ಒಕ್ಕಲಿಗರು ರಾಜಕಾರಣಕ್ಕೆ ಸೀಮಿತವಾಗದಿರಿ

klr okkaliga
Published on

ಕೋಲಾರ: ಜಿಲ್ಲೆಯ ಒಕ್ಕಲಿಗರು ಅರಿವಿನ ಮತ್ತು ಆರ್ಥಿಕ ಪರಿಸ್ಥಿತಿಯ ಕೊರತೆಯಿಂದಾಗಿ ಉದ್ಯಮ ಕ್ಷೇತ್ರದಿಂದ ಹಿಂದಿದ್ದಾರೆ. ಕೃಷಿಗೆ ಸೀಮಿತವಾಗದೆ ಉದ್ಯಮ ಕ್ಷೇತ್ರವನ್ನೂ ಆಯ್ಕೆ ಮಾಡಿಕೊಂಡು ಬೇರೆಯವರಿಗೂ ಉದ್ಯೋಗ ನೀಡುವಂತಾಗಬೇಕು ಎಂದು ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ ತಿಳಿಸಿದರು.

ನಗರ ಹೊರವಲಯದ ಒಲಿವಿಯಾ ರೆಸಾರ್ಟ್​ನಲ್ಲಿ ಭಾನುವಾರ ಉದ್ಯಮಿ ಒಕ್ಕಲಿಗ ಫಸ್ಟ್​ ಸರ್ಕಲ್​ ಸೊಸೈಟಿಯ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಜಿಲ್ಲೆಯ ಜನ ಶ್ರಮಜೀವಿಗಳು ರೈತರು ಉದ್ಯಮಿಗಳಾದರೆ ಸಾಲದು ಬದಲಾವಣೆಗೆ ತಕ್ಕಂತೆ ನಾವು ಬದಲಾಗಿ ಸ್ಪರ್ಧೆ ಎದುರಿಸಲು ಸನ್ನದ್ಧರಾಗಬೇಕು. ವಿವಿಧ ಕ್ಷೇತ್ರಗಳಲ್ಲಿ ಉದ್ಯಮ ಮಾಡಿ ಬೇರೆ ಜನರಿಗೆ ಉದ್ಯೋಗ ನೀಡುವ ಉದ್ಯಮಿಗಳಾಗಿ ಮುಂದಿನ ಪೀಳಿಗೆಗೆ ಸಹಕಾರಿಯಾಗುವಂತೆ ಮಾಡಬೇಕು ಎಂದರು.

ರಾಜ್ಯ ಜಲಸಾರಿಗೆ ಮಂಡಳಿಯ ಸಿಇಒ ಜಯರಾಂ ಮಾತನಾಡಿ, ರಾಯಪುರ, ಗಂಗರ ಅರಸರ ಕಾಲದಿಂದಲೂ ಒಕ್ಕಲಿಗರು ಒಕ್ಕಲುತನದ ಜತೆಗೆ ಸಾಮ್ರಾಜ್ಯ ಕಟ್ಟಿ ಆಳಿದ್ದಾರೆ. ನಾವುಗಳು ಬೇಸಾಯದ ಜತೆಗೆ ಉದ್ಯಮ ಕ್ಷೇತ್ರಕ್ಕೂ ವಿಸ್ತರಿಸಿಕೊಳ್ಳಬೇಕು. ಆ ಮೂಲಕ ನಾಡಿಗೆ ಅನ್ನ ನೀಡುವ ಒಕ್ಕಲಿಗ ಉದ್ಯೋಗ ನೀಡುವ ಉದ್ಯಮಿಯಾಗಬೇಕು ಎಂದರು.

ಸಮುದಾಯವು ಕಡಿಮೆ ಇರುವ ದಕ್ಷಿಣ ಕನ್ನಡ ಜಿಲ್ಲೆಗೆ ಹೋಲಿಕೆ ಮಾಡಿದರೆ ಇಲ್ಲಿ ಕೇವಲ ಶೇ.1 ಉದ್ಯಮದಲ್ಲಿದ್ದಾರೆ. ಇದರಲ್ಲಿ ರಾಜಕಾರಣಿಗಳ ಹೊಣೆಗಾರಿಕೆ ಹೆಚ್ಚಾಗಬೇಕು. ಸಮುದಾಯದಲ್ಲಿ ಪರಸ್ಪರ ಒಗ್ಗಟ್ಟಿನಿಂದ ಅರಿವು ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಕೈಜೋಡಿಸಿ ಜತೆಯಲ್ಲಿ ಕರೆದುಕೊಂಡು ಹೋಗಬೇಕು ಎಂದರು.

ಎಂಎಲ್ಸಿ ಎಂ.ಎಲ್​ ಅನಿಲ್​ಕುಮಾರ್​ ಮಾತನಾಡಿ, ಜಿಲ್ಲೆಯ ಜನ ಕೃಷಿಯ ಜತೆಗೆ ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಆದರೆ ಉದ್ಯಮದಲ್ಲಿ ಅರಿವಿನ ಕೊರತೆಯಿಂದ ಕೈಗಾರಿಕೆಗಳು ಮಾಡಿ ಕೈ ಸುಟ್ಟುಕೊಂಡಿದ್ದಾರೆ. ಯುವಕರಿಗೆ ಮಾರ್ಗದರ್ಶನ ನೀಡಿದರೆ ಭವಿಷ್ಯದ ಉದ್ಯಮಗಳಾಗಲಿದ್ದು, ಬೇರೆಯವರಿಗೂ ಉದ್ಯೋಗ ನೀಡುವಂತಾಗುತ್ತಾರೆ ಎಂದರು.

ಫಸ್ಟ್​ ಸರ್ಕಲ್​ ಸೊಸೈಟಿ ಜಿಲ್ಲಾ ಗೌರವ ಅಧ್ಯಕ್ಷ ಸಿಎಂಆರ್​ ಶ್ರೀನಾಥ್​ ಮಾತನಾಡಿ, ಮನುಷ್ಯನ ಜೀವನಕ್ಕೆ ಉದ್ಯೋಗ ಮುಖ್ಯವಾಗಿದೆ. ಒಕ್ಕಲಿಗರ ಉಪ ಜಾತಿಗಳಿಂದ ಸಮುದಾಯಕ್ಕೆ ಮಾರಕವಾಗಿದೆ. ನಮ್ಮಲ್ಲಿಯೇ ಒಗ್ಗಟ್ಟಿ ಇಲ್ಲ. ಉಪಜಾತಿಗಳ ಮನಸ್ಥಿತಿಯಿಂದ ಹೊರಬಂದು ನಾವು ಎಲ್ಲರೂ ಒಂದೇ ಎಂಬ ರೀತಿಯಲ್ಲಿ ಉದ್ಯಮ ಮಾಡಿ ಬೇರೆಯವರನ್ನು ಬೆಳೆಸುವ ಗುಣ ಬರಬೇಕು ಎಂದರು.

ಜಿಪಂ ಮಾಜಿ ಅಧ್ಯಕ್ಷೆ ಚೌಡೇಶ್ವರಿ ರಾಮು, ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ಕೆ.ವಿ ಶಂಕರಪ್ಪ, ಐಎಎಸ್​ ಅಧಿಕಾರಿ ಕೆ.ಆರ್​.ನಂದಿನಿ, ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ, ಉದ್ಯಮಿ ಡೆಕ್ಕನ್​ ರಾಮಕೃಷ್ಣಪ್ಪ, ವೈದ್ಯ ಕೃಷ್ಣಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net