ತಾಯಿ-ಮಕ್ಕಳ ಅನುಕೂಲಕ್ಕಾಗಿ ಉಪಕರಣಗಳ ಕೊಡುಗೆ

10-APR-GPT-1
ಗುಂಡ್ಲುಪೇಟೆ ಪಟ್ಟಣದ ತಾಯಿ-ಮಕ್ಕಳ ಆಸ್ಪತ್ರೆಗೆ ಪ್ರಮೋದಾದೇವಿ ಉಪಕರಣಗಳನ್ನು ನೀಡಿದರು. ಗಣೇಶ್ ಪ್ರಸಾದ್, ಎಚ್.ಎಸ್.ನಂಜಪ್ಪ, ಜಿ.ಎಸ್.ಮಧುಸೂಧನ್, ಶಶಿಧರ, ಕುಮಾರ್, ರಾಜಗೋಪಾಲ, ಡಾ.ಮಂಜುನಾಥ್, ಡಾ.ಅಲೀಂ ಪಾಷ ಇದ್ದರು.
Published on

ಗುಂಡ್ಲುಪೇಟೆ: ತಾಯಿ-ಮಕ್ಕಳ ಅನುಕೂಲಕ್ಕಾಗಿ ಆಸ್ಪತ್ರೆಗಳಿಗೆ ಅಗತ್ಯವಾದ ಉಪಕರಣಗಳನ್ನು ನೀಡುತ್ತಿದ್ದೇವೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು.

ಬುಧವಾರ ಸಂಜೆ ಪಟ್ಟಣದ ತಾಯಿ ಮಕ್ಕಳ ಆಸ್ಪತ್ರೆಗೆ ಗುಣನಾಂಬ ಮೆಟರ್ನಿಟಿ ಆ್ಯಂಡ್ ಚೈಲ್ಡ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಮಕ್ಕಳ ಆರೋಗ್ಯಕ್ಕೆ ಬೇಕಾದ ವಾರ್ಮರ್ ಮತ್ತು ಮಾನಿಟರ್ ಮುಂತಾದ ಆಧುನಿಕ ಉಪಕರಣಗಳನ್ನು ವಿತರಿಸಿ ಅವರು ಮಾತನಾಡಿ, ಹಿಂದಿನಿಂದಲೂ ತಾಯಿ ಮತ್ತು ಮಕ್ಕಳ ಅನುಕೂಲಕ್ಕೆ ಅಗತ್ಯವಾದ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸದ್ಯ ಆಸ್ಪತ್ರೆಗಳ ಮೂಲಕ ಸವಲತ್ತುಗಳನ್ನು ತಲುಪಿಸಲಾಗುತ್ತಿದ್ದು ಗುಂಡ್ಲುಪೇಟೆ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ವನ್ಯಜೀವಿಗಳು ಹಾಗೂ ಅರಣ್ಯದ ಹಿತಾಸಕ್ತಿಗಾಗಿ ಸರ್ಕಾರ ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಎಂಬುದಕ್ಕೆ ತಮ್ಮ ಬೆಂಬಲವಿದೆ. ಬೆಳಗ್ಗೆ 6ರಿಂದ ರಾತ್ರಿ 9 ಗಂಟೆವರೆಗೂ ವಾಹನಗಳ ಸಂಚಾರಕ್ಕೆ ಅವಕಾಶವಿದ್ದರೂ ಅದನ್ನು ಮಧ್ಯರಾತ್ರಿವರೆಗೆ ಮತ್ತಷ್ಟು ವಿಸ್ತರಿಸುವುದರಿಂದ ವನ್ಯಜೀವಿಗಳ ಜೀವನಕ್ಕೆ ಧಕ್ಕೆಯಾಗುತ್ತದೆ ಆದ್ದರಿಂದ ನಿಷೇಧ ಮುಂದುವರಿಯಬೇಕು ಎಂದು ಹೇಳಿದರು.

ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿ, ಪ್ರಮೋದಾದೇವಿ ಒಡೆಯರ್ ಅವರು ನಮ್ಮ ತಾಲೂಕಿನ ಆಸ್ಪತ್ರೆಗೆ ತಾಯಿ ಮತ್ತು ಮಕ್ಕಳ ಅನುಕೂಲಕ್ಕಾಗಿ ಅಗತ್ಯ ಆಧುನಿಕ ಉಪಕರಣಗಳನ್ನು ನೀಡಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಾಯ ಮಾಡಲಿದ್ದಾರೆ ಎಂದು ಹೇಳಿದರು.

ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಪುರಸಭೆ ಅಧ್ಯಕ್ಷ ಜಿ.ಎಸ್.ಮಧುಸೂಧನ್, ಸದಸ್ಯರಾದ ಶಶಿಧರ, ಕುಮಾರ್, ರಾಜಗೋಪಾಲ, ಆಸ್ಪತ್ರೆಯ ಆಡಳಿತ ವೈದ್ಯ ಡಾ.ಮಂಜುನಾಥ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net