ಒತ್ತಡ ನಿವಾರಣೆಗೆಂದು ವ್ಯಸನಕ್ಕೆ ಬಲಿಯಾಗಬೇಡಿ

sims
ಸಿಮ್ಸ್‌ನಲ್ಲಿ ಏರ್ಪಡಿಸಿದ್ದ ವಿಶ್ವ ಮಿದುಳು ದಿನಾಚರಣೆಯನ್ನು ಸಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ತಿಮ್ಮಪ್ಪ ಉದ್ಘಾಟಿಸಿದರು. ಡಾ. ಕಿರಣ್, ಡಾ. ಕುಮಾರ್, ಡಾ. ಸಿದ್ದನಗೌಡ ಪಾಟೀಲ್, ಡಾ. ಪ್ರಮೋದ್ ಇದ್ದರು.
Published on

ಶಿವಮೊಗ್ಗ: ಉತ್ತಮ ಮಾನಸಿಕ ಆರೋಗ್ಯದಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ. ಮಕ್ಕಳು ಮಾದಕ ವ್ಯಸನಕ್ಕೆ ಬಲಿಯಾಗದೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಜನರು ಒತ್ತಡ ನಿರ್ವಹಣೆ ಮಾಡುವುದನ್ನು ಕಲಿಯಬೇಕು. ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಸಲ್ಲದು ಎಂದು ಸಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ತಿಮ್ಮಪ್ಪ ಹೇಳಿದರು.

ಜಿಲ್ಲಾಡಳಿತ ಹಾಗೂ ಸಿಮ್ಸ್ ಆಶ್ರಯದಲ್ಲಿ ವಿಶ್ವ ಮಿದುಳು ದಿನದ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಲವು ವರ್ಷಗಳ ಹಿಂದೆ ಮಾನಸಿಕ ಆರೋಗ್ಯದಲ್ಲಿ ಏರುಪೇರಾದರೆ ಹುಚ್ಚು ಹಿಡಿದಿದೆ ಎನ್ನುತ್ತಿದ್ದರು. ಪ್ರಸ್ತುತ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ವಿಭಾಗದಲ್ಲಿ ಸಾಕಷ್ಟು ಸುಧಾರಣೆ ಆಗಿರುವುದು ವೈದ್ಯಕೀಯ ಕ್ಷೇತ್ರದ ಸಾಧನೆ ಎಂದರು.
ಮೆಗ್ಗಾನ್ ಬೋಧನಾ ಆಸ್ಪತ್ರೆ ನರರೋಗ ತಜ್ಞ ಡಾ. ಕುಮಾರ್ ಮಾತನಾಡಿ, ದೇಹದ ಮೂಲ ಮಿದುಳು. ಇಡೀ ದೇಹವನ್ನು ನಿಯಂತ್ರಿಸುವುದು ಮಿದುಳು. ಇದರ ತೂಕ ಒಂದೂವರೆ ಕೆ.ಜಿ. ಇದು ದೇಹದ ಶೇ.20ರಷ್ಟು ರಕ್ತ ಹಾಗೂ ಸತತವಾಗಿ ಆಮ್ಲಜನಕ, ಗ್ಲೂಕೋಸ್ ಪಡೆಯುತ್ತಿರುತ್ತದೆ ಎಂದು ತಿಳಿಸಿದರು.
ಸರಿಯಾದ ಸಮಯಕ್ಕೆ ಆಹಾರ, ಸಾಕಷ್ಟು ನೀರು ಸೇವಿಸಬೇಕು. 7-8 ತಾಸು ನಿದ್ದೆ ಮಾಡಬೇಕು. ಶೇ.20ರಷ್ಟು ಜನರಲ್ಲಿ ತಲೆನೋವಿನ ಸಮಸ್ಯೆ ಇರುತ್ತದೆ. ಈ ಸಮಸ್ಯೆ ಹೆಚ್ಚಾದಲ್ಲಿ ಪಾರ್ಶ್ವವಾಯು ಸಂಭವಿಸುತ್ತದೆ. ಆದರೆ ಕೂಡಲೇ ರೋಗಿಯನ್ನು ಕರೆತಂದರೆ ಅದಕ್ಕೂ ಚಿಕಿತ್ಸೆ ನೀಡಬಹುದು ಎಂದರು.
40 ವರ್ಷ ವಯಸ್ಸಾದ ಮೇಲೆ ನಿಯಮಿತವಾಗಿ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಉತ್ತಮ ಚಟುವಟಿಕೆ, ಹವ್ಯಾಸ ಅಳವಡಿಸಿಕೊಳ್ಳಬೇಕು. ಗಂಭೀರವಾದ ಮಿದುಳಿನ ಕಾಯಿಲೆಗಳು ಕಂಡುಬಂದಾಗ ಎಲ್ಲ ಸೌಲಭ್ಯವಿರುವ ಆಸ್ಪತ್ರೆಗಳಿಗೆ ಹೋಗಬೇಕು ಎಂದು ತಿಳಿಸಿದರು.
ಜಿಲ್ಲಾ ಸರ್ಜನ್ ಡಾ. ಸಿದ್ದನಗೌಡ ಪಾಟೀಲ್, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ಕಿರಣ್, ತಜ್ಞ ವೈದ್ಯ ಡಾ. ಪ್ರಮೋದ್, ಶುಶ್ರೂಷಕ ಅಧೀಕ್ಷಕಿ ಅನ್ನಪೂರ್ಣಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net