

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಸರ್ಕಾರದಲ್ಲಿ ಅಕಾಲಿಕ ವರ್ಗಾವಣೆ ಮುಂದುವರಿದಿದ್ದು, ಮುಖ್ಯಮಂತ್ರಿಯವರ ಸೂಚನೆಯನ್ನೂ ಮೀರಿ ವಿವಿಧ ಇಲಾಖೆಗಳಲ್ಲಿ ವರ್ಗಾವಣೆ ನಡೆದಿದೆ. ಅದಲ್ಲೂ ಪ್ರಭಾವ, ಶಿಫಾರಸ್ಸಿನ ಒತ್ತಡಕ್ಕೆ ಸಿಲುಕಿ ಕೆಲವು ನಿಯಮಗಳನ್ನು ಪಕ್ಕಕ್ಕಿಟ್ಟು ಪ್ರಕ್ರಿಯೆ ನಡೆಸಿರುವುದು ಕಂಡುಬಂದಿದೆ.
ಕರೊನಾ, ಲಾಕ್ಡೌನ್ ಕಾರಣಕ್ಕೆ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ತಡೆ ಬಿದ್ದಿದ್ದ ಹಿನ್ನೆಲೆಯಲ್ಲಿ ವರ್ಗಾವಣೆಗೆ ಅವಕಾಶ ಕೊಡಬೇಕೆಂದು ಮುಖ್ಯಮಂತ್ರಿಯವರ ಮೇಲೆ ಒತ್ತಡಬಿದ್ದಿತ್ತು. ಸಚಿವ ಸಂಪುಟ ಸಹೋದ್ಯೋಗಿಗಳೇ ತಮಗೆ ವರ್ಗಾವಣೆಗೆ ಅವಕಾಶ ಕೊಡಬೇಕೆಂದು ಸಂಪುಟ ಸಭೆಯಲ್ಲಿ ಒತ್ತಾಯಿಸಿದ್ದರು. ಆ ಸಂದರ್ಭದಲ್ಲಿ ಹಾಗೆಲ್ಲ ಆಗಲ್ಲ, ಯಾವುದಾದರೂ ವರ್ಗಾವಣೆ ಅಗತ್ಯ ಇದ್ದರೆ ನನ್ನ ಗಮನಕ್ಕೆ ತನ್ನಿ, ಮಾಡೋಣ ಎಂದು ಸಿಎಂ ಭರವಸೆ ನೀಡಿದ್ದರು. ಆದರೆ, ಒತ್ತಡ ಹೆಚ್ಚಾದಂತೆ ಸಚಿವರಿಗೆ ವರ್ಗಾವಣೆ ನಡೆಸುವ ಅವಕಾಶ ನೀಡಿ ಕಾಲಮಿತಿ ವಿಧಿಸಿದ್ದರು. ಈ ಅವಧಿ ಜುಲೈ 22ಕ್ಕೆ ಕೊನೆಯಾಗಿತ್ತು. ಈ ನಡುವೆ ಸಹಾಯಕ ಇಂಜಿನಿಯರ್ ಹುದ್ದೆಯಿಂದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಿಂದ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ವರ್ಗಾವಣೆ ನಡೆದಿದೆ.
ಸೆ.24ರಂದು ಜಲ ಸಂಪನ್ಮೂಲ ಇಲಾಖೆಯು 56 ಸಹಾಯಕ ಕಾರ್ಯಪಾಲಕ ಇಂಜಿನಿಯರ್ಗಳನ್ನು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸಿ ಸ್ಥಳನಿಯೋಜನೆ ಮಾಡಲಾಗಿದೆ. ಅದೇ ರೀತಿ ಸೆ.22ರಂದು 55 ಸಹಾಯಕ ಕಾರ್ಯಪಾಲಕ ಇಂಜಿನಿಯರ್ಗಳನ್ನು ಸ್ಥಳನಿಯುಕ್ತಿಗೊಳಿಸಲಾಗಿದೆ. ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸಿ ಒಬ್ಬರಿಗೆ ಒಂದು ಹುದ್ದೆಗೆ ಅವಕಾಶ ನೀಡಬಹುದು, ಆದರೆ ಈ ರೀತಿ ಪ್ರಭಾರದಲ್ಲಿರುವವರಿಗೆ ಇನ್ನೊಂದು ಮೇಲ್ಮಟ್ಟದ ಹುದ್ದೆ ನೀಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಈ ಹಿಂದೆ ಲೋಕೋಪಯೋಗಿ ಇಲಾಖೆಯವರು ಸೋಮಸುಂದರ್ ಹಾಗೂ ಮಂಜುನಾಥ್ ಎಂಬ ಸ್ವತಂತ್ರ ಪ್ರಭಾರದ ಅಧೀಕ್ಷಕ ಇಂಜಿನಿಯರ್ಗಳಿಗೆ ಮುಖ್ಯ ಇಂಜಿನಿಯರ್ ಹುದ್ದೆಗೆ ಶಿಫಾರಸು ಮಾಡಲಾಗಿತ್ತು. ಬಳಿಕ ಗಮನಿಸಿದ್ದ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯು ಆದೇಶ ಹಿಂಪಡೆಯಲು ಕ್ರಮಕೈಗೊಂಡಿತ್ತು. ಅವರನ್ನು ಹಿಂಬಡ್ತಿಗೊಳಿಸಲಾಗಿತ್ತು. ಇದೀಗ ಜಲ ಸಂಪನ್ಮೂಲ ಇಲಾಖೆಯಲ್ಲಿ ಇಂತಹದ್ದೇ ಬೆಳವಣಿಗೆ ನಡೆದಿದೆ. ನಿಯಮ 32ರಡಿ ಬಡ್ತಿ ಪಡೆದ 52 ಸಹಾಯಕ ಕಾರ್ಯಪಾಲಕ ಇಂಜಿನಿಯರ್ಗಳಿಗೆ ಕಾರ್ಯಪಾಲಕ ಇಂಜಿನಯರ್ ಆಗಿ ಬಡ್ತಿ ನೀಡಲಾಗಿದೆ. ಕೆಸಿಎಸ್ ನಿಯಮ 58ರಡಿ ಪ್ರಭಾರ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಬಡ್ತಿ ನೀಡಿರುವುದು ಸರ್ಕಾರದ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂಬುದನ್ನು ಹಿರಿಯ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.
ಈ ವರ್ಗಾವಣೆ ಸಿಎಂ ಗಮನಕ್ಕೆ ಬಾರದೆ ನಡೆದಿದೆ ಎಂಬ ಮಾತುಗಳು ಇಲಾಖೆಯಲ್ಲಿ ಚರ್ಚೆಯಾಗಿದೆ. ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಒಬ್ಬರ ಶಿಫಾರಸಿನಂತೆ ಪ್ರಕ್ರಿಯೆ ನಡೆದಿರುವ ಬಗ್ಗೆ ಇಲಾಖೆಯಲ್ಲಿ ಒಂದಷ್ಟು ಆಕ್ಷೇಪವೂ ಸಹ ಕೇಳಿಬಂದಿದೆ. ವರ್ಷಪೂರ್ತಿ ಈ ರೀತಿ ವರ್ಗಾವಣೆ ಮಾಡಿಕೊಂಡು ಕುಳಿತರ ಆಡಳಿತ ನಿರ್ವಹಣೆ ಹೇಗೆ ಸುಸೂತ್ರವಾಗಿ ನಡೆಯಲು ಸಾಧ್ಯ. ಇಲ್ಲಿ ಹಣದ ವ್ಯವಹಾರ ನಡೆದಿರುವ ಕಾರಣಕ್ಕೆ ಎಂಬ ಅಸಮಾಧಾನದ ಮಾತುಗಳು ಸಹ ಕೇಳಿಬಂದಿದೆ.
ಸಹಾಯಕ ಇಂಜಿನಿಯರ್ ಹುದ್ದೆಯಿಂದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ಗೆ ಬಡ್ತಿ ನೀಡುವ ಅಧಿಕಾರ ಸಂಬಂಧಪಟ್ಟ ಸಚಿವರಿಗೆ ಇರುತ್ತದೆ. ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಿಂದ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಹಾಗೂ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಿಂದ ಅಧೀಕ್ಷಕ ಇಂಜಿನಿಯರ್ ಹುದ್ದೆಗೆ ಬಡ್ತಿ ನೀಡುವ ಅವಕಾಶ ಮುಖ್ಯಮಂತ್ರಿಗೆ ಮಾತ್ರ ಇರುತ್ತದೆ. ಆದರೆ, ಇಲ್ಲಿ ಮುಖ್ಯಮಂತ್ರಿ ಗಮನಕ್ಕೆ ತಾರದೇ ಬಡ್ತಿ ನೀಡಿರುವುದು ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಆದೇಶದಲ್ಲಿ ಮುಖ್ಯಮಂತ್ರಿ ಅನುಮೋದನೆಗೊಂಡ ನಂತರ ಬಡ್ತಿ ನೀಡಲಾಗಿದೆ ಎಂದು ಉಲ್ಲೇಖಿಸುವ ಸಂಪ್ರದಾಯ ರಾಜ್ಯದಲ್ಲಿದೆ. ಈ ಆದೇಶಗಳಲ್ಲಿ ಆ ಉಲ್ಲೇಖಗಳಿಲ್ಲ.ಇನ್ನು ಬಡ್ತಿ, ಸ್ಥಳ ನಿಯುಕ್ತಿಗೆ ಲಕ್ಷಾಂತರ ರೂ. ವರ್ಗಾವಣೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನೊಂದು ಪ್ರಸಂಗದಲ್ಲಿ ಕೆಲವರು ಹಣ ಕೊಟ್ಟಿಲ್ಲವೆಂದು ಅವರ ಬಡ್ತಿಗಳನ್ನು ನೀಡದೇ ತಡೆ ಹಿಡಿದಿರುವ ಬಗ್ಗೆಯೂ ಆರೋಪ ಕೇಳಿಬಂದಿದೆ. ಈ ನಡುವೆ ಇಲಾಖೆ ಹಿರಿಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ತಮಗೆ ಈ ಬಗ್ಗೆ ತಿಳಿಯದು ಎಂದು ತಿಳಿಸಿದ್ದಾರೆ.
ಈ ಅವಧಿಯಲ್ಲಿ ವರ್ಗಾವಣೆ ನಡೆಸಬಹುದೋ ಇಲ್ಲವೋ ಗೊತ್ತಿಲ್ಲ. ಲೋಕೋಪಯೋಗಿ ಹಾಗೂ ಜಲ ಸಂಪನ್ಮೂಲ ಇಲಾಖೆಯಲ್ಲಿ ಹಣ ಕೊಟ್ಟವರಿಗೆ ವರ್ಗಾವಣೆ, ಬಡ್ತಿ ಎಂಬುದು ಮಾಮೂಲಾಗಿದೆ. ಶಿಕ್ಷಣ ಇಲಾಖೆಯಂತೆ ಇಲ್ಲೂ ಪಾರದರ್ಶಕ ವರ್ಗಾವಣೆಗೆ ಕಾಯ್ದೆ ತಂದರೆ ಒಳ್ಳೆಯದು.
| ಹೆಸರು ಹೇಳಲಿಚ್ಛಿಸದ ಕಾರ್ಯಪಾಲಕ ಇಂಜಿನಿಯರ್