ಪಂಪ್ಡ್ ಸ್ಟೋರೇಜ್‌ಗೆ ಅವಕಾಶ ಕೊಡಬೇಡಿ

pumped storage (1)
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಸಾಗರದಲ್ಲಿ ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಪರಿಸರಾಸಕ್ತರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಶ್ರೀ ನೀಲಕಂಠ ಶಿವಾಚಾರ್ಯರು, ಶ್ರೀ ಕುಮಾರ ಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ, ಹರತಾಳು ಹಾಲಪ್ಪ, ಅಖಿಲೇಶ್ ಚಿಪ್ಪಳಿ ಇತರರಿದ್ದರು.
Published on

ಸಾಗರ: ಪಶ್ಚಿಮ ಘಟ್ಟದ ಶ್ರೇಣಿಯ ಜೀವ ನದಿಗಳಲ್ಲಿ ಶರಾವತಿಯೂ ಒಂದು. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಈಗ ಅವಕಾಶ ಕೊಟ್ಟರೆ ಮುಂದೆ ಬೆಂಗಳೂರಿಗೆ ಶರಾವತಿ ನದಿ ನೀರು ಒಯ್ಯಲು ಮುಂದಾದಾಗ ನಮಗೆ ಪ್ರಶ್ನಿಸುವ ಹಕ್ಕನ್ನೇ ಕಳೆದುಕೊಳ್ಳುತ್ತೇವೆ. ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.

ಪಟ್ಟಣದ ನಗರಸಭೆ ರಂಗಮಂದಿರದಲ್ಲಿ ಸೋಮವಾರ ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಒಕ್ಕೂಟದಿಂದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಪಂಪ್ಡ್ ಸ್ಟೋರೇಜ್ ಯೋಜನೆ ಮುಂದೆ ಬೆಂಗಳೂರಿಗೆ ನದಿ ನೀರು ಒಯ್ಯುವ ಪೂರ್ವವೇದಿಕೆ ಇದು. ಶರಾವತಿ ನದಿ ಮೇಲೆ ಪದೇಪದೆ ದೌರ್ಜನ್ಯ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಪರಿಸರದ ಆರಾಧನೆ ಭಗವಂತನ ಆರಾಧನೆ. ಭಗವಂತನನ್ನು ನಾವು ಮರೆತರೆ ನಮ್ಮನ್ನು ಮುಂದಿನ ಪೀಳಿಗೆ ಕ್ಷಮಿಸುವುದಿಲ್ಲ. ಬದಲಾಗಿ ಪಂಪ್ಡ್ ಸ್ಟೋರೇಜ್‌ನಂತಹ ಯೋಜನೆ ಕೈಬಿಡಲು ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೇವೆ ಎಂದರು.

ಅರಣ್ಯ ಅಧಿಕಾರಿಗಳ ಚಿತಾವಣೆ: ಎಲ್ಲೆಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಿದೆಯೋ ಅಲ್ಲೆಲ್ಲ ಬೆಂಬಲಿಸುವ ನೀತಿ ಕೇಂದ್ರದ ಎದುರು ಇದೆ. ಅದರೆ ಕೇಂದ್ರದ ಈ ನಿಲುವನ್ನು ರಾಜ್ಯ ಸರ್ಕಾರ ಜನರಿಗೆ ತಪ್ಪಾಗಿ ಬಿಂಬಿಸುತ್ತಿದೆ. ಡ್ಯಾಂನಲ್ಲಿ ನೀರು ಸಂಗ್ರಹ, ವಿದ್ಯುತ್ ತಂತಿ ಎಳೆಯುವುದು, ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಸಾವಿರಾರು ಎಕರೆ ಅರಣ್ಯ ಬೇಕು. ಆದರೆ ಅರಣ್ಯ ಇಲಾಖೆ ಭ್ರಷ್ಟ ಅಧಿಕಾರಿಗಳು ಇದನ್ನು ಬೆಂಬಲಿಸುತ್ತಿದ್ದಾರೆ. ಗುತ್ತಿಗೆದಾರನ ಆಮಿಷಕ್ಕೆ ಬಲಿಯಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮೌನವಾಗಿದ್ದಾರೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ದೂರಿದರು. ಉತ್ಪತ್ತಿಯಾಗುವ ವಿದ್ಯುತ್ ಹೇಗೆ ಒಯ್ಯುತ್ತೀರಿ ಎಂದು ಕೇಳುವ ತಾಕತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ, ಶಾಸಕರಿಗೆ ಇಲ್ಲ. ವಾಸ್ತವ ಪ್ರಶ್ನೆ ಮಾಡಿದರೆ ಹಾಲಪ್ಪ ರಾಜಕೀಯಕ್ಕಾಗಿ ವಿರೋಧ ಮಾಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಾರೆ. ಕೆಲವು ಕುಟುಂಬಗಳಿಗೆ ಹಾನಿಯಾಗುತ್ತದೆ ಎನ್ನುವುದು ಅವಿವೇಕದ ಪರಮಾವಧಿ. ಹಲವು ಕುಟುಂಬಗಳು ಇದರಿಂದ ನಿರಾಶ್ರಿತವಾಗುತ್ತವೆ. ಸಾಕಷ್ಟು ಪರಿಸರವೂ ನಾಶವಾಗುತ್ತದೆ. ಅವೈಜ್ಞಾನಿಕ ಯೋಜನೆಯನ್ನು ಕೈಬಿಟ್ಟು ಸರ್ಕಾರ ಜನರಿಗೆ ಸತ್ಯಾಂಶ ತಿಳಿಸಬೇಕು ಎಂದು ಅಗ್ರಹಿಸಿದರು.

ಪರಿಸರವಾದ ಅಖಿಲೇಶ್ ಚಿಪ್ಪಳಿ ಮಾತನಾಡಿ, ಶಾಸಕರು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತು ಚರ್ಚೆಗೆ ಆಹ್ವಾನಿಸಿದ್ದು ಸಂತೋಷದ ವಿಷಯ. ಯಾವ ಸ್ಥಳ, ಸಮಯ ತಿಳಿಸಿದರೆ ನಾವು ಬರಲು ಸಿದ್ಧರಿದ್ದೇವೆ. ಪರಿಸರ ವಿರೋಧಿ ಯೋಜನೆಗಳನ್ನು ಕೈಬಿಡಲು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ. ಆದರೆ ಸರ್ಕಾರ ಸ್ಪಂದಿಸುತ್ತಿಲ್ಲ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡದಿದ್ದರೆ ಎಂತಹ ಹೋರಾಟಕ್ಕೂ ಸಿದ್ಧರಿದ್ದೇವೆ. ಪರಿಸರಕ್ಕೆ ಮಾರಕವಾಗುವ ಇಂತಹ ಯೋಜನೆಯನ್ನು ಜಾರಿಗೆ ತರಲು ಯಾವ ಕಾರಣಕ್ಕೂ ಬಿಡುವುದಿಲ್ಲ ಎಂದರು.

ಬಳಸಗೋಡು ಮಠದ ಶ್ರೀ ನೀಲಕಂಠ ಶಿವಾಚಾರ್ಯರು, ಜಡೇಮಠದ ಶ್ರೀ ಕುಮಾರ ಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಪ್ರಮುಖರಾದ ಶಂಕರ ಶರ್ಮ, ಶಿವಾನಂದ ಕುಗ್ವೆ, ರಾಮಣ್ಣ ಹಸಲರು, ನಾಗರಾಜ್, ಕವಿತಾ ಧಾರವಾಡ, ಧನುಸ್ಸು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net