ಗೋವಾದಲ್ಲಿ ನ್ಯೂ ಇಯರ್ ಪಾರ್ಟಿ ಮಾಡಬೇಕು ಎನ್ನುವವರಿಗೆ ಇದು ಬೇಸರದ ವಿಷಯ!

Untitled-1
Published on: 

ಪಣಜಿ: ಏನೇ ಆಗಲಿ.. ಈ ಸಲ ಗೋವಾದಲ್ಲಿ ನ್ಯೂ ಇಯರ್ ಪಾರ್ಟಿ ಮಾಡಬೇಕು. ಅಲ್ಲಿನ ಕ್ಯಾಸಿನೋಗೆ ಹೋಗಬೇಕು, ಕುಣಿಯಬೇಕು, ಕುಡಿಯಬೇಕು ಎಂದು ಆಸೆ ಇಟ್ಟುಕೊಂಡಿರುವವರಿಗಂತೂ ಇದು ಬೇಸರದ ವಿಷಯ.

ಏಕೆಂದರೆ ಕರೊನಾ ಹಾವಳಿ ಹಿನ್ನೆಲೆಯಲ್ಲಿ ಅಲ್ಲಿ ಈ ಸಲ ಕ್ಯಾಸಿನೋ ಆರಂಭವಾಗುವ ಕುರಿತು ಸಂದೇಹಗಳಿವೆ. ಒಂದುವೇಳೆ ಕ್ಯಾಸಿನೋ ಆರಂಭಿಸುವುದಿದ್ದರೂ ಬೇಡ ಎಂಬ ಒತ್ತಾಯವೂ ಇದೆ.

ಮತ್ತೊಂದೆಡೆ ರಾಜ್ಯದಲ್ಲಿ ಕರೊನಾ ಸೋಂಕು ಹೆಚ್ಚಾಗಿದೆ. ಅದು ನಿಯಂತ್ರಣಕ್ಕೆ ಬರುವವರೆಗೂ ಕ್ಯಾಸಿನೋ ಮರು ಆರಂಭಕ್ಕೆ ಅವಕಾಶ ನೀಡಬಾರದು ಎಂಬುದಾಗಿ ಅಲ್ಲಿನ ಯುವ ಕಾಂಗ್ರೆಸ್ ಒತ್ತಾಯಿಸಿದೆ. ಗೋವಾ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಗೋವಾ ಯುವ ಕಾಂಗ್ರೆಸ್ ಅಧ್ಯಕ್ಷ ವರದ್ ಮರ್ಡೋಳ್ಕರ್ ಇಂಥದ್ದೊಂದು ಆಗ್ರಹ ವ್ಯಕ್ತಪಡಿಸಿ ಮನವಿ ಸಲ್ಲಿಸಿದ್ದಾರೆ.

ಕ್ಯಾಸಿನೋ ಆರಂಭವಾದರೆ ಕರೊನಾ ಪಿಡುಗಿಗೆ ಬಹಿರಂಗ ಆಹ್ವಾನ ಕೊಟ್ಟಂತೆ. ಹೀಗಾಗಿ ಸರ್ಕಾರ ಜನಸಾಮಾನ್ಯರ ಜೀವದ ಜತೆ ಚೆಲ್ಲಾಟವಾಡಬಾರದು. ಕರೊನಾ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಕ್ಯಾಸಿನೋ ಮರು ಆರಂಭಿಸಲು ಅನುಮತಿ ನೀಡಬಾರದು ಎಂದು ಅವರು ಕೋರಿಕೊಂಡಿದ್ದಾರೆ. ನ. 1ರಿಂದ ಕ್ಯಾಸಿನೋಗಳನ್ನು ಮತ್ತೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಈ ಮನವಿ ಮಾಡಿಕೊಂಡಿದೆ. (ಏಜೆನ್ಸೀಸ್​)