ ಯಾತ್ರೆ ನಡೆಯಲಿದೆ ಎಂದು ರಾಜ್ಯ ಬಿಜೆಪಿ ತಿಳಿಸಿದೆ.
ಜಾತಿ ಜನಗಣತಿ ವರದಿ ಬಗ್ಗೆ ಚರ್ಚಿಸಿ ತನ್ನ ನಿಲುವು ಸ್ಪಷ್ಟಪಡಿಸುವುದಕ್ಕಾಗಿ ಪ್ರತಿಪಕ್ಷ ಬಿಜೆಪಿ, ಸೋಮವಾರ ಸಂಜೆ ಮಹತ್ವದ ಸಭೆ ನಡೆಸಲಿದೆ. ಜಾತಿವಾರು ಜನಸಂಖ್ಯೆಗಿಂತ ವರದಿಯಲ್ಲಿನ ವಿವರಗಳ ಮೇಲೆ ಹೆಚ್ಚಿನ ಒತ್ತು ನೀಡಲಿದೆ.
ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ವಿ.ಸೋಮಣ್ಣ, ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಶಾಸಕರು ಮತ್ತಿತರ ಪ್ರಮುಖರು ಭಾಗವಹಿಸಲಿದ್ದಾರೆ.
ಕೆ.ಜಯಪ್ರಕಾಶ್ ಹೆಗ್ಡೆ ನೇತೃತ್ವದ ಹಿಂದುಳಿದ ವರ್ಗಗಳ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ವರದಿ ಸಚಿವ ಸಂಪುಟ ಸಭೆಯಲ್ಲಿ ಮಂಡನೆ, ಸಚಿವರಿಗೆ ಮಾಹಿತಿ, ಪ್ರಮುಖ ಅಂಶಗಳು ಹೊರ ಬಂದ ಮೇಲೂ ಪ್ರತಿಪಕ್ಷ ಅಧಿಕೃತ ನಿರ್ಧಾರ ತಿಳಿಸಲು ವಿಳಂಬ ಮಾಡಿದೆ ಎಂಬ ಟೀಕೆಗೆ ಉತ್ತರಿಸುವ ಸಾಧ್ಯತೆಗಳಿವೆ.