

ಸಾಗರ: ಆರ್ಥಿಕ ಸಮಸ್ಯೆ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂಬ ಉದ್ದೇಶ ಇಟ್ಟುಕೊಂಡು ಪ್ರತಿಭಾವಂತ ಮಕ್ಕಳಿಗೆ ಶೈಕ್ಷಣಿಕ ಪರಿಕರ ಪೂರೈಸುವುದು ಪುಣ್ಯದ ಕೆಲಸ ಎಂದು ಜೋಷಿ ಫೌಂಡೇಶನ್ ಸಂಸ್ಥಾಪಕ ಅಬಸೆ ದಿನೇಶಕುಮಾರ್ ಜೋಷಿ ಹೇಳಿದರು.
ಸಾಗರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಸಾಗರ ಶಾಖೆ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೋಷಿ ಫೌಂಡೇಶನ್‌ನಿಂದ ಪತ್ರಕರ್ತರ ಮತ್ತು ಪತ್ರಿಕಾ ವಿತರಕರ ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಿಸಿ ಮಾತನಾಡಿದರು.
ಬದಲಾದ ದಿನಗಳಲ್ಲಿ ಶಿಕ್ಷಣದ ವೆಚ್ಚ ಹೊಂದಿಸುವುದು ಸವಾಲು ಎನಿಸುವುದಿಲ್ಲ. ವಿದ್ಯಾರ್ಥಿ ಪ್ರತಿಭಾವಂತನಾಗಿದ್ದರೆ ಅವನಿಗೆ ಸಮಾಜವೇ ನೆರವು ನೀಡುತ್ತದೆ. ಜೋಷಿ ಫೌಂಡೇಶನ್ ಸಾಮಾಜಿಕ, ಶಿಕ್ಷಣ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಆರ್ಥಿಕ ಮುಗ್ಗಟ್ಟಿನಿಂದ ಮಕ್ಕಳ ಶೈಕ್ಷಣಿಕ ವ್ಯವಸ್ಥೆ ಕುಂಠಿತ ಆಗಬಾರದು ಎಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು.
ಎಲ್ಲ ಪತ್ರಕರ್ತರು ಆರ್ಥಿಕವಾಗಿ ಸ್ಥಿತಿವಂತರಲ್ಲ. ಅವರ ಮಕ್ಕಳು ಉತ್ತಮ ಶಿಕ್ಷಣ ಪಡೆಯುವಂತೆ ಆಗಬೇಕು. ಈ ಹಿನ್ನೆಲೆಯಲ್ಲಿ ಫೌಂಡೇಶನ್ ಅಲ್ಪ ಸಹಕಾರ ನೀಡುತ್ತಿದೆ. ಪತ್ರಕರ್ತರು ಮತ್ತು ಪತ್ರಿಕಾ ವಿತರಕರಿಗೆ ಸಹಕಾರ ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್ ಮಾತನಾಡಿ, ಪತ್ರಕರ್ತರು ಎಷ್ಟೇ ಸಂಕಷ್ಟದಲ್ಲಿದ್ದರೂ ಸ್ವಾಭಿಮಾನ ಬಿಟ್ಟು ಬದುಕುವುದಿಲ್ಲ. ಆರ್ಥಿಕ ಸಮಸ್ಯೆ ಇದ್ದರೂ ಕೈಚಾಚುವ ಪ್ರವೃತ್ತಿ ಪತ್ರಕರ್ತರದ್ದಲ್ಲ. ಸವಾಲುಗಳ ನಡುವೆ ಬದುಕು ಕಟ್ಟಿಕೊಂಡ ಪತ್ರಕರ್ತರ ಸಂಕಷ್ಟ ಗುರುತಿಸಿ ಜೋಷಿ ಫೌಂಡೇಶನ್ ಶೈಕ್ಷಣಿಕ ಉದ್ದೇಶಕ್ಕೆ ನೋಟ್‌ಬುಕ್ ವಿತರಿಸುತ್ತಿರುವುದು ಶ್ಲಾಘನೀಯ ಎಂದರು.
ಪತ್ರಕರ್ತ ಮಾ.ಸ.ನಂಜುಂಡಸ್ವಾಮಿ ಮಾತನಾಡಿ, ನಾವು ಶಿಕ್ಷಣ ಪಡೆಯುವಾಗ ಪಟ್ಟ ಕಷ್ಟವನ್ನು ನಮ್ಮ ಮಕ್ಕಳು ಪಡಬಾರದು ಎನ್ನುವ ಉದ್ದೇಶಕ್ಕೆ ದಿನೇಶ್ ಜೋಷಿ ಅವರು ತಾವು ಗಳಿಸಿದ್ದರಲ್ಲಿ ಒಂದು ಭಾಗವನ್ನು ಸಾಮಾಜಿಕ ಚಟುವಟಿಕೆಗಳಿಗೆ ವಿನಿಯೋಗಿಸುವ ಸಾರ್ಥಕ ಕೆಲಸ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು. ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಿ.ನಾಗೇಶ್, ಸಂಘದ ಕಾರ್ಯದರ್ಶಿ ಮಹೇಶ್ ಹೆಗಡೆ, ಎಂ.ಜಿ.ರಾಘವನ್, ಲೋಕೇಶಕುಮಾರ್ ಇತರರಿದ್ದರು.