ಸಂಪಾದಕೀಯ: ನ್ಯೂನತೆಗಳು ನುಸುಳದಿರಲಿ

edite
Published on

ವಾಹನ ಚಾಲನಾ ತರಬೇತಿ ಮತ್ತು ಪರವಾನಿಗೆಗೆ ಸಂಬಂಧಿಸಿದಂತೆ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರೂಪಿಸಿರುವ ಹೊಸ ನಿಯಮಗಳು ಜೂ. 1ರಿಂದ ಅನುಷ್ಠಾನಕ್ಕೆ ಬರಲಿವೆ. ಚಾಲನಾ ಪರವಾನಿಗೆ ಪಡೆಯಲು ಇಚ್ಛಿಸುವವರು ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ನಡೆಸುವ ‘ವಾಹನಚಾಲನೆ ಪರೀಕ್ಷೆ’ಯಲ್ಲಿ ತೇರ್ಗಡೆಯಾಗುವುದು ಕಡ್ಡಾಯವಾಗಿತ್ತು. ಇದೀಗ ಪರಿಷ್ಕೃತ ನಿಯಮಗಳ ಪ್ರಕಾರ, ಇಂತಹ ಪರೀಕ್ಷೆಯನ್ನು ನಡೆಸುವ, ಪ್ರಮಾಣಪತ್ರ- ಪರವಾನಿಗೆ ನೀಡುವ ಅಧಿಕಾರವನ್ನು ಅಧಿಕೃತ ಖಾಸಗಿ ಡ್ರೖೆವಿಂಗ್ ತರಬೇತಿ ಶಾಲೆಗಳಿಗೂ ನೀಡಲಾಗಿದೆ. ಈ ಕಾರ್ಯವನ್ನು ವಿಕೇಂದ್ರೀಕರಣ ಮಾಡಿರುವುದು ಸ್ವಾಗತಾರ್ಹ. ಆದರೆ ಯಾವುದೇ ಕಾರಣಕ್ಕೂ ಇದರಲ್ಲಿ ಕಳಪೆ ತರಬೇತಿ, ಸ್ವಜನಪಕ್ಷಪಾತ, ಭ್ರಷ್ಟಾಚಾರ ನಡೆಯದಂತೆ ಸರ್ಕಾರ ಎಚ್ಚರ ವಹಿಸಬೇಕಾದ ಗುರುತರ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ.

‘ರೋಡ್ ಆಕ್ಸಿಡೆಂಟ್ಸ್ ಇನ್ ಇಂಡಿಯಾ 2022’ ವರದಿ ಪ್ರಕಾರ, ಕಲಿಕಾ ಪರವಾನಿಗೆ (ಲರ್ನರ್ಸ್ ಲೈಸೆನ್ಸ್) ಹೊಂದಿರುವ ಅಥವಾ ಲೈಸೆನ್ಸೇ ಇಲ್ಲದ ಚಾಲಕರು ದೇಶದಲ್ಲಿ ಶೇ. 12ರಷ್ಟು ಅಪಘಾತಗಳಿಗೆ ಕಾರಣರಾಗಿದ್ದಾರೆ. ವಿಪರ್ಯಾಸವೆಂದರೆ ಅಧಿಕೃತ ಲೈಸೆನ್ಸ್ ಹೊಂದಿರುವ ಚಾಲಕರು ಶೇ. 69ರಷ್ಟು ಅಪಘಾತಗಳಿಗೆ ಕಾರಣರಾಗಿದ್ದಾರೆ. ಇದು ದೇಶದಲ್ಲಿನ ಚಾಲನಾ ತರಬೇತಿಯ ಬಗ್ಗೆ ಮತ್ತು ಆರ್​ಟಿಒಗಳು ನಡೆಸುವ ಪರೀಕ್ಷೆಯ ಗುಣಮಟ್ಟದ ಬಗ್ಗೆ ಸಂಶಯವನ್ನು ಹುಟ್ಟುಹಾಕುತ್ತದೆ. ಇದೇ ಕಾರಣದಿಂದ, ಈ ಪರೀಕ್ಷೆ ನಡೆಸುವ ಮತ್ತು ಲೈಸೆನ್ಸ್ ನೀಡುವ ಅಧಿಕಾರವನ್ನು ಖಾಸಗಿ ಡ್ರೖೆವಿಂಗ್ ಸ್ಕೂಲ್​ಗಳಿಗೆ ನೀಡಲು ಇಲಾಖೆ ಮುಂದಾಗಿದೆ.

ಇದೇ ವೇಳೆ, ಡ್ರೖೆವಿಂಗ್ ಸ್ಕೂಲ್​ಗಳಿಗೆ ಅಧಿಕೃತ ಮಾನ್ಯತೆ ನೀಡುವ ವಿಷಯದಲ್ಲಿ ಇಲಾಖೆ ಸಾಕಷ್ಟು ಎಚ್ಚರ ವಹಿಸಿದೆ. ದ್ವಿಚಕ್ರವಾಹನ ಮತ್ತು ತ್ರಿಚಕ್ರ ವಾಹನಗಳ ಟೆಸ್ಟ್ ನಡೆಸಲು 1 ಎಕರೆ, ನಾಲ್ಕು ಚಕ್ರಗಳ ವಾಹನ ಟೆಸ್ಟ್ ನಡೆಸಲು 2 ಎಕರೆ ಭೂಮಿಯನ್ನು ಈ ಸ್ಕೂಲ್​ಗಳು ಹೊಂದಿರಬೇಕು. ಕಾರು, ಆಟೋರಿಕ್ಷಾ, ದ್ವಿಚಕ್ರವಾಹನದಂತಹ ಹಗುರ ವಾಹನಗಳ ಲೈಸೆನ್ಸ್​ಗೆ ಥಿಯರಿ ಮತ್ತು ಪ್ರ್ಯಾಕ್ಟಿಕಲ್ ಸೇರಿ ಕನಿಷ್ಠ 4 ವಾರಗಳ ತರಬೇತಿ ನೀಡಬೇಕು. ಟ್ರಕ್, ಬಸ್​ನಂತಹ ಭಾರಿ ವಾಹನಗಳ ಲೈಸೆನ್ಸ್ ನೀಡಲು ಕನಿಷ್ಠ 6 ವಾರಗಳ ತರಬೇತಿ ಕೊಡಬೇಕು. ಈಗಿರುವ ಪದ್ಧತಿ ಹೀಗೆ ಇಲ್ಲ. ಎಲ್ಲೋ, ಯಾರಿಂದಲೋ ವಾಹನ ಚಾಲನೆ ಕಲಿತು, ವಾಮಮಾರ್ಗಗಳಿಂದ ಲೈಸೆನ್ಸ್ ಪಡೆದು ರಸ್ತೆಗಿಳಿಯುವ ಚಾಲಕರು ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ.

ಇದು ನಿಲ್ಲಬೇಕೆಂದರೆ, ತರಬೇತಿ ಪ್ರಕ್ರಿಯೆಯಲ್ಲಿ ನ್ಯೂನತೆಗಳು ಇಲ್ಲದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕಾಗುತ್ತದೆ. ಟೆಸ್ಟ್ ನಡೆಯುವ ಸ್ಥಳದಲ್ಲಿ ಕ್ಲೋಸ್ಡ್ ಸರ್ಕ್ಯೂಟ್ (ಸಿಸಿ) ಕ್ಯಾಮರಾಗಳ ಅಳವಡಿಕೆ, ಸ್ಥಳಕ್ಕೆ ಅಧಿಕಾರಿಗಳ ಅನಿರೀಕ್ಷಿತ ಭೇಟಿ, ತಪ್ಪಿತಸ್ಥ ಸ್ಕೂಲ್​ಗಳಿಗೆ ಭಾರಿ ಮೊತ್ತದ ದಂಡ ಮುಂತಾದ ಕ್ರಮಗಳಿಂದ ಚಾಲನಾ ತರಬೇತಿ ಮತ್ತು ಲೈಸೆನ್ಸಿಂಗ್ ಟೆಸ್ಟ್ ವಿಷಯದಲ್ಲಿ ಗುಣಮಟ್ಟ ತಂದುಕೊಳ್ಳಲು ಸಾಧ್ಯ. ನಿಗದಿತ ಅವಧಿಯ ತರಬೇತಿ ಪಡೆಯದೇ ಟೆಸ್ಟ್​ಗೆ ಹಾಜರಾಗುವುದಕ್ಕೆ ಎಲ್ಲಿಯೂ ಆಸ್ಪದವಿರಬಾರದು. ರಸ್ತೆ ಸುರಕ್ಷಾ ವಿಷಯದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ತಿಳಿಸಿಕೊಡುವುದಕ್ಕಾಗಿ ಡ್ರೖೆವಿಂಗ್ ಸ್ಕೂಲ್​ಗಳ ತರಬೇತುದಾರರಿಗೂ ಇಲಾಖೆ ಆಗಾಗ ಪುನರ್ಮನನ ತರಗತಿಗಳನ್ನು ಆಯೋಜಿಸಬೇಕು. ಈ ಎಲ್ಲ ಕ್ರಮಗಳಿಂದ ಮಾತ್ರ ರಸ್ತೆಗಳನ್ನು ವಾಹನಚಾಲನೆಗೆ ಸುರಕ್ಷಿತ ಸ್ಥಳಗಳನ್ನಾಗಿಸಲು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net