

ಬೆಂಗಳೂರು: ಪ್ರೌಢಶಾಲಾ, ಪದವಿ ಪೂರ್ವ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಕನಿಷ್ಠ 33 ಅಂಕ ನಿಗದಿ ಮಾಡಿರುವ ಬಗ್ಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಪತ್ರ ಬರೆದಿರುವ ಅವರು, ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆ ಅವಿಸ್ಮರಣೀಯ ಮತ್ತು ವಿಶೇಷ ಘಟ್ಟವಾಗಿರುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆ, ಧೈರ್ಯ, ಜ್ಞಾಪಕಶಕ್ತಿ, ಕಲಿಕೆಯ ನೈಪುಣ್ಯತೆ, ವಿಷಯಗಳ ಮನನ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರುತ್ತದೆ.
ವಿದ್ಯಾರ್ಥಿಗಳಿಗೆ ಈ ರೀತಿಯ ಅನುಭವ ಮತ್ತು ಅನುಕೂಲತೆ ನೀಡುವಂತಹ ಪರೀಕ್ಷೆಗಳು ಮತ್ತು ಅಂತಹ ಪರೀಕ್ಷೆಗಳಲ್ಲಿ ಉತ್ತೀರ್ಣ ಹೊಂದಲು ಈ ಹಿಂದಿನಿಂದ ನಿಗದಿಪಡಿಸಿರುವಂತೆ ಶೇ.35 ಅಂಕಗಳು ಸಮಂಜಸವಾಗಿವೆ ಎಂದು ಖೇದ ವ್ಯಕ್ತಪಡಿಸಿದ್ದಾರೆ. ಮೊದಲು ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತುಂಬಬೇಕು. ಶಾಲಾ-ಕಾಲೇಜುಗಳಲ್ಲಿ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಒದಗಿಸುವುದು ಸೇರಿ ಶಾಲಾ ಶಿಕ್ಷಣದಲ್ಲೂ ಆಮೂಲಾಗ್ರ ಬದಲಾವಣೆ ನಿರೀಕ್ಷಿಸಬಹುದಾಗಿರುತ್ತದೆ ಎಂದು ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.