

ಶಿವಮೊಗ್ಗ: ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ. 4 ಮೀಸಲಾತಿ ನೀಡುವ ರಾಜ್ಯ ಸರ್ಕಾರದ ವಿಧೇಯಕಕ್ಕೆ ಒಪ್ಪಿಗೆ ನೀಡದಂತೆ ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಪ್ರಮುಖರು ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸರ್ಕಾರದ ಕಾಮಗಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಕೆಟಿಟಿಪಿ ಕಾಯ್ದೆಯಲ್ಲಿನ ತಿದ್ದುಪಡಿಯು ಎರಡು ಕೋಟಿ.ರೂ.ವರೆಗೆ ಸಿವಿಲ್ ಗುತ್ತಿಗೆ ಮತ್ತು ಒಂದು ಕೋಟಿ ರೂ.ವರೆಗೆ ಸರಕು ಮತ್ತು ಸೇವಾ ಗುತ್ತಿಗೆಗಳಿಗೆ ಶೇ. 4 ಮೀಸಲಾತಿಗೆ ಅನುಮತಿ ನೀಡುವುದಾಗಿದೆ.
ಸಂವಿಧಾನದ ಪರಿಚ್ಛೇದ-15ರಲ್ಲಿ ನಿರ್ದಿಷ್ಟವಾಗಿ ರಾಜ್ಯವು ಧರ್ಮ ಮತ್ತು ಜಾತಿಯ ಆಧಾರದ ಮೇಲೆ ನಾಗರಿಕ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತದೆ. ಸಂವಿಧಾನ ರಚಿಸುವಾಗಲೇ ಅಂಬೇಡ್ಕರ್ ಅವರು ಧರ್ಮಾಧಾರಿತ ಮೀಸಲಾತಿ ವಿರೋಧಿಸಿದ್ದರು ಎಂದು ಪ್ರತಿಭಟನಾಕಾರರು ತಿಳಿಸಿದರು.
ನ್ಯಾಯಾಲಯಗಳು ಕೂಡ ಧರ್ಮಾಧಾರಿತ ಮೀಸಲಾತಿ ತಿರಸ್ಕರಿಸಿವೆ. ಹೀಗಿದ್ದರೂ ರಾಜ್ಯ ಸರ್ಕಾರ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿ ಮೀಸಲಾತಿ ನೀಡುತ್ತಿದೆ. ಆದ್ದರಿಂದ ನಾಗರಿಕ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಒದಗಿಸುವ ಈ ಪ್ರಯತ್ನ ರಾಷ್ಟ್ರೀಯ ಸಮಗ್ರತೆ ಮತ್ತು ಏಕತೆಗೆ ಅಪಾಯ ಉಂಟು ಮಾಡುತ್ತದೆ. ಈ ನಿಟ್ಟಿನಲ್ಲಿ ಮಸೂದೆಯನ್ನು ಅನುಮೋದಿಸಬಾರದು ಎಂದು ರಾಜ್ಯಪಾಲರನ್ನು ಒತ್ತಾಯಿಸಲಾಯಿತು.
ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ್, ವಿ.ಕೆ.ಜೈನ್, ನಗರ ಸಹ ಸಂಚಾಲಕ ವಿಜಯ್, ಪ್ರಮುಖರಾದ ಆನಂದರಾವ್ ಜಾಧವ್, ಅಂಕುಶ್ ಇತರರಿದ್ದರು.