ವರದಕ್ಷಿಣೆ ವಿಚಾರಕ್ಕೂ ಮೊದಲು... ಪೊಲೀಸ್​ ತನಿಖೆಯಲ್ಲಿ ಹೊರಬಿತ್ತು ಸ್ಫೋಟಕ ಸಂಗತಿ | Dowry Murder Case

ವಿಜಯವಾಣಿ (17)
Published on

Dowry Murder Case: 36 ಲಕ್ಷ ರೂ. ಹಣ ತಂದುಕೊಡುವಂತೆ ಹೆಂಡತಿಗೆ ಪೀಡಿಸುತ್ತಿದ್ದ ಆರೋಪಿ ಪತಿ ವಿಪಿನ್ ಮತ್ತು ಆತನ ಹೆತ್ತವರು, ಜಗಳ ತಾರಕಕ್ಕೇರುತ್ತಿದ್ದಂತೆ ಯುವತಿಯನ್ನು ಎಳೆದಾಡಿ, ಜೀವಂತವಾಗಿ ಬೆಂಕಿ ಹಚ್ಚಿ ಕೊಂದ ಘಟನೆ ಸದ್ಯ ದೇಶವ್ಯಾಪಿ ದೊಡ್ಡ ಸಂಚಲನ ಹುಟ್ಟುಹಾಕಿದೆ. ಅತ್ತೆ-ಮಾವ, ಗಂಡ ಸೇರಿಕೊಂಡು ಸೊಸೆಯನ್ನು ಇಷ್ಟು ಭೀಕರವಾಗಿ ಹತ್ಯೆಗೈದ ಕೃತ್ಯ ಹಲವರನ್ನು ಭಯದ ಭೀತಿಗೆ ನೂಕಿದೆ. ಸದ್ಯ ಈ ಪ್ರಕರಣದಲ್ಲಿ ಬಂಧಿತರಾಗಿರುವ ಮೃತ ನಿಕ್ಕಿ ಪತಿ, ಅತ್ತೆ-ಮಾವ ಮತ್ತು ವಿಪಿನ್ ಸಹೋದರನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಮಧ್ಯೆ ಮತ್ತೊಂದು ಅಚ್ಚರಿ ಸಂಗತಿ ಹೊರಬಿದ್ದಿದೆ.

ಉತ್ತರ ಪ್ರದೇಶದ ನೋಯ್ಡಾದಲ್ಲಿ ವರದಿಯಾದ ನಿಕ್ಕಿ ಭಾಟಿಯ ಕೊಲೆ ಪ್ರಕರಣಕ್ಕೆ ಸದ್ಯ ಜಾಲತಾಣ ಸೇರಿದಂತೆ ಹಲವೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ಗಂಡ-ಹೆಂಡತಿ ನಡುವೆ ಶುರುವಾದ ಜಗಳ ಬೆಂಕಿ ಹಚ್ಚುವವರೆಗೆ ಏಕೆ ಹೋಯಿತು? ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಎಂಬುದನ್ನು ಇದೀಗ ಉತ್ತರ ಪ್ರದೇಶ ಪೊಲೀಸರು ತಮ್ಮ ತನಿಖೆಯಲ್ಲಿ ಬಹಿರಂಗಪಡಿಸಿದ್ದಾರೆ.

'ದಿ ಹಿಂದೂಸ್ಥಾನ್ ಟೈಮ್ಸ್'​ ವರದಿ ಪ್ರಕಾರ, "ಆಗಸ್ಟ್ 21ರಂದು ಅಂದರೆ, ನಿಕ್ಕಿ ಹತ್ಯೆಯಾದ ದಿನ, ಆಕೆಯ ಸಹೋದರಿ ಕಾಂಚನ್ ಜೊತೆ ಬ್ಯೂಟಿ ಪಾರ್ಲರ್ ಅನ್ನು ಪುನಃ ನಡೆಸಲು ಬಯಸಿದ್ದಕ್ಕಾಗಿ ದಂಪತಿಗಳು ನಡುವೆ ಜಟಾಪಟಿ ಆರಂಭವಾಯಿತು. ಹೆಂಡತಿಯ ಈ ಮಾತನ್ನು ಒಪ್ಪದ ವಿಪಿನ್​, ಅದನ್ನು ತಿರಸ್ಕರಿಸಿದ್ದಾರೆ. ಇಲ್ಲಿಗೆ ಸುಮ್ಮನಾಗದ ನಿಕ್ಕಿ, ಧೈರ್ಯದಿಂದ ನಮ್ಮ ನಿರ್ಧಾರವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಆ ದಿನ ಮಧ್ಯಾಹ್ನ 3.30ರ ಸುಮಾರಿಗೆ, ನಿಕ್ಕಿ ತಾನು ಮತ್ತು ಸಹೋದರಿ ಪಾರ್ಲರ್ ಮತ್ತೆ ತೆರೆಯುವುದಾಗಿ ಗಂಡನಿಗೆ ಹೇಳಿದ್ದೇ ಜಗಳಕ್ಕೆ ಕಾರಣವಾಗಿದೆ" ಎಂದು ಕಸ್ನಾ ಸ್ಟೇಷನ್ ಹೌಸ್ ಅಧಿಕಾರಿ ಧರ್ಮೇಂದ್ರ ಶುಕ್ಲಾ ಹೇಳಿದ್ದಾರೆ.

"ಈ ವೇಳೆ ನಿಕ್ಕಿಗೆ ಗದರಿದ ವಿಪಿನ್​, ಬ್ಯೂಟಿ ಪಾರ್ಲರ್​ ನಡೆಸುವುದು ಮತ್ತು ರೀಲ್ಸ್​ ಮಾಡುವುದಕ್ಕೆ ನಮ್ಮ ಮನೆಯಲ್ಲಿ ಅನುಮತಿ ಇಲ್ಲ ಎಂದಿದ್ದಾನೆ. ಇದಕ್ಕೆ ಒಪ್ಪದ ಪತ್ನಿ ಮೇಲೆ ಕೈಮಾಡಿರುವ ಪತಿ, ಆಕೆಯನ್ನು ಮನಬಂದಂತೆ ಥಳಿಸಿದ್ದಾನೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಾಗಿ ಸುಮಾರು ಎರಡು ಗಂಟೆಗಳ ನಂತರ, ನಿಕ್ಕಿಯ ಸಹೋದರನಿಗೆ ಕಾಂಚನ್ ಫೋನ್​ ಮಾಡಿ, ನಿಕ್ಕಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಿದ್ದಾಳೆ. ವರದಕ್ಷಿಣೆ ವಿವಾದಕ್ಕೆ ನನ್ನ ಸಹೋದರಿಗೆ ಆಕೆಯ ಕುಟುಂಬಸ್ಥರು ಬೆಂಕಿಯಿಟ್ಟಿದ್ದಾರೆ ಎಂದು ಸಂಜೆ 5.30ರ ಆಸುಪಾಸಿಗೆ ಕಾಂಚನ್​ ದೂರವಾಣಿ ಕರೆ ಮಾಡಿರುವುದಾಗಿ ವರದಿ ಹೇಳಿದೆ.

ಏನಿದು ಪ್ರಕರಣ?

ವರದಕ್ಷಿಣೆ ವಿಚಾರವಾಗಿ ಪತಿ ಮತ್ತು ಅತ್ತೆ-ಮಾವನಿಂದಲೇ ಗೃಹಿಣಿಯೊಬ್ಬಳು ಭೀಕರವಾಗಿ ಹತ್ಯೆಯಾದ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. 36 ಲಕ್ಷ ರೂ. ಹಣ ತಂದುಕೊಡುವಂತೆ ಪೀಡಿಸುತ್ತಿದ್ದ ಗಂಡನ ಮನೆಯವರು, ಆಕೆಯನ್ನು ಬೆಂಕಿ ಹಚ್ಚಿ ಭೀಕರವಾಗಿ ಕೊಲೆಗೈದಿರುವುದು ಸದ್ಯ ಸ್ಥಳೀಯರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಈ ಪ್ರಕರಣದ ಆರೋಪಿಗಳಾದ ಆಕೆಯ ಪತಿ ಮತ್ತು ಅತ್ತೆಯನ್ನು ಪೊಲೀಸರು ಬಂಧಿಸಿದ್ದು, ತನಿಖೆಗೆ ಒಳಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net