ಭಾರತಕ್ಕೆ ವಿಧಿಸಿರುವ ಹೆಚ್ಚುವರಿ ಸುಂಕದಿಂದ ಹಿಂದೆ ಸರಿಯುತ್ತಾ ಅಮೆರಿಕ? ಶಾಕಿಂಗ್​ ಹೇಳಿಕೆ ಕೊಟ್ಟ ಟ್ರಂಪ್! Donald Trump

Donald Trump
Published on

Donald Trump : ಭಾರತದ ಮೇಲೆ ಹೆಚ್ಚುವರಿಯಾಗಿ ಶೇ. 25 ರಷ್ಟು ಸುಂಕ ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರವನ್ನು ವ್ಯಾಪಕವಾಗಿ ಟೀಕಿಸಲಾಗುತ್ತಿದೆ. ರಷ್ಯಾದೊಂದಿಗೆ ಭಾರತ ತೈಲ ವ್ಯಾಪಾರ ಮಾಡುತ್ತಿರುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ಟ್ರಂಪ್​ ಹೇಳಿದ್ದಾರೆ. ಆದರೆ, ಅದೇ ರೀತಿ ವ್ಯವಹಾರ ಮಾಡುತ್ತಿರುವ ಯುರೋಪಿಯನ್ ಒಕ್ಕೂಟ ಮತ್ತು ಚೀನಾದಂತಹ ದೇಶಗಳನ್ನು ಬಿಟ್ಟು ತಮಗೆ ಮಾತ್ರ ಹೆಚ್ಚುವರಿ ಸುಂಕ ವಿಧಿಸಿರುವ ಟ್ರಂಪ್ ಕ್ರಮವನ್ನು ಭಾರತ ವಿರೋಧಿಸಿದೆ. ಈ ಸಂದರ್ಭದಲ್ಲಿ, ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ನಿರ್ಧಾರದಿಂದ ಟ್ರಂಪ್ ಹಿಂದೆ ಸರಿಯುತ್ತಾರೆಯೇ? ಈ ಬಗ್ಗೆ ಅವರು ಏನು ಹೇಳಿದ್ದಾರೆ ಅನ್ನೋದನ್ನು ನಾವೀಗ ತಿಳಿಯೋಣ.

ಸ್ಥಳೀಯ ಸಮಯದ ಪ್ರಕಾರ, ಟ್ರಂಪ್​ ಅವರು ಬುಧವಾರ ಸಂಜೆ (ಭಾರತೀಯ ಸಮಯದ ಪ್ರಕಾರ ಗುರುವಾರ ಬೆಳಗ್ಗೆ) ಶ್ವೇತಭವನದಲ್ಲಿರುವ ತಮ್ಮ ಓವಲ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ರಷ್ಯಾದೊಂದಿಗಿನ ತೈಲ ವ್ಯಾಪಾರ ಮುಂದುವರಿದರೆ ಭಾರತದ ಮೇಲೆ ದ್ವಿತೀಯ ನಿರ್ಬಂಧಗಳು ಅಗತ್ಯವಾಗುತ್ತವೆ ಎಂದು ಎಚ್ಚರಿಸಿದರು. ಆದಾಗ್ಯೂ, ಚೀನಾ ಕೂಡ ರಷ್ಯಾದಿಂದ ತೈಲವನ್ನು ಖರೀದಿಸುತ್ತದೆ. ಆದರೆ, ನೀವು ಭಾರತವನ್ನೇ ಟಾರ್ಗೆಟ್​ ಮಾಡಿದ್ದೇಕೆ ಎಂದು ಕೆಲ ಮಾಧ್ಯಮಗಳು ಪ್ರಶ್ನೆ ಕೇಳಿದವು. ಇದಕ್ಕೆ ಉತ್ತರಿಸಿದ ಟ್ರಂಪ್​, ಹೆಚ್ಚುವರಿ ಸುಂಕ ನಿರ್ಧಾರ ತೆಗೆದುಕೊಂಡು ಕೇವಲ 8 ಗಂಟೆಗಳು ಕಳೆದಿವೆ. ಏನಾಗುತ್ತದೆ ಎಂದು ಕಾದು ನೋಡೋಣ. ನೀವು ಹೆಚ್ಚಿನ ಸುಂಕಗಳನ್ನು ನೋಡಲಿದ್ದೀರಿ. ಅಲ್ಲದೆ, ನೀವು ಹಲವು ದ್ವಿತೀಯ ನಿರ್ಬಂಧಗಳನ್ನು ಸಹ ನೋಡಲಿದ್ದೀರಿ ಎಂದರು.

ಅಂದಹಾಗೆ, ಯೂಕ್ರೇನ್ ಬಿಕ್ಕಟ್ಟಿನ ಸಂದರ್ಭದಲ್ಲಿ ಅಮೆರಿಕ, ರಷ್ಯಾದ ಮೇಲೆ ನಿರ್ಬಂಧಗಳನ್ನು ವಿಧಿಸಿದೆ ಎಂದು ಎಲ್ಲರಿಗೂ ತಿಳಿದಿದೆ. ಅಲ್ಲದೆ, ರಷ್ಯಾದಿಂದ ತೈಲ ಖರೀದಿಸುವ ಇತರ ದೇಶಗಳ ಮೇಲೆಯೂ ದ್ವಿತೀಯ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆಗಳಿವೆ. ಈ ಸಂದರ್ಭದಲ್ಲಿ, ಭಾರತದ ಮೇಲೆ ಎರಡು ಕಂತುಗಳಲ್ಲಿ 50 ಸುಂಕಗಳನ್ನು ವಿಧಿಸಲಾಗಿದೆ. ಈಗ ನಿರ್ಬಂಧಗಳ ಎಚ್ಚರಿಕೆಗಳನ್ನು ಸಹ ನೀಡಿದ್ದಾರೆ. ಆದಾಗ್ಯೂ, ಯೂಕ್ರೇನ್-ರಷ್ಯಾ ಶಾಂತಿ ಮಾತುಕತೆಯ ಭಾಗವಾಗಿ ಟ್ರಂಪ್ ಶೀಘ್ರದಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಯೂಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಶ್ವೇತಭವನ ಅಧಿಕೃತವಾಗಿ ಘೋಷಿಸಿದೆ. ಈ ಸಂದರ್ಭದಲ್ಲಿ, ಉದ್ವಿಗ್ನತೆ ಕಡಿಮೆಯಾದರೆ ಭಾರತದ ಮೇಲಿನ ಹೆಚ್ಚುವರಿ ಸುಂಕಗಳನ್ನು ತೆಗೆದುಹಾಕುತ್ತೀರಾ ಎಂದು ಟ್ರಂಪ್ ಅವರನ್ನು ಇದೇ ಸಂದರ್ಭದಲ್ಲಿ ಕೇಳಲಾಯಿತು. ಈ ವಿಷಯವನ್ನು ನಂತರ ಪರಿಗಣಿಸುವುದಾಗಿ ಟ್ರಂಪ್ ಅವರು ಉತ್ತರಿಸಿದರು.

ರಷ್ಯಾದಿಂದ ತೈಲ ಖರೀದಿಸುತ್ತಿರುವ ಚೀನಾದ ಮೇಲೂ ಸುಂಕ ವಿಧಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಈಗಲೇ ಹೇಳಲು ಸಾಧ್ಯವಿಲ್ಲ. ಬಹುಶಃ ಅದು ಆಗಬಹುದು. ಭಾರತದ ವಿಷಯದಲ್ಲಿಯೂ ಈಗಾಗಲೇ ಅದು ಸಂಭವಿಸಿದೆ. ಇತರ ಕೆಲವು ದೇಶಗಳಿಗೂ ಇದು ಸಂಭವಿಸಬಹುದು. ಚೀನಾ ಕೂಡ ಅವುಗಳಲ್ಲಿ ಇರಬಹುದು ಎಂದು ಹೇಳಿದರು.

ಯೂಕ್ರೇನ್ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸುತ್ತಿರುವ ರಷ್ಯಾದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ದೇಶಗಳ ಮೇಲೆ ಅಮೆರಿಕ ಕೆಂಡ ಕಾರುತ್ತಿದೆ. ಈ ಸಂದರ್ಭದಲ್ಲಿ, ಟ್ರಂಪ್​ ಅವರು ಭಾರತದ ಮೇಲೆ ಮೊದಲು ಶೇ. 25 ರಷ್ಟು ಮತ್ತು ಇತ್ತೀಚೆಗೆ ಮತ್ತೆ ಶೇ. 25 ರಷ್ಟು ಸುಂಕವನ್ನು ಘೋಷಿಸಿದ್ದಾರೆ. ಇದರೊಂದಿಗೆ, ಭಾರತದ ಮೇಲಿನ ಅಮೆರಿಕದ ಸುಂಕಗಳು ಶೇ. 50 ರಷ್ಟು ತಲುಪಿವೆ. ಆದರೆ, ಈ ನಿರ್ಧಾರಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net