

Donald Trump : ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಎಲ್ಲ ವಿದೇಶಿ ಕಾರುಗಳ ಮೇಲೆ ಶೇ. 25ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದರೊಂದಿಗೆ ಈ ಸುಂಕ ನಿರ್ಧಾರ ಶಾಶ್ವತ ಅಂತಾನೂ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ತನ್ನ ದೇಶದಲ್ಲಿ ಉತ್ಪಾದಿಸದ ಎಲ್ಲ ಕಾರುಗಳ ಮೇಲೆ ಪರಿಣಾಮಕಾರಿಯಾಗಿ ಶೇ. 25 ರಷ್ಟು ಸುಂಕ ವಿಧಿಸಲಿದ್ದೇವೆ. ಆದರೆ, ಅಮೆರಿಕದಲ್ಲಿ ತಯಾರಿಸಿದ ಕಾರುಗಳ ಮೇಲೆ ಯಾವುದೇ ಸುಂಕವಿರುವುದಿಲ್ಲ. ಹೊಸ ಆಮದು ಸುಂಕವು ಏಪ್ರಿಲ್ 3 ರಿಂದ ಜಾರಿಗೆ ಬರಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಈ ಸುಂಕವು ಸಂಪೂರ್ಣವಾಗಿ ಜೋಡಿಸಲಾದ ವಾಹನಗಳಿಗೆ ಮಾತ್ರ ಸೀಮಿತವಾಗದೇ ಇಂಜಿನ್‌ಗಳು, ಟ್ರಾನ್ಸ್ಮಿಶನ್ಗಳು, ಪವರ್‌ಟ್ರೇನ್ ಸಿಸ್ಟಮ್ಸ್ ಮತ್ತು ವಿದ್ಯುತ್ ಅಸೆಂಬ್ಲಿಗಳಂತಹ ನಿರ್ಣಾಯಕ ಬಿಡಿಭಾಗಗಳನ್ನು ಸಹ ಒಳಗೊಂಡಿದೆ. ಶ್ವೇತಭವನದ ಪ್ರಕಾರ, ಈ ಕ್ರಮದಿಂದ ವಾರ್ಷಿಕವಾಗಿ ಸುಮಾರು 100 ಬಿಲಿಯನ್ ಡಾಲರ್ ಆದಾಯವನ್ನು ಸಂಗ್ರಹಿಸುವ ನಿರೀಕ್ಷೆಯಿದೆ ಎಂದಿದೆ.
ಮೆಕ್ಸಿಕೋ, ಕೆನಡಾ ಮತ್ತು ಜಪಾನ್‌ಗಳಿಗೆ ಹೋಲಿಸಿದರೆ ಭಾರತವು ಅಮೆರಿಕಕ್ಕೆ ಕಳುಹಿಸುವ ಸಂಪೂರ್ಣ ವಾಹನ ರಫ್ತುಗಳು ಬಹಳ ಕಡಿಮೆ. ಆದಾಗ್ಯೂ, ಅಮೆರಿಕದ ಹೊಸ ಆಮದು ಸುಂಕ ನೀತಿ ಭಾರತದ ವಾಹನ ವಲಯದ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಭಾರತದ ವಾಹನ ಬಿಡಿಭಾಗಗಳ ಉದ್ಯಮ, ಅಮೆರಿಕದ ಕಾರು ತಯಾರಕರಿಗೆ ಪ್ರಮುಖ ಪೂರೈಕೆದಾರರಾಗಿದೆ. ವರದಿಗಳ ಪ್ರಕಾರ, ಭಾರತವು 2023ರಲ್ಲಿ ಸುಮಾರು 1.5 ಶತಕೋಟಿ ಡಾಲರ್ ಆಟೋ ಬಿಡಿಭಾಗಗಳನ್ನು ಅಮೆರಿಕಕ್ಕೆ ರಫ್ತು ಮಾಡಿದೆ. ಆದರೆ, ಇದೀಗ ಹೊಸ ಆಮದು ಸುಂಕಗಳು ಈ ವಿಚಾರದಲ್ಲಿ ಪ್ರಮುಖ ಅಡೆತಡೆಗಳನ್ನು ಉಂಟುಮಾಡಬಹುದು. ಹೇಗೆಂದರೆ, ಸ್ವದೇಶಿ ಕಾರುಗಳಿಗೆ ಸುಂಕ ವಿನಾಯಿತಿ ಇರುವುದರಿಂದ ಅಲ್ಲಿನ ವಾಹನಗಳಿಗೆ ಬೇಡಿಕೆ ಹೆಚ್ಚಾಗಬಹುದು. ಇನ್ನು ಅಮೆರಿಕ ಮೂಲದ ವಾಹನ ತಯಾರಕರಿಗೆ ಇನ್ಪುಟ್ ವೆಚ್ಚವನ್ನು ಹೆಚ್ಚಿಸಬಹುದು ಮತ್ತು ಇದರಿಂದಾಗಿ ಭಾರತೀಯ ಬಿಡಿಭಾಗಗಳಿಗೆ ಬೇಡಿಕೆ ಕಡಿಮೆಯಾಗಬಹುದು. ಇನ್ನು ಪೂರೈಕೆದಾರರು ಲಾಭದ ವಿಚಾರದಲ್ಲಿ ಒತ್ತಡ ಎದುರಿಸಬೇಕಾಗುತ್ತದೆ. ಹೀಗಾಗಿ ಆಮದು ಸುಂಕ ಹೊಸ ತಲೆನೋವಾಗುವ ಸಾಧ್ಯತೆ ಇದೆ.
ಭಾರತದ ವೇಗವಾಗಿ ಬೆಳೆಯುತ್ತಿರುವ ಆಟೋ ಬಿಡಿಭಾಗಗಳ ವಲಯವು ತಕ್ಷಣವೇ ಇದರ ಪರಿಣಾಮವನ್ನು ಅನುಭವಿಸುವ ಸಾಧ್ಯತೆಯಿದೆ. ಭಾರತ್ ಫೋರ್ಜ್ ಮತ್ತು ಮದರ್‌ಸನ್ ಸುಮಿಯಂತಹ ದೊಡ್ಡ ಭಾರತೀಯ ಪೂರೈಕೆದಾರರು ತಮ್ಮ ಜಾಗತಿಕ ಕಾರ್ಯತಂತ್ರಗಳನ್ನು ಮರು ವಿಮರ್ಶಿಸಬೇಕಾಗುತ್ತದೆ. ಯುರೋಪ್, ಆಗ್ನೇಯ ಏಷ್ಯಾ ಅಥವಾ ಆಫ್ರಿಕಾದಲ್ಲಿ ಹೊಸ ಮಾರುಕಟ್ಟೆಗಳನ್ನುಹುಡುಕಬೇಕಾಗಬಹುದು. ತಮ್ಮ ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಳ್ಳಲು ಮತ್ತು ದೀರ್ಘಕಾಲೀನ ಬೆಳವಣಿಗೆಯನ್ನು ಸಕ್ರಿಯಗೊಳಿಸಲು ಬೇರೆ ಮಾರುಕಟ್ಟೆ ಅತ್ಯಗತ್ಯವಾಗಬಹುದು. (ಏಜೆನ್ಸೀಸ್)