

ಬೀರೂರು: ಮಕ್ಕಳು ಅಂಕಗಳಿಸುವುದಕ್ಕೆ ಮಾತ್ರ ಸೀಮಿತವಾಗದೆ ಸಂಸ್ಕಾರ, ಸಂಸ್ಕೃತಿ, ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಗಂಗಾಧರ್ ಹೇಳಿದರು.
ಹುಲ್ಲೇಹಳ್ಳಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಬೀರೂರು ವಲಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಕಲೆಗಳಾದ ಸಣ್ಣಾಟ, ದೊಡ್ಡಾಟ, ಕೋಲಾಟ, ಡೊಳ್ಳಿನ ಹಾಡು, ಜಾನಪದ ಗೀತೆ ಮುಂತಾದ ಕಲೆಗಳನ್ನು ಪಠ್ಯದ ಜತೆಗೆ ವಿಶೇಷ ಕಲೊಕೋತ್ಸವಗಳನ್ನು ಆಯೋಜಿಸಿ ಕಲಿಸುವ ಮೂಲಕ ಮಕ್ಕಳಿಗೆ ಗ್ರಾಮೀಣ ಸೊಗಡಿನ ಕಲೆ ಸಂಸ್ಕೃತಿ ಕಲಿಸಲು ಮುಂದಾಗಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಶೇಖರಪ್ಪ ಮಾತನಾಡಿ, ಪ್ರತಿಯೊಬ್ಬರೂ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಕೈಜೋಡಿಸಬೇಕು. ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಮಕ್ಕಳಿಗೆ ಮಾನಸಿಕ ಉಲ್ಲಾಸ ನೀಡುವ ಜತೆಗೆ ದೈಹಿಕ ಆರೋಗ್ಯ ಹೆಚ್ಚಿಸಲು ಸಹಕರಿಸುತ್ತದೆ ಎಂದರು.
ಹುಲ್ಲೇಹಳ್ಳಿ ಗ್ರಾಪಂ ಉಪಾಧ್ಯಕ್ಷ ಎಂ.ಲಕ್ಷ್ಮಣಪ್ಪ ಮಾತನಾಡಿ, ಪ್ರತಿಭಾ ಕಾರಂಜಿಯಲ್ಲಿ ಜಾನಪದ ಸಂಸ್ಕೃತಿಗೆ ಹೆಚ್ಚು ಒತ್ತು ನೀಡಬೇಕು. ಪ್ರತಿಯೊಂದು ಮಗುವಿನಲ್ಲೂ ವಿಭಿನ್ನ ಪ್ರತಿಭೆಗಳು ಅಡಗಿರುತ್ತದೆ. ಅದನ್ನು ಪಾಲಕರು ಮತ್ತು ಶಿಕ್ಷಕರು ಬಾಲ್ಯದಲ್ಲಿಯೇ ಗುರುತಿಸಿ ಆ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು ಎಂದರು.