

ಶಿವಮೊಗ್ಗ: ಮಕ್ಕಳನ್ನು ಸಚ್ಚಾರಿತ್ರ್ಯವಂತರನ್ನಾಗಿ ಮಾಡಿದಾಗ ಮಾತ್ರ ಭವ್ಯ ಭಾರತ ಕಟ್ಟುವ ಕನಸು ನನಸಾಗುತ್ತದೆ ಎಂದು ಸಾಗರದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ಜ್ಞಾನಾನಂದಜೀ ಮಹಾರಾಜ್ ಹೇಳಿದರು.
ಅನುಪಿನಕಟ್ಟೆಯ ಶ್ರೀ ರಾಮಕೃಷ್ಣ ಗುರುಕುಲ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಸೋಮವಾರ ಸತ್ಯನಾರಾಯಣ ಪೂಜೆ, ಜನ್ಮದಾತರ ಪಾದಪೂಜೆ ಮತ್ತು ಶಾರದಾ ಮಾತೆ ಜಯಂತ್ಯುತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ತಂದೆ-ತಾಯಿ ಆಶೀರ್ವಾದವನ್ನು ಯಾರೆಲ್ಲಾ ನಿತ್ಯವೂ ಪಡೆಯುತ್ತಾರೋ, ಗುರುಹಿರಿಯನ್ನು ಗೌರವದಿಂದ ಕಾಣುತ್ತಾರೋ ಅವರು ಭವಿಷ್ಯದಲ್ಲಿ ದೇಶದ ಆಸ್ತಿಯಾಗಲಿದ್ದಾರೆ ಎಂದರು.
ಮಕ್ಕಳಲ್ಲಿ ಪಾಲಕರು ಆತ್ಮವಿಶ್ವಾಸವನ್ನು ತುಂಬಬೇಕಿದೆ. ಕಡಿಮೆ ಅಂಕ ಪಡೆದರೆಂಬ ಕಾರಣಕ್ಕೆ ಅವರಲ್ಲಿ ತಾರತಮ್ಯ ಮಾಡಬಾರದು. ಅವರಲ್ಲಿನ ಚೈತನ್ಯವನ್ನು ಜಾಗೃತಗೊಳಿಸಬೇಕು. ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಕಲಿಸಬೇಕು. ಇಂದು ಆಧುನಿಕ ವಿದ್ಯಾಭ್ಯಾಸ ಹಲವೆಡೆ ಸಿಗುತ್ತದೆ. ಸಾಕಷ್ಟು ಹಣ ಖರ್ಚು ಮಾಡಿ ಕೇಳಿದ್ದನ್ನೆಲ್ಲ ಕೊಡಿಸಿದರೂ ಆ ಮಕ್ಕಳು ಭವಿಷ್ಯದಲ್ಲಿ ಏನೆಲ್ಲಾ ಆಗುತ್ತಾರೆ ಎಂಬುದಕ್ಕೆ ಹಲವು ಪ್ರತ್ಯಕ್ಷ ಸಾಕ್ಷಿಗಳು ನಮ್ಮೆದುರಲ್ಲಿವೆ. ಪಾದಪೂಜೆ ಕಾರ್ಯಕ್ರಮ ಸಾಂಕೇತಿಕವಾಗಿದ್ದು ಪ್ರತಿದಿನವೂ ಮಕ್ಕಳು ಪಾದಪೂಜೆ ಮಾಡಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಸದಸ್ಯ ಡಿ.ಎಂ.ದೇವರಾಜ್ ಮಾತನಾಡಿದರು. ಜಡೆ ಸಂಸ್ಥಾನ ಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಶೋಭಾ ವೆಂಕಟರಮಣ, ಶಾಲೆಯ ಹಿರಿಯ ವಿದ್ಯಾರ್ಥಿ ಡಾ. ವಿನಯ್ ಕೆ ಅಲಗುಂಡಗಿ ಉಪಸ್ಥಿತರಿದ್ದರು.
ರಾಮಕೃಷ್ಣ ವಸತಿ ಶಾಲೆಯಲ್ಲಿ ಹಬ್ಬದ ಸಡಗರ
ಅನುಪಿನಕಟ್ಟೆಯ ಶ್ರೀರಾಮಕೃಷ್ಣ ಆಂಗ್ಲ ಮಾಧ್ಯಮ ಗುರುಕುಲ ವಸತಿ ವಿದ್ಯಾಲಯದಲ್ಲಿ ಹಬ್ಬದ ಸಡಗರ ನಿರ್ಮಾಣವಾಗಿತ್ತು. 750 ಮಕ್ಕಳು ತಮ್ಮ ತಂದೆ-ತಾಯಿಗೆ ಪಾದಪೂಜೆ ನಡೆಸಿದರು. ರಾಜ್ಯದ ವಿವಿಧೆಡೆಯಿಂದ ಪಾಲಕರು ಬಂದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ಮೂಡಿಸಿದರು. ಬೆಳಗ್ಗೆ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ನಡೆಯಿತು. ಬಳಿಕ ಅರ್ಚಕ ಸುಬ್ಬರಾಜ್ ಅವರು ಪಾದಪೂಜೆ ನೆರವೇರಿಸಿಕೊಟ್ಟರು. ಮಕ್ಕಳು ಜನ್ಮದಾತರಿಗೆ ವಿಶೇಷವಾಗಿ ಶ್ರದ್ಧಾ ಭಕ್ತಿಯಿಂದ ಮಂತ್ರಾಕ್ಷತೆಯೊಂದಿಗೆ ಪಾದಪೂಜೆ ಮಾಡಿ ನಮಸ್ಕರಿಸಿದರು. ಮೆರಿಟ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕ್ರೀಡಾ ಸಾಧಕ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮದ ಹೈಲೆಟ್. ಜಿ.ಕೆ.ಚಿರನ್ ಮತ್ತು ಎಚ್.ಎಸ್.ಪ್ರೇಕ್ಷಾ ಅವರಿಗೆ ಉತ್ತಮ ಆದರ್ಶ ವಿದ್ಯಾರ್ಥಿಗಳಾಗಿ ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ದಿಶಾಂತ್ ಸಭಾವತ್, ಕೆ.ವಿ.ಚೇತನ್ ಕುಮಾರ್ ಮತ್ತು ಜೆ.ನಿತ್ಯಾ ಅವರನ್ನು ಅಭಿನಂದಿಸಲಾಯಿತು.