

ಮುಂಬೈ: ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (NCP) ಅಧ್ಯಕ್ಷ ಶರದ್ ಪವಾರ್ ಅವರ ಶಾಲಾ ಪ್ರಮಾಣಪತ್ರ ವೈರಲ್ ಆಗಿತ್ತು. ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಶರದ್, "ನನ್ನ ಜಾತಿಯನ್ನು ಮರೆಮಾಡಲು ಬಯಸುವುದಿಲ್ಲ, ಅದನ್ನು ಬಳಸಿಕೊಂಡು ಎಂದಿಗೂ ರಾಜಕೀಯ ಮಾಡಿಲ್ಲ" ಎಂದು ಹೇಳಿದರು.
ಶರದ್ ಪವಾರ್ ಇತರ ಹಿಂದುಳಿದ ವರ್ಗಗಳ (OBC) ವರ್ಗಕ್ಕೆ ಸೇರಿದವರು ಎಂದು ತೋರಿಸುವ ಉದ್ದೇಶಿತ ಪ್ರಮಾಣಪತ್ರವು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಇದರ ಬೆನ್ನಲ್ಲೇ ಎನ್‌ಸಿಪಿ ಮುಖ್ಯಸ್ಥರಿಂದ ಈ ಹೇಳಿಕೆ ಹೊರಬಂದಿದೆ. ವೈರಲ್ ಆದ ಪ್ರಮಾಣಪತ್ರ ಕುರಿತು ಪ್ರತಿಕ್ರಿಯೆ ನೀಡಿದ ಶರದ್ ಪವಾರ್ ಪುತ್ರಿ ಪುತ್ರಿ ಸುಪ್ರಿಯಾ ಸುಳೆ, ಈ ದಾಖಲೆಯನ್ನು ವಜಾಗೊಳಿಸಿದ್ದು, ಇದು ನಕಲಿ ಎಂದು ಕರೆದಿದ್ದಾರೆ.
ಒಬಿಸಿ ಸಮುದಾಯದ ಬಗ್ಗೆ ನನಗೆ ಗೌರವವಿದೆ ಎಂದ ಪವಾರ್, ತಾವು ಜನಿಸಿದ ಜಾತಿಯನ್ನು ಮರೆಮಾಡಲು ಬಯಸುವುದಿಲ್ಲ ಎಂದು ಹೇಳಿದರು. "ಜಗತ್ತಿಗೆ ನನ್ನ ಜಾತಿ ಗೊತ್ತಿದೆ. ನಾನು ಜಾತಿಯ ಆಧಾರದ ಮೇಲೆ ರಾಜಕೀಯ ಮಾಡಿಲ್ಲ, ಹಾಗೆ ಮಾಡುವುದೂ ಇಲ್ಲ. ಸಮುದಾಯದ ಸಮಸ್ಯೆಗಳನ್ನು ಪರಿಹರಿಸಲು ನಾನು ಶ್ರಮಿಸುತ್ತೇನೆ" ಎಂದು ಹೇಳಿದರು.
ಇದನ್ನೂ ಓದಿ: ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಸಿಎಂ ಸಿದ್ದರಾಮಯ್ಯ
ಇನ್ನು ಮರಾಠ ಮೀಸಲಾತಿ ಬಗ್ಗೆ ಮಾತನಾಡಿದ ಎನ್‌ಸಿಪಿ ಮುಖ್ಯಸ್ಥರು, "ಮೀಸಲಾತಿ ನೀಡುವ ಅಧಿಕಾರವು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವ್ಯಾಪ್ತಿಯಲ್ಲಿದೆ. ಮರಾಠರಿಗೆ ಮೀಸಲಾತಿ ಕುರಿತು ಯುವ ಪೀಳಿಗೆಯ ಭಾವನೆ ತೀವ್ರವಾಗಿದ್ದು, ಅದನ್ನು ನಿರ್ಲಕ್ಷಿಸುವಂತಿಲ್ಲ. ಆದರೆ ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರ ರಾಜ್ಯ ಮತ್ತು ಕೇಂದ್ರಕ್ಕೆ ಇದೆ" ಎಂದರು,(ಏಜೆನ್ಸೀಸ್).