ಹೊಣೆ ಮರೆಯದಿರೋಣ, ಮೈಮರೆತರೆ ಅಪಾಯ ಖಚಿತ

edit 4
Published on

ಸೋಮವಾರದಿಂದ ದೇಶಾದ್ಯಂತ ಮೂರನೇ ಹಂತದ ಲಾಕ್​ಡೌನ್ ಆರಂಭವಾಗಿದೆ. ದೇಶವನ್ನು ಕೆಂಪು, ಕಿತ್ತಳೆ, ಹಸಿರು ವಲಯಗಳಲ್ಲಿ ವಿಭಜಿಸಲಾಗಿದೆ. ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಕೆಲ ವಿನಾಯ್ತಿಗಳನ್ನು ನೀಡಲಾಗಿದೆ. ಹೀಗಾಗಿ, ಜನಜೀವನ ನಿಧಾನವಾಗಿ ಯಥಾಸ್ಥಿತಿಗೆ ಬರಲಿದೆ. ಈಗಾಗಲೇ ಎರಡು ಹಂತದ ಸಾಮಾಜಿಕ ದಿಗ್ಬಂಧನ ಪೂರ್ಣಗೊಂಡಿದೆ. ದೇಶಾದ್ಯಂತ ಕರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, 42 ಸಾವಿರದ ಗಡಿ ದಾಟಿದೆ. ಆದರೆ, ಸೋಂಕು ಪ್ರಸರಣದ ವೇಗ ತಗ್ಗಿರುವುದು ಕೊಂಚ ಸಮಾಧಾನದ ಸಂಗತಿ. ಲಾಕ್​ಡೌನ್ ದೀರ್ಘಾವಧಿ ಮುಂದುವರಿಸಲು ಸಾಧ್ಯವಿಲ್ಲ ಎಂಬ ಅರಿವು ಸರ್ಕಾರಕ್ಕೆ ಇದೆ. ಈಗಾಗಲೇ 50 ದಿನಗಳ ದಿಗ್ಬಂಧನದಿಂದ ಹಲವು ವಲಯಗಳು, ಕೈಗಾರಿಕೆಗಳು ನಲುಗಿ ಹೋಗಿವೆ. ನಷ್ಟದ ಪ್ರಮಾಣ ಹೆಚ್ಚುತ್ತಿದೆ. ಜನಸಾಮಾನ್ಯರ ಬದುಕಿನಲ್ಲಿ ಮತ್ತಷ್ಟು ಕಷ್ಟಗಳು ಆವರಿಸಿಕೊಂಡಿವೆ. ಹೀಗಾಗಿ, ಏಕಾಏಕಿ ಲಾಕ್​ಡೌನ್ ತೆರವುಗೊಳಿಸುವುದಂತೂ ಅಸಾಧ್ಯ. ಈ ನಿಟ್ಟಿನಲ್ಲಿ ಹಂತ-ಹಂತವಾಗಿ ಆರ್ಥಿಕತೆಗೆ ಚೇತರಿಕೆ ನೀಡುವಂಥ ಪ್ರಯತ್ನಗಳನ್ನು ಮಾಡಲೆಂದೇ ಸರ್ಕಾರ ಪ್ರದೇಶಗಳನ್ನು ವಲಯವಾರು ಘೋಷಿಸಿ, ಕೆಲ ವಿನಾಯ್ತಿಗಳನ್ನು ನೀಡಿದೆ.

ಎಷ್ಟೋ ಕಡೆಗಳಲ್ಲಿ ಜನರು ಈ ಉದ್ದೇಶವನ್ನೇ ಮರೆತಂತೆ ನಡೆದುಕೊಳ್ಳುತ್ತಿರುವುದು ದುರದೃಷ್ಟಕರ. ಕರೊನಾ ಸೋಂಕು ನಿಯಂತ್ರಿಸಲು ಸರ್ಕಾರ ದೊಡ್ಡ ಸಮರವನ್ನೇ ನಡೆಸುತ್ತಿದೆ ಮತ್ತು ಇಡೀ ಆರೋಗ್ಯ ಕ್ಷೇತ್ರ ಸವಾಲಿಗೆ ಒಡ್ಡಿಕೊಂಡು ಕಾರ್ಯನಿರ್ವಹಿಸುತ್ತಿದೆ ಎಂಬ ಗೋಚರಸತ್ಯವನ್ನು ಮರೆಯಬಾರದು. ಈ ಕಠಿಣಕ್ರಮಗಳ ಫಲವಾಗಿ ಸೋಂಕು ಪ್ರಸರಣದ ವೇಗ ಕೊಂಚ ತಗ್ಗಿದೆ. ಈ ಹಂತದಲ್ಲಿ ಜನರು ತಮ್ಮ ಜವಾಬ್ದಾರಿಯನ್ನು ಮರೆತುಬಿಟ್ಟರೆ ಇಷ್ಟು ದಿನಗಳವರೆಗೆ ನಡೆಸಿದ ಪ್ರಯತ್ನಗಳೆಲ್ಲ ವ್ಯರ್ಥವಾಗಿ ಹೋಗಲಿವೆ. ಅಷ್ಟಕ್ಕೂ, ಎಲ್ಲವನ್ನೂ ಸರ್ಕಾರವೇ ಮಾಡಬೇಕು ಎಂದೇನಿಲ್ಲ. ಸಮಸ್ಯೆಗಳು ಬಂದೆರಗಿದಾಗ ಅದರ ಪರಿಹಾರದ ನಿಟ್ಟಿನಲ್ಲಿ ಜನರ ಪಾತ್ರವೂ ಪ್ರಮುಖವಾಗಿ ಇರುತ್ತದೆ. ಅಲ್ಲದೆ, ಕೇಂದ್ರ ಮತ್ತು ಆಯಾ ರಾಜ್ಯ ಸರ್ಕಾರಗಳು ಸ್ಪಷ್ಟ ಮಾರ್ಗಸೂಚಿಯನ್ನು ಹೊರಡಿಸಿವೆ. ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮುಖಗವಸು ಧರಿಸಬೇಕು, ಅನಗತ್ಯವಾಗಿ ರಸ್ತೆಗೆ ಇಳಿಯಬಾರದು, ತರಕಾರಿ-ದಿನಸಿ ಖರೀದಿ ವೇಳೆ ಗುಂಪುಗೂಡಬಾರದು ಎಂಬುದನ್ನೆಲ್ಲ ತಿಳಿಸಿ, ವಾಹನ ಸವಾರರು ಪಾಲಿಸಬೇಕಾದ ಕ್ರಮಗಳ ಬಗ್ಗೆಯೂ ವಿವರಿಸಲಾಗಿದೆ.

ಇದೆಲ್ಲವೂ ನಮ್ಮ ಮತ್ತು ಸಮಾಜದ ಹಿತಕ್ಕೆ. ಇದನ್ನು ಮರೆತರೆ ಎಲ್ಲರಿಗೂ ಹಾನಿ. ನಿಯಮಗಳನ್ನು ಮೀರಿ ಬೇಕಾಬಿಟ್ಟಿಯಾಗಿ ಸಂಚರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದು ಇಂಥ ಹಲವು ಅಪಸವ್ಯಗಳು ಸೋಮವಾರ ದೇಶದ ಹಲವೆಡೆ ಕಂಡುಬಂದಿವೆ. ಕರೊನಾ ಸೋಂಕಿಗೆ ಮನುಷ್ಯರೇ ವಾಹಕರು. ವಿನಾಯ್ತಿ ನೀಡಲಾಗಿದೆ ಎಂದು ನಿಯಮಗಳನ್ನು ಮರೆತರೆ ಸೋಂಕು ಸಮುದಾಯದಲ್ಲಿ ಹರಡುವ ಅಪಾಯ ಇದೆ. ಹಾಗಾದರೆ, ಪರಿಸ್ಥಿತಿ ಎಷ್ಟು ವಿಷಮವಾಗುತ್ತದೆ ಎಂಬುದಕ್ಕೆ ಅಮೆರಿಕ, ಇಟಲಿ, ಸ್ಪೇನ್ ದೇಶಗಳು ನಿದರ್ಶನವಾಗಿವೆ. ಭಾರತದಲ್ಲಿ ಅಂಥ ಸ್ಥಿತಿ ಬರಬಾರದು ಎಂದರೆ ಪ್ರತಿಯೊಬ್ಬ ನಾಗರಿಕನೂ ಯೋಧನಂತೆ ಕರೊನಾ ವಿರುದ್ಧ ಹೋರಾಡಬೇಕು, ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಒಂದುವೇಳೆ ಪರಿಸ್ಥಿತಿ ಕೈಮೀರಿದರೆ ಅದನ್ನು ನಿಯಂತ್ರಣಕ್ಕೆ ತರಲು ಹರಸಾಹಸವನ್ನೇ ಮಾಡಬೇಕಾಗುತ್ತದೆ. ಆಗ ಸರ್ಕಾರವನ್ನೋ, ಇನ್ಯಾರನ್ನೋ ತೆಗಳಿ ಪ್ರಯೋಜನ ಇಲ್ಲ ಎಂಬುದನ್ನು ಅರ್ಥಮಾಡಿಕೊಂಡು, ವಿವೇಚನೆ ಮತ್ತು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net