ಹೋರಾಟದ ದೊರೆಗೆ ಹುಟ್ಟೂರಿನ ಬಗ್ಗೆ ಕುಂದಿರಲಿಲ್ಲ ಪ್ರೀತಿ : ಹಾರೋಹಳ್ಳಿ ಬಗ್ಗೆ ವಿಶೇಷ ಅಭಿಮಾನ ಜಿಲ್ಲೆಯಲ್ಲಿ ನಡೆದ ವಿವಿಧ ಹೋರಾಟಗಳಲ್ಲಿ ಭಾಗಿ

26 rama HSD
Published on

ರಾಮನಗರ : ತನ್ನೂರು ಬಿಟ್ಟು ದಶಕಗಳೇ ಕಳೆದಿದ್ದರೂ ಹುಟ್ಟೂರಿನ ಬಗೆಗಿನ ಪ್ರೀತಿ ಮಾತ್ರ ಎಂದೂ ಕುಂದಿರಲಿಲ್ಲ. ನಾನು ಹಾರೋಹಳ್ಳಿಯವನು, ರಾಮನಗರ ಜಿಲ್ಲೆಯವರು ಎಂದರೆ ಸಾಕು ಅವರ ಮುಖದಲ್ಲಿ ನಗು ಹಾಗೇ ಹೊರ ಹೊಮ್ಮುತ್ತಿತ್ತು. ಏಕೆ ಬಂದಿದ್ದು, ಊರಲ್ಲಿ ಎಲ್ಲರೂ ಕ್ಷೇಮವೇ ಎನ್ನುವ ಪ್ರಶ್ನೆ ಅವರಿಂದ ಬಂದೇ ಬರುತ್ತಿತ್ತು....

ಹೌದು, ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಎಚ್.ಎಸ್. ದೊರೆಸ್ವಾಮಿ ಅವರ ಬಗ್ಗೆ ಹಾರೋಹಳ್ಳಿಯ ಜನ ನೆನಪಿಸಿಕೊಳ್ಳುವ ಸಂಗತಿಯಿದು. ಅಂದಿನ ಮೈಸೂರು ರಾಜ್ಯದ, ಬೆಂಗಳೂರು ಜಿಲ್ಲೆಯ ಹಾರೋಹಳ್ಳಿಯಲ್ಲಿ ಜನಿಸಿದ ಎಚ್.ಎಸ್. ದೊರೆಸ್ವಾಮಿ ಅವರು, ತಮ್ಮ ಕೊನೆ ಉಸಿರು ಇರುವವರೆಗೂ ತನ್ನೂರಿನ ಮೇಲಿನ ಅಭಿಮಾನವನ್ನು ಎಂದೂ ಕಳೆದುಕೊಂಡಿರಲಿಲ್ಲ.

1918ರ ಏಪ್ರಿಲ್ 10ರಂದು ಶ್ರೀನಿವಾಸ್ ಅಯ್ಯರ್ ಅವರ ಪುತ್ರನಾಗಿ ಜನಿಸಿದ ದೊರೆಸ್ವಾಮಿ ಅವರು, ಹಾರೋಹಳ್ಳಿಯಲ್ಲಿ ಕಳೆದದ್ದು ಕೆಲವೇ ವರ್ಷ. ಆದರೂ ಹಾರೋಹಳ್ಳಿ ಮಾತ್ರವಲ್ಲದೇ, ಜಿಲ್ಲೆಯ ಯಾವುದೇ ಭಾಗದ ವ್ಯಕ್ತಿ ಹೋರಾಟ, ಸಮಾಜಮುಖಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದರೆ ಸಾಕು ಇಲ್ಲ ಎನ್ನದೆ ಪಾಲ್ಗೊಳ್ಳುವ ಮೂಲಕ ತಮ್ಮ ಜಿಲ್ಲೆಯ ಬಗೆಗಿನ ಪ್ರೀತಿಯನ್ನು ತೋರ್ಪಡಿಸುತ್ತಿದ್ದರು.

ಹಲವಾರು ಹೋರಾಟಗಳಲ್ಲಿ ಭಾಗಿ: ದೊರೆಸ್ವಾಮಿ ಅವರು ಸ್ವಾತಂತ್ರ್ಯ ನಂತರ ಹಲವಾರು ಸಮಾಜಮುಖಿ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅದೇ ರೀತಿ ರಾಮನಗರ ಜಿಲ್ಲೆಯ ಹೋರಾಟಗಳಲ್ಲೂ ದೊರೆಸ್ವಾಮಿ ಅವರ ಪಾತ್ರ ಹಿರಿದು. ಜಿಲ್ಲೆಯಲ್ಲಿ ಪ್ರಮುಖವಾಗಿ ಭೂಮಿತಾಯಿ ಹೋರಾಟ ಸಮಿತಿ ನೈಸ್ ಕಾರಿಡಾರ್ ವಿರುದ್ಧ ಹಮ್ಮಿಕೊಂಡಿದ್ದ ಹೋರಾಟದ ಮುಂಚೂಣಿಯಲ್ಲಿದ್ದರು. ರೈತ ಸಂಘದೊಂದಿಗೆ ಸೇರಿಕೊಂಡು ನಡೆದ ಹೋರಾಟದ ಲವಾಗಿ ಹಲವಾರು ರೈತರು ಇಂದಿಗೂ ನೆಮ್ಮದಿಯ ನಿಟ್ಟಿಸಿರುವ ಬಿಡುವಂತೆ ಆಗಿದೆ. ಇನ್ನು 1999-2000ರ ಸುಮಾರಿಗೆ ನಡೆದ ಮದ್ಯಪಾನ ವಿರೋಧಿ ಹೋರಾಟದಲ್ಲೂ ಜಿಲ್ಲೆಯಲ್ಲಿ ಪಾಲ್ಗೊಂಡಿದ್ದು ಎಚ್.ಎಸ್. ದೊರೆಸ್ವಾಮಿ ಅವರ ವಿಶೇಷ . ಇದರ ಜತೆಗೆ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ, ರೈತಪರ ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡಿದ್ದರು.

ಹಲಸಿನ ಹಣ್ಣು ಪ್ರೀತಿ : ವಯಸ್ಸು ನೂರಾಗಿದ್ದರೂ, ದೊರೆಸ್ವಾಮಿ ಅವರಿಗೆ ತಾವು ಬಾಲ್ಯದ ನೆನಪುಗಳು ಎಂದೂ ಮಾಸಿರಲಿಲ್ಲ. ತಮ್ಮೂರು ಹಾರೋಹಳ್ಳಿಯಿಂದ ಹೋದವರನ್ನು ಅವರ ಹೆಸರಿನಿಂದಲೇ ಕರೆಯು ತ್ತಿದ್ದುದ್ದು ಅವರ ವಿಶೇಷ. ಇನ್ನು ಹಲಸಿನ ಹಣ್ಣಿನ ಮೇಲೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಈಗಿನ ಜಿಲ್ಲಾ ಕಸಾಪ ಅಧ್ಯಕ್ಷರಾಗಿರುವ ಸಿಂ.ಲಿಂ. ನಾಗರಾಜು ಅವರು ದೊರೆಸ್ವಾಮಿ ಅವರೊಟ್ಟಿಗೆ ಉತ್ತಮ ಒಡನಾಟ ಹೊಂದಿದ್ದರು. ಪ್ರತಿವರ್ಷ ಅವರ ಹುಟ್ಟು ಹಬ್ಬಕ್ಕೆ ಬೆಂಗಳೂರಿನ ನಿವಾಸಕ್ಕೆ ಹೋಗುತ್ತಿದ್ದ ಸಿಂ.ಲಿಂ. ನಾಗರಾಜು ಹಲಸಿನ ಹಣ್ಣನ್ನು ಒಯ್ಯುವುದನ್ನು ಮರೆಯುತ್ತಿರಲಿಲ್ಲ.

ಕಸಾಯಿಖಾನೆ ನಿಂತಿತು : ಹಾರೋಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಆಧುನಿಕ ಕಸಾಯಿಖಾನೆಗೆ ಸರ್ಕಾರ ಅನುಮತಿ ನೀಡಿತ್ತು. ಆದರೆ ಇದಕ್ಕೆ ಸ್ಥಳೀಯರ ವಿರೋಧವಿತ್ತು. ಇದರ ವಿರುದ್ಧ ನಡೆದ ಹೋರಾಟಕ್ಕೆ ನೈತಿಕವಾಗಿ ಬೆಂಬಲಕ್ಕೆ ನಿಂತವರು ಎಚ್.ಎಸ್.ದೊರೆಸ್ವಾಮಿ. 10 ದಿನ ಹೋರಾಟದಲ್ಲಿ ಪಾಲ್ಗೊಂಡು, ಕಸಾಯಿ ಖಾನೆ ತಲೆ ಎತ್ತದಂತೆ ಮಾಡಿದ್ದರು.

ಊರಲ್ಲಿ ಯಾರೂ ಇಲ್ಲ : ದೊರೆಸ್ವಾಮಿ ಅವರು ಬಾಲ್ಯದಲ್ಲಿಯೇ ಬೆಂಗಳೂರು ಸೇರಿದರು. ಇವರ ದೂರದ ಸಂಬಂಧಿಗಳ ಹೊರತು ಯಾರು ಇಲ್ಲ ಎನ್ನುತ್ತಾರೆ ಸ್ಥಳೀಯರು. ಹಾರೋಹಳ್ಳಿಯ ಬ್ರಾಹ್ಮಣರ ಬೀದಿಯಲ್ಲಿ ಇದ್ದ ದೊರೆಸ್ವಾಮಿ ಅವರು ಜನಿಸಿದ ಹಳೇ ಮನೆ ಈಗ ಇಲ್ಲ. ಆದರೆ, ಇವರಿಗೆ ನೂರು ವರ್ಷ ತುಂಬಿದ್ಧ ಹಿನ್ನೆಲೆಯಲ್ಲಿ ಹಾರೋಹಳ್ಳಿಯಲ್ಲಿ ಸ್ಥಳೀಯರು ಶತಮಾನೋತ್ಸವ ಆಚರಿಸಿದ್ದರು.

ದೊರೆಸ್ವಾಮಿ ಅವರ ಅಗಲಿಕೆ ತುಂಬಾ ನೋವು ತಂದಿದೆ. ಅಭಿನವ ಗಾಂಧಿಯನ್ನು ಕಳೆದುಕೊಂಡಿದ್ದೇವೆ. ಇದರಿಂದ ಇಂದಿನ ಯುವ ಸಮುದಾಯಕ್ಕೆ ದೇಶಕ್ಕೆ ದೊರೆತ ಸ್ವಾತಂತ್ರ್ಯದ ಮಹತ್ವದ ಬಗ್ಗೆ ತಿಳಿಸಿಕೊಡುವ ಕೊಂಡಿ ಕಳಚಿದಂತೆ ಆಗಿದೆ. ಸಿಂ.ಲಿಂ.ನಾಗರಾಜು ಕಸಾಪ ಜಿಲ್ಲಾಧ್ಯಕ್ಷರು, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net