ಕನಕ ಗೌರವಕ್ಕೆ ಡಾ. ಅಕ್ಕಮಹಾದೇವಿ, ಕನಕ ಯುವ ಪುರಸ್ಕಾರಕ್ಕೆ ಡಾ.ರವೀಂದ್ರ ಲಂಜವಾಡಕರ್ ಆಯ್ಕೆ

ಕನಕ ಗೌರವ
Published on

ಬೆಂಗಳೂರು: ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಕೊಡಮಾಡುವ 2025-26ನೆಯ ಸಾಲಿನ ಕನಕ ಗೌರವ ಪುರಸ್ಕಾರವನ್ನು ಮೈಸೂರಿನ ಡಾ. ಅಕ್ಕಮಹಾದೇವಿ ಮತ್ತು ಕನಕ ಯುವ ಪುರಸ್ಕಾರವನ್ನು ಬೀದರ್​​ ಜಿಲ್ಲೆಯ ಡಾ.ರವೀಂದ್ರ ಲಂಜವಾಡಕರ್ ಅವರಿಗೆ ನೀಡುವುದಾಗಿ ಕೇಂದ್ರದ ಅಧ್ಯಕ್ಷ ಕಾ ತ ಚಿಕ್ಕಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ. ಅಕ್ಕಮಹಾದೇವಿ ಪರಿಚಯ..

ಡಾ. ಅಕ್ಕಮಹಾದೇವಿಯವರು ಮೂಲತಃ ಮೈಸೂರಿನವರು, ಮಾನಸ ಗಂಗೋತ್ರಿಯ, ಕುವೆಂಪು ಅಧ್ಯಯನ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸಿದ ಇವರು "ಪುರಂದರ ದಾಸರ ಹಾಗೂ ಅನ್ನಮಾಚಾರ್ಯರ ಕೀರ್ತನೆಗಳ ತೌಲನಿಕ ಅಧ್ಯಯನ ಎಂಬ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಲೇಖನಗಳನ್ನು ಬರೆದಿರುವುದರ ಜೊತೆಗೆ ಆಕಾಶವಾಣಿ-ದೂರದರ್ಶನ ಕಾರ್ಯಕ್ರಮಗಳನ್ನೂ ನೀಡಿದ್ದಾರೆ.

ಮಧ್ಯಕಾಲೀನ ದಾಸ ಸಾಹಿತ್ಯವನ್ನು ಕುರಿತು ದಾಸವರೇಣ್ಯ, ಅನ್ನಮಾಚಾರ್ಯರು, ಗೋಪಾಲದಾಸರ ಕೀರ್ತನೆಗಳು ಹಾಗೂ ಹರಪನಹಳ್ಳಿ ಭೀಮವ್ವನವರ ಸಂಕೀರ್ತನೆಗಳು ಎಂಬ ಗ್ರಂಥಗಳನ್ನು ಸಂಪಾದಿಸಿದ್ದಾರೆ.

ಇವರ ಈ ಎಲ್ಲಾ ಸಾಧನೆಗಳನ್ನು ಗುರುತಿಸಿ, 2025ನೇ ಸಾಲಿನ "ಕನಕ ಗೌರವ ಪುರಸ್ಕಾರ" ಪ್ರಶಸ್ತಿಯನ್ನು ನೀಡಲಾಗಿದೆ. ಈ ಪುರಸ್ಕಾರದ ಮೊತ್ತ 75,000 ರೂಪಾಯಿ ನಗದು, ಇದರೊಂದಿಗೆ ಪ್ರಶಸ್ತಿ, ಪುತ್ಥಳಿ, ಪ್ರಶಸ್ತಿ ಫಲಕ, ಶಾಲು ಫಲತಾಂಬೂಲವನ್ನು ನೀಡಲಾಗುತ್ತದೆ.

ಡಾ. ರವೀಂದ್ರ ಲಂಜವಾಡಕರ್..

ಡಾ. ರವೀಂದ್ರ ಲಂಜವಾಡಕರ್​ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಲಂಜವಾಡ ಗ್ರಾಮದವರು. ವೃತ್ತಿಯಿಂದ ಪ್ರಥಮ ದರ್ಜೆ ಸಹಾಯಕರಾದ ಇವರು ಪ್ರವೃತ್ತಿಯಿಂದ ಸಾಹಿತಿಗಳೂ, ಬರಹಗಾರರೂ ಆಗಿದ್ದಾರೆ. 'ಸಮಾಜಮುಖಿ ದಾಸ ಸಾಹಿತ್ಯ' ಕೃತಿಗೆ ಡಾಕ್ಟರೇಟ್ ಪದವಿ ಪಡೆದಿರುವ ರವೀಂದ್ರ, ಸಮಾಜಮುಖಿ ದಾಸ ಸಾಹಿತ್ಯ, ಮತ್ತು ಕಣಿಯ ಹೇಳಲು ಬಂದೆ (ಕನಕದಾಸರ ಕೀರ್ತನೆಗಳ ವಿಶ್ಲೇಷಣೆ) ಎಂಬ ಕೃತಿಗಳನ್ನು ರಚಿಸಿದ್ದಾರೆ. ಎರಡು ಅಖಿಲ ಕರ್ನಾಟಕ ದಾಸ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿದ್ದಾರೆ.

ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕಯ ಕಾರ್ಯದರ್ಶಿಯಾಗಿರುವ ಡಾ ರವೀಂದ್ರ ಕಳೆದ ಎರಡು ದಶಕಗಳಿಂದ, ದಾಸ ಸಾಹಿತ್ಯ ಸೌರಭ ಹಾಗೂ ಮನೆ ಮನೆಗೆ ದಾಸ ಜ್ಯೋತಿ ಎಂಬ ಶೀರ್ಷಿಕೆಯಡಿ ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇವರಿಗೆ 2025ನೇ ಸಾಲಿನ "ಕನಕ ಯುವ ಪುರಸ್ಕಾರ'ವನ್ನು ನೀಡಲಾಗಿದೆ. ಈ ಪುರಸ್ಕಾರದ ಮೊತ್ತ ರೂ.50,000/-ಗಳು ಇದರೊಂದಿಗೆ ಪ್ರಶಸ್ತಿ, ಪುತ್ಥಳಿ, ಪ್ರಶಸ್ತಿ ಫಲಕ, ಶಾಲು, ಫಲತಾಂಬೂಲವನ್ನು ಒಳಗೊಂಡಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net