

Dowry Murder Case: ಹೆಂಡತಿ ಮನೆಯಿಂದ ವರದಕ್ಷಿಣೆ ದಾಹಕ್ಕೆ ದಾಸನಾಗಿದ್ದ ಗಂಡನೊಬ್ಬ ತನ್ನ ಹೆತ್ತವರೊಂದಿಗೆ ಸೇರಿ ಪತ್ನಿಗೆ ಬೆಂಕಿ ಹಚ್ಚಿ ಬರ್ಬರವಾಗಿ ಕೊಲೆಗೈದ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಸಂಭವಿಸಿದೆ. ಮೃತಳನ್ನು ನಿಕ್ಕಿ ಎಂದು ಗುರುತಿಸಲಾಗಿದ್ದು, ಆಕೆಯನ್ನು ಬೆಂಕಿಯಿಟ್ಟು ಕೊಂದ ಪತಿಯನ್ನು ಸದ್ಯ ಪೊಲೀಸರು ಬಂಧಿಸಿ, ತನಿಖೆಗೆ ಒಳಪಡಿಸಿದ್ದಾರೆ.
ಕಳೆದ ಗುರುವಾರ (ಆಗಸ್ಟ್ 21) ಗಂಭೀರ ಸುಟ್ಟು ಗಾಯಗಳಿಂದ ನಿಕ್ಕಿಯನ್ನು ಗ್ರೇಟರ್ ನೋಯ್ಡಾದ ಫೋರ್ಟೀಸ್ ಆಸ್ಪತ್ರೆಗೆ ಕರೆತಂದ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿದೆ. ಇಂದು (ಆ.24) ಬೆಳಗ್ಗೆ ಯುವತಿಯ ತಂದೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಅಳಲು ತೋಡಿಕೊಂಡಿದ್ದು, ನನ್ನ ಮಗಳನ್ನು ಸುಟ್ಟು ಕೊಂದ ಪಾಪಿಗಳನ್ನು ಎನ್ಕೌಂಟರ್ ಮಾಡಿ ಕೊಲ್ಲಬೇಕು. ಅವರಿಗೂ ಅವಳಿಗೆ ಬಂದ ಸ್ಥಿತಿಯೇ ಬರಬೇಕು ಎಂದು ಕಣ್ಣೀರಿಟ್ಟರು. ಹೀಗಂದ ಕೆಲವೇ ಗಂಟೆಗಳಲ್ಲಿ ಪೊಲೀಸರು ಮೃತ ನಿಕ್ಕಿಯ ಪತಿ ವಿಪಿನ್ನನ್ನು ಬಂಧಿಸಿದ ಖಾಕಿ, ತಮ್ಮಿಂದ ತಪ್ಪಿಸಿಕೊಳ್ಳಲು ಯತ್ನಿಸಿದವನ ಕಾಲಿಗೆ ಗುಂಡು ಹಾರಿಸಿದರು.
ಕಾಲಿಗೆ ಬಿದ್ದ ಗುಂಡೇಟಿನ ನೋವಿನಲ್ಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಪಿನ್ಗೆ ಪೊಲೀಸರು ಸರಣಿ ಪ್ರಶ್ನೆಗಳನ್ನು ಕೇಳಿದರು. ಈ ವೇಳೆ ಉತ್ತರಿಸಿದ ಆರೋಪಿ, "ಈ ಕೃತ್ಯದಲ್ಲಿ ನನಗೆ ಯಾವುದೇ ಪಶ್ಚಾತಾಪವಿಲ್ಲ. ನಾನು ಆಕೆಗೆ ಬೆಂಕಿ ಹಚ್ಚಲಿಲ್ಲ. ಅವಳೇ ಆತ್ಮಹತ್ಯೆ ಮಾಡಿಕೊಂಡಿದ್ದು. ಗಂಡ-ಹೆಂಡತಿ ಮಧ್ಯೆ ಇಂತಹ ಜಗಳಗಳು ನಡೆಯುತ್ತಲೇ ಇರುತ್ತದೆ. ಇದು ತೀರ ಸಾಮಾನ್ಯ. ನಾನವಳನ್ನು ಕೊಂದಿಲ್ಲ" ಎಂದು ಹೇಳಿರುವುದಾಗಿ 'ಪಿಟಿಐ' ವರದಿ ಉಲ್ಲೇಖಿಸಿದೆ.
ವರದಕ್ಷಿಣೆ ವಿಚಾರವಾಗಿ ಪತಿ ಮತ್ತು ಅತ್ತೆ-ಮಾವನಿಂದಲೇ ನಿಕ್ಕಿ (28) ಎಂಬ ಯುವತಿ ಹತ್ಯೆಯಾಗಿದ್ದಾಳೆ. 36 ಲಕ್ಷ ರೂ. ಹಣ ತಂದುಕೊಡುವಂತೆ ಪೀಡಿಸುತ್ತಿದ್ದ ಗಂಡನ ಮನೆಯವರು, ಆಕೆಯನ್ನು ಬೆಂಕಿ ಹಚ್ಚಿ ಭೀಕರವಾಗಿ ಕೊಲೆಗೈದಿರುವುದು ಬೆಳಕಿಗೆ ಬಂದಿದೆ. ತನ್ನ ಸಹೋದರಿ ಬೆಂಕಿಯಲ್ಲಿ ಬೇಯುತ್ತಿದ್ದರೂ ಉಳಿಸಲು ಯತ್ನಿಸದ ತಂಗಿ, ಕಿಡಿಗೇಡಿಗಳ ಕೃತ್ಯವನ್ನು ದಾಖಲೆಯಾಗಿ ತೋರಿಸಲು ವಿಡಿಯೋ ಮಾಡಿಕೊಂಡಿದ್ದಾರೆ. ಈ ಭಯಾನಕ ಕೃತ್ಯವನ್ನು ಮೃತ ಯುವತಿಯ 6 ವರ್ಷದ ಪುಟ್ಟ ಮಗು ಕಣ್ಣಾರೆ ಕಂಡು ಮಾಧ್ಯಮಗಳ ಮುಂದೆ ಹಂಚಿಕೊಂಡಿದೆ. ಇನ್ನು ಮಗಳನ್ನು ಕಳೆದುಕೊಂಡ ತಂದೆ, ಆರೋಪಿಗಳನ್ನು ಎನ್ಕೌಂಟರ್ ಮಾಡಿ ಬಿಸಾಡಿ ಎಂದು ಯುಪಿ ಸಿಎಂಗೆ ಮನವಿ ಮಾಡಿದ್ದಾರೆ,(ಏಜೆನ್ಸೀಸ್).