

ಶಿವಮೊಗ್ಗ: ಕಳೆದ 10-15 ವರ್ಷಗಳಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗಲು ಅನೇಕ ಬಾರಿ ಕಾರಣವಾಗಿದ್ದು ಫ್ಲೆಕ್ಸ್ ಹಾಗೂ ಬ್ಯಾನರ್‌ಗಳು. ಹೀಗಾಗಿ ಇದನ್ನು ಮುದ್ರಿಸುವವರು ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು.
ಗೌರಿ, ಗಣೇಶ ಹಾಗೂ ಈದ್‌ಮಿಲಾದ್ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲೆಯ ಫ್ಲೆಕ್ಸ್, ಬ್ಯಾನರ್ ಹಾಗೂ ಮುದ್ರಣಾಲಯಗಳ ಮಾಲೀಕರ ಸಭೆ ನಡೆಸಿ ಮಾತನಾಡಿ, ಅನಧಿಕೃತವಾಗಿ ಫ್ಲೆಕ್ಸ್ ಮತ್ತು ಬ್ಯಾನರ್‌ಗಳ ಅಳವಡಿಕೆ, ಇನ್ನೊಬ್ಬರ ಭಾವನೆಗಳಿಗೆ ಧಕ್ಕೆ ತರುವ ಪ್ರಚೋದನಕಾರಿ ಬರಹ, ಆಕ್ಷೇಪಾರ್ಹ ಚಿತ್ರಗಳ ಅಳವಡಿಕೆ ಯಾವ ಕಾರಣಕ್ಕೂ ಸರಿಯಲ್ಲ ಎಂದು ಎಚ್ಚರಿಸಿದರು.
ಸಂಬಂಧಿಸಿದ ಇಲಾಖೆ ಅನುಮತಿ ಪಡೆಯದೆ ಫ್ಲೆಕ್ಸ್, ಬ್ಯಾನರ್ ಅಳವಡಿಸುವುದು, ಅವುಗಳ ಮೇಲೆ ಮುದ್ರಕರ ಹೆಸರು, ಎಷ್ಟು ಹಾಗೂ ಎಲ್ಲಿ ಮುದ್ರಣ ಮಾಡಲಾಗಿದೆ ಎಂಬುದನ್ನು ಮುದ್ರಿಸದೇ ಇರುವುದನ್ನು ನಮ್ಮ ಇಲಾಖೆ ಕಟ್ಟುನಿಟ್ಟಾಗಿ ಗಮನಿಸಿ ಕ್ರಮ ಜರುಗಿಸಲಿದೆ ಎಂದರು.
ಪೊಲೀಸ್ ಉಪ ವಿಭಾಗವಾರು ವಾಟ್ಸ್‌ಆ್ಯಪ್ ಗುಂಪುಗಳನ್ನು ಮಾಡಲಾಗಿದೆ. ಇದರಲ್ಲಿ ಮುದ್ರಕರು ಮಾಹಿತಿ ನೀಡಿ ಮುದ್ರಣಕ್ಕೆ ಅನುಮತಿ ಪಡೆದುಕೊಳ್ಳಬೇಕು. ನಮ್ಮ ಇಲಾಖೆ ಗಮನಕ್ಕೆ ತರದೆ ಮುದ್ರಣ ಮಾಡಿಕೊಟ್ಟು ಕಾನೂನು ಉಲ್ಲಂಘಿಸಿದರೆ ಕ್ರಮ ನಿಶ್ಚಿತ ಎಂದು ಎಚ್ಚರಿಸಿದರು.
ಯಾವುದೇ ಸಮಸ್ಯೆ ಉಂಟಾದರೆ, ಅವಶ್ಯವಿದ್ದರೆ ಮುದ್ರಕರನ್ನು ಸುಲಭವಾಗಿ ಹಾಗೂ ಶೀಘ್ರವಾಗಿ ತಲುಪುವ ಉದ್ದೇಶದಿಂದ ಫ್ಲೆಕ್ಸ್, ಬ್ಯಾನರ್‌ಗಳ ಮೇಲೆ ಮುದ್ರಕರ ಸಂಪೂರ್ಣ ವಿವರ ಅಳವಡಿಸುವುದು ಅಗತ್ಯ. ಕಿಡಿಗೇಡಿತನ ಮಾಡುವವರು ಎಲ್ಲೆಡೆ ಇರುತ್ತಾರೆ. ಯಾವುದೋ ವಿವಾದಾತ್ಮಕ, ಕಾನೂನು ಬಾಹಿರ ವಿಚಾರಗಳನ್ನು ಪ್ರಿಂಟ್ ಮಾಡಿಸಲು ಕೆಲವರು ಮುಂದಾಗುತ್ತಾರೆ. ಅವರ ಬಗ್ಗೆ ಎಚ್ಚರವಿರಲಿ ಎಂದು ಹೇಳಿದರು.
ಎಎಸ್‌ಪಿ ಎ.ಜಿ.ಕಾರಿಯಪ್ಪ, ಸಾಗರ ಉಪವಿಭಾಗ ಡಿವೈಎಸ್‌ಪಿ ಡಾ. ಎನ್.ಜೆ.ಬೆನಕಪ್ರಸಾದ್, ಶಿವಮೊಗ್ಗ ಡಿವೈಎಸ್‌ಪಿ ಬಾಬು ಆಂಜನಪ್ಪ, ತೀರ್ಥಹಳ್ಳಿ ಡಿವೈಎಸ್‌ಪಿ ಅರವಿಂದ ಕಲಗುಚ್ಚಿ, ಶಿಕಾರಿಪುರ ಡಿವೈಎಸ್‌ಪಿ ಕೆ.ಇ.ಕೇಶವ, ಭದ್ರಾವತಿ ಡಿವೈಎಸ್‌ಪಿ ನಾಗರಾಜ್ ಇತರರಿದ್ದರು.