ಶೋಷಿತ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ದುಪ್ಪಟ್ಟು

IMG_20241107_131427
Published on

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಾದ ಐ.ಐ.ಟಿ /ಐ.ಐ.ಎಂ/ಐ.ಐ.ಎಸ್.ಸಿ/ಎನ್.ಐ.ಟಿ  ಮುಂತಾದ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಒಂದು ಬಾರಿ ನೀಡುವ ಪ್ರೋತ್ಸಾಹಧನವನ್ನು ಒಂದು ಲಕ್ಷ ರೂ.ಗಳಿಂದ  ಎರಡು ಲಕ್ಷ ರೂ.ಗಳಿಗೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿ, ಆಸಕ್ತ ಹಾಗೂ ವಿದ್ಯಾರ್ಥಿಗಳ ಸಂತಸ ಹೆಚ್ಚಿಸಿದೆ.

ಪಿ.ಯು.ಸಿಯಲ್ಲಿ ಶೇಕಡ 95 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ನೀಟ್ ಮೂಲಕ ಸರ್ಕಾರಿ ಕೋಟಾದಡಿ ಪ್ರವೇಶ ಪಡೆಯದೆ, ಆಡಳಿತ ಮಂಡಳಿಯ ಕೋಟಾದಡಿ ಎಂ.ಬಿ.ಬಿ.ಎಸ್.ಗೆ ಪ್ರವೇಶ ಪಡೆದಿರುವ ಪ್ರತಿಭಾನ್ವಿತ ಪರಿಶಿಷ್ಟ ಜಾತಿ ವಿದ್ಯಾಥಿಗಳಿಗೆ ಮೊದಲನೇ ವರ್ಷದಲ್ಲಿ  25.00 ಲಕ್ಷ ರೂ.ಗಳನ್ನು ಕಾಲೇಜು ಶುಲ್ಕವಾಗಿ ಪಾವತಿಸಲಾಗುತ್ತದೆ.

ಸದರಿ ವಿದ್ಯಾರ್ಥಿಯು ಎಂಬಿಬಿಎಸ್ ಮೊದಲನೇ ವರ್ಷದ ಪರೀಕ್ಷೆಯಲ್ಲಿ ಕನಿಷ್ಟ ಶೇಕಡ 60  ಅಂಕಗಳನ್ನು ಪಡೆದು ತೇರ್ಗಡೆಯಾದಲ್ಲಿ, ಪುನಃ 25.00 ಲಕ್ಷ ರೂ.ಗಳ ಪ್ರೋತ್ಸಾಹಧನವನ್ನು ಮಂಜೂರು ಮಾಡುವ ಅಂಶವನ್ನು ಸೇರ್ಪಡೆ ಮಾಡಿ ಸಮಾಜ ಕಲ್ಯಾಣ ಇಲಾಖೆ ಆದೇಶಿಸಿದೆ.

ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಬೇಕೆಂಬ ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳಿಗೆ ದುಪ್ಪಟ್ಟು ಪ್ರೋತ್ಸಾಹ ಮೊತ್ತ ಆಸರೆಯಾಗಲಿದೆ. ಹಾಗೆಯೇ ಪ್ರತಿಭಾನ್ವಿತ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ವೈದ್ಯರಾಗಬೇಕೆಂಬ ಕನಸು ರಾಜ್ಯ ಸರ್ಕಾರದ ಈ ನಿರ್ಧಾರದಿಂದ ನನಸಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net