

ನವದೆಹಲಿ: Dobule Yummy ಎಂದರೆ ಇದಪ್ಪಾ. ಒಂದೇ ಮಂಟಪದಲ್ಲಿ ಪ್ರೇಮಿಕೆ ಜತೆಗೆ ಹಾಗೂ ಪಾಲಕರು ನೋಡಿ ನಿಗದಿಪಡಿಸಿದ ಯುವತಿಯೊಂದಿಗೆ ಯುವಕನೊಬ್ಬ ಸಪ್ತಪದಿ ತುಳಿದಿದ್ದಾನೆ.
ಮಧ್ಯಪ್ರದೇಶದ ಬೇತುಲ್ ಸಮೀಪದ ಕೇರಿಯಾ ಎಂಬ ಗ್ರಾಮದಲ್ಲಿ ಈ ವಿವಾಹ ಸಂಪನ್ನವಾಗಿದೆ. ಸಂದೀಪ್ ಉಯಿಕೆ ಎಂಬಾತ ಭೋಪಾಲ್ನಲ್ಲಿ ಓದುತ್ತಿದ್ದಾಗ ಹೊಶಂಗಾಬಾದ್ನ ಯುವತಿಯನ್ನು ಪ್ರೇಮಿಸುತ್ತಿದ್ದ. ಇವರ ಪ್ರೇಮದಾಟ ಮುಂದುವರಿದಿರುವಂತೆ ಆತನ ಪಾಲಕರು ಕೊಯಲಾರಿ ಎಂಬ ಗ್ರಾಮದ ಯುವತಿಯೊಂದಿಗೆ ವಿವಾಹ ನಿಷ್ಕರ್ಷಿಸಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ವಿಷಯ ಗ್ರಾಮದ ಪಂಚಾಯ್ತಿ ಕಟ್ಟೆಗೆ ಹೋಯಿತು. ಪಂಚಾಯ್ತಿಗೆ ಸಂದೀಪ್ ಅಲ್ಲದೆ ಇನ್ನಿಬ್ಬರು ಯುವತಿಯರ ಮನೆಯವರನ್ನೂ ಕರೆಸಲಾಯಿತು. ಸಾಕಷ್ಟು ಚರ್ಚೆಯ ಬಳಿಕ ಇಬ್ಬರು ಯುವತಿಯರನ್ನು ಸಂದೀಪ್ ವಿವಾಹವಾಗಬೇಕು ಎಂಬ ನಿರ್ಣಯಕ್ಕೆ ಬರಲಾಯಿತು. ಇದಕ್ಕೆ ಯುವತಿಯರಿಬ್ಬರೂ ಒಪ್ಪಿಕೊಂಡರು ಎನ್ನಲಾಗಿದೆ.
ಪಂಚಾಯ್ತಿ ನಿರ್ಣಯದಂತೆ ಕೇರಿಯಾ ಗ್ರಾಮದಲ್ಲಿ ವಿವಾಹ ಕಾರ್ಯಕ್ರಮ ಆಯೋಜಿಸಲ್ಪಟ್ಟಿತು. ಗ್ರಾಮಸ್ಥರೆಲ್ಲರ ಸಮ್ಮುಖದಲ್ಲಿ ಸಂದೀಪ್ ಇಬ್ಬರೂ ಯುವತಿಯರಿಗೂ ಒಂದೇ ಮುಹೂರ್ತದಲ್ಲಿ ತಾಳಿ ಕಟ್ಟಿದ್ದಲ್ಲದೆ ಸಪ್ತಪದಿಯನ್ನೂ ತುಳಿದ.
ಈ ಮಾಹಿತಿ ಈಗ ಜಿಲ್ಲಾಡಳಿತಕ್ಕೆ ತಲುಪಿದ್ದು, ಇಬ್ಬಿಬ್ಬರು ಯುವತಿಯರನ್ನು ಹೇಗೆ ಮದುವೆಯಾಗಲು ಸಾಧ್ಯ ಎಂಬ ಪ್ರಶ್ನೆ ಎತ್ತಿದೆ. ಈ ಬಗ್ಗೆ ತನಿಖೆ ನಡೆಸಲು ನಿರ್ಧರಿಸಿದೆ. ಅಷ್ಟೇ ಅಲ್ಲ, ಕೋವಿಡ್ನ ಈ ಸಂದರ್ಭದಲ್ಲಿ ಪೂರ್ವಾನುಮತಿ ಇಲ್ಲದೆ ವಿವಾಹ ಸಮಾರಂಭ ಆಯೋಜಿಸಿದ್ದ ಬಗ್ಗೆಯೂ ಘೋಡಾಡೋಂಗ್ರಿಯ ತಹಸೀಲ್ದಾರ್ ಮೋನಿಕಾ ವಿಶ್ವಕರ್ಮ ಪ್ರಶ್ನೆ ಎತ್ತಿದ್ದು, ಈ ಬಗ್ಗೆಯೂ ತನಿಖೆಗೆ ಮುಂದಾಗಿದ್ದಾರೆ. ಹೀಗಾಗಿ ಈ ಮದುವೆ ಯುವಕನ ಪಾಲಿಗೆ Double Yummy ಆಗುವ ಬದಲು Double Whammy ಆಗಿ ಮಾರ್ಪಟ್ಟಿದೆ.