ವರದಕ್ಷಿಣೆ ಪೀಡಕನಿಗೆ ಪೊಲೀಸರಿಂದ ಗುಂಡೇಟು

Untitled design (2)
Published on

ನವದೆಹಲಿ: ವರದಕ್ಷಿಣೆಗಾಗಿ ಬೇಡಿಕೆ ಇಟ್ಟು ಪತ್ನಿಗೆ ಬೆಂಕಿ ಹಚ್ಚಿ ಕೊಂದಿದ್ದ ನೋಯ್ಡಾದ ವ್ಯಕ್ತಿಯ ಕಾಲಿಗೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ. ವಿಪಿನ್ ಭಾಟಿ ಬಂಧಿತ ಆರೋಪಿ. ಈತ ತನ್ನ ಪತ್ನಿ ನಿಕ್ಕಿ ಭಾಟಿಗೆ ಕಿರುಕುಳ ನೀಡಿ ಬೆಂಕಿ ಹಚ್ಚಿದ್ದ. ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದ ಆಕೆ ದೆಹಲಿಯ ಸಫ್ದರ್​ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ವಿಪಿನ್ ತನ್ನ ಪತ್ನಿಗೆ ವರದಕ್ಷಿಣಿ ಕಿರುಕುಳ ನೀಡಿ ಥಳಿಸಿ, ಬೆಂಕಿ ಹಚ್ಚಿರುವ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸರು ವಿಪಿನ್​ನನ್ನು ವಶಕ್ಕೆ ಪಡೆದು ನಿಕ್ಕಿಯ ಹತ್ಯೆ ಮಾಡಲು ಬಳಸಿದ್ದ ಇಂಧನವನ್ನು ವಶಕ್ಕೆ ಪಡೆಯಲು ಮನೆಗೆ ಕರೆದೊಯ್ದಿದ್ದರು.

ಆ ವೇಳೆ ಆತ ಪೊಲೀಸರ ಮೇಲೆ ದಾಳಿ ನಡೆಸಿ ಓಡಲು ಯತ್ನಿಸಿದಾಗ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗಳು ಬ್ಯೂಟಿ ಪಾರ್ಲರ್ ನಡೆಸಿ ತನ್ನ ಮಗನನ್ನು ಬೆಳೆಸುತ್ತಿದ್ದಳು. ಆದರೆ ಆಕೆಯ ಗಂಡನ ಮನೆಯವರು ಕಿರುಕುಳ ನೀಡಿ ಹತ್ಯೆ ಮಾಡಿದ್ದಾರೆ. ಮಗಳನ್ನು ಹತ್ಯೆ ಮಾಡಿದ ವಿಪಿನ್ ನನ್ನು ಎನ್​ಕೌಂಟರ್ ಮಾಡಬೇಕು ಎಂದು ನಿಕ್ಕಿಯ ತಂದೆ ಭಿಕಾರಿ ಸಿಂಗ್ ಪೈಲಾ ಒತ್ತಾಯಿಸಿದ್ದರು. ಎನ್​ಕೌಂಟರ್ ಬಳಿಕ ಪ್ರತಿಕ್ರಿಯೆ ನೀಡಿರುವ ಅವರು ಪೊಲೀಸರ ಕ್ರಮ ನನಗೆ ಖುಷಿ ತಂದಿದೆ. ಆದರೆ ಇಂತಹ ವ್ಯಕ್ತಿಯ ಎದೆಗೆ ಗುಂಡಿಟ್ಟು ಕೊಲ್ಲಬೇಕು, ತಲೆಮರೆಸಿಕೊಂಡಿರುವವರನ್ನೂ ಬಂಧಿಸಿ ಗಲ್ಲಿಗೇರಿಸಬೇಕು ಎಂದು ತಿಳಿಸಿದ್ದಾರೆ.

ಅತ್ತೆ ಬಂಧನ

ನಿಕ್ಕಿ ಸಾವಿನ ಬಳಿಕ ತಲೆಮರೆಸಿಕೊಂಡಿದ್ದ ವಿಪಿನ್​ ತಾಯಿ ದಯಾವತಿಯನ್ನು ಭಾನುವಾರ ಮಧ್ಯಾಹ್ನ ಹರಿಯಾಣದ ಸಿರ್ಸಾ ಜಿಲ್ಲೆಯ ಕಾಸ್ನಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ ಎಂದು ಗೌತಮ ಬುದ್ಧ ನಗರ ಪೊಲೀಸರು ತಿಳಿಸಿದ್ದಾರೆ.

36 ಲಕ್ಷ ರೂ. ವರದಕ್ಷಿಣೆಗೆ ಒತ್ತಾಯ

2016ರಲ್ಲಿ ನಿಕ್ಕಿಯ ವಿವಾಹದ ಸಂದರ್ಭದಲ್ಲಿ ವಿಪಿನ್​ಗೆ ಟಾಪ್ ಮಾಡಲ್ ಸ್ಕಾರ್ಪಿಯೋ ಕಾರು, ಬುಲೆಟ್ ಬೈಕ್, ಚಿನ್ನ, ನಗದು ಕೊಡಲಾಗಿತ್ತು. ಕರ್ವಾ ಚೌತ್ ಸಂದರ್ಭದಲ್ಲೂ ಉಡುಗೊರೆಗಳನ್ನು ನೀಡಲಾಗುತ್ತಿತ್ತು. ಆದರೆ ನಮ್ಮ ಅತ್ತೆ ಮಾವ ಇದರಿಂದ ತೃಪ್ತರಾಗಿರಲಿಲ್ಲ. ವಿಪಿನ್ ಮನೆಯವರು ಇನ್ನು 36 ಲಕ್ಷ ರೂ. ವರದಕ್ಷಿಣೆ ತರುವಂತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ವಿಪಿನ್ ಸಹೋದರ ರೋಹಿತ್​ನನ್ನು ವಿವಾಹವಾಗಿರುವ ನಿಕ್ಕಿ ಸಹೋದರಿ ಕಂಚನ್ ತಿಳಿಸಿದ್ದಾರೆ. ನಾವು ಬ್ಯೂಟಿ ಪಾರ್ಲರ್ ನಡೆಸುತ್ತಿದ್ದೆವು. ಇದು ಅತ್ತೆ ಮಾವನಿಗೆ ಇಷ್ಟವಿರಲಿಲ್ಲ. ಅವರು ನಾವು ಸಂಪಾದಿಸಿದ್ದನ್ನೆಲ್ಲಾ ಪಡೆದುಕೊಳ್ಳುತ್ತಿದ್ದರು. ನಮಗೆ ನಿರಂತರವಾಗಿ ಕಿರುಕುಳ ಕೊಡುತ್ತಿದ್ದರು. ನಿಕ್ಕಿಯನ್ನು ಥಳಿಸಿ ಬೆಂಕಿ ಹಚ್ಚಿದ ದಿನ ನಾನೇ ವಿಡಿಯೋ ರೆಕಾರ್ಡ್ ಮಾಡಿದ್ದೆ. ವಿಡಿಯೋ ಇಲ್ಲದಿದ್ದರೆ ಆಕೆಗೆ ಏನಾಯಿತು ಎಂಬ ಸತ್ಯ ಹೊರಗೆ ಬರುತ್ತಿರಲಿಲ್ಲ. ನನ್ನ ಸಹೋದರಿಯನ್ನು ರಕ್ಷಿಸಲು ಪ್ರಯತ್ನಿಸಿದೆ, ಆದರೆ ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ಕಂಚನ್ ಘಟನೆಯ ವಿವರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net