

ತ್ಯಾಗರ್ತಿ: ರೈತರ ಸಂಕಷ್ಟಕ್ಕೆ ಸಹಾಯ ಮಾಡಲು ನಾವಿದ್ದೇವೆ. ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಮುಂದಾಗಬಾರದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಗುರುವಾರ ತ್ಯಾಗರ್ತಿಯ ಪಿಎಸಿಎಸ್ ವಾರ್ಷಿಕ ಸಭೆಯಲ್ಲಿ ಮಾತನಾಡಿ ರೈತರ ಜತೆಗೆ ಸರ್ಕಾರ ಇದೆ. ಯಾವುದೇ ಆತಂಕ ಬೇಡ. ಆದರೆ ರೈತರು ಕೃಷಿ ಉತ್ಪನ್ನಗಳನ್ನು ಸಹಕಾರ ಸಂಘಗಳ ಮೂಲಕವೇ ಮಾರಾಟ ಮಾಡಬೇಕು. ಅನೇಕ ರೈತರು ಮಧ್ಯವರ್ತಿಗಳ ಮೂಲಕ ಮಾರಾಟ ಮಾಡಿ ನಷ್ಟ ಅನುಭವಿಸಿದ್ದಾರೆ. ದಲ್ಲಾಳಿಗಳ ಮೋಸಕ್ಕೆ ಬಲಿಯಾಗಬೇಡಿ ಎಂದು ಹೇಳಿದರು
ಶಿವಮೊಗ್ಗ ಡಿಸಿಸಿ ಬ್ಯಾಂಕ್ ರಾಜ್ಯದಲ್ಲಿ ನಂ.1 ಸ್ಥಾನದಲ್ಲಿದೆ. ಕಳೆದ ಸಾಲಿನಲ್ಲಿ 36 ಕೋಟಿ ರೂ. ಲಾಭ ಗಳಿಸಿದೆ. ಇದರಲ್ಲಿ 11 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರಕ್ಕೆ ತೆರಿಗೆ ಪಾವತಿಸಲಾಗಿದೆ. ರೈತರ ಅನುಕೂಲಕ್ಕಾಗಿ ತ್ಯಾಗರ್ತಿ ಸೇರಿ ನಾಲ್ಕು ಡಿಸಿಸಿ ಬ್ಯಾಂಕ್‌ಗಳನ್ನು ತೆರೆಯಬೇಕು ಎಂದರು.
ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಕೆ.ಹನುಮಂತಪ್ಪ ಮಾತನಾಡಿ, ಸಂಘದ ನಿರ್ದೇಶಕ ಮಂಡಳಿಯಿಂದ ರೈತರ ಮನವೊಲಿಸಿ ಸುಸ್ತಿ ಸಾಲಗಳನ್ನು ವಸೂಲಿ ಮಾಡಿ ಮುಂದಿನ ವರ್ಷದಲ್ಲಿ ಇಪ್ಪತ್ತೈದು ಲಕ್ಷ ರೂಪಾಯಿ ಲಾಭ ಗಳಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ತ್ಯಾಗರ್ತಿ ಗ್ರಾಮಕ್ಕೆ ಡಿಸಿಸಿ ಬ್ಯಾಂಕ್ ಶಾಖೆ ಮಂಜೂರಾತಿ ಮಾಡಲು ಸಹಕಾರ ನೀಡಿದ ಬ್ಯಾಂಕ್ ನಿರ್ದೇಶಕರೂ ಆದ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಕಿರಣ್, ನಿರ್ದೇಶಕರಾದ ಎಂ.ಎಲ್.ಗಣಪತಿ, ಅಮೃತ್ ರಾಜ್, ಲೋಕಪ್ಪ, ಇಸಾಕ್, ಎಚ್.ಮಂಜುನಾಥ್, ನಾಗೇಂದ್ರ, ಪರಶುರಾಮ, ಆಶಾ, ಚಂದ್ರಕಲಾ, ಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ, ಕಾರ್ಯದರ್ಶಿ ಜೈಕುಮಾರ್‌ಇದ್ದರು