

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್ಗೆ ಮಹಾಮಾರಿ ಕರೊನಾ ವೈರಸ್ ತಗುಲಿರುವುದಾಗಿ ಶುಕ್ರವಾರ ವರದಿಯಾಗಿದೆ.
ಟ್ವೀಟ್ ಮೂಲಕ ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದು, ನನಗೆ ಮತ್ತು ಮೆಲನಿಯಾ ಟ್ರಂಪ್ಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಕ್ವಾರಂಟೈನ್ ಮತ್ತು ಚೇತರಿಕೆ ಪ್ರಕ್ರಿಯೆ ತಕ್ಷಣ ಆರಂಭವಾಗಿದೆ ಎಂದು ಹೇಳಿದ್ದಾರೆ.
ತಮ್ಮ ಆಪ್ತರಲ್ಲಿ ಒಬ್ಬರಾದ ಹೋಪ್ ಹಿಕ್ಸ್ ಅವರಿಗೆ ಕರೊನಾ ಪಾಸಿಟಿವ್ ಆದ ಬೆನ್ನಲ್ಲೇ ಟ್ರಂಪ್ಗೆ ಸೋಂಕು ತಗುಲಿರುವುದು ದೃಢವಾಗಿದೆ. ಮಂಗಳವಾರ ಕ್ಲೆವೆಲ್ಯಾಂಡ್ನಲ್ಲಿ ನಡೆದ ಕಾರ್ಯಕ್ರಮಕ್ಕೆ ಹಿಕ್ಸ್ ಮತ್ತು ಟ್ರಂಪ್ ಒಟ್ಟಿಗೆ ಪ್ರಯಾಣ ಬೆಳೆಸಿದ್ದರು.
ಅಮೆರಿಕಾ ಅಧ್ಯಕ್ಷ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್ ಓಡಾಟ ಜೋರಾಗಿದೆ. ಇನ್ನು ಹಿಕ್ಸ್ ಅವರು ಕೂಡ ಟ್ರಂಪ್ ಜತೆ ಅನೇಕ ಬಾರಿ ಪ್ರಯಾಣ ಮಾಡಿದ್ದು, ಹಿಕ್ಸ್ಗೆ ಕರೊನಾ ತಗುಲಿರುವುದು ದೃಢವಾದ ಬೆನ್ನಲ್ಲೇ ಟ್ರಂಪ್ ಅವರಿಗೂ ಕರೊನಾ ಪರೀಕ್ಷೆ ಮಾಡಿಸಲಾಗಿತ್ತು. ಇದೀಗ ಅವರಿಗೂ ಪಾಸಿಟಿವ್ ಬಂದಿದೆ.
ಟ್ರಂಪ್ ಅವರಿಗೆ 74 ವರ್ಷ ವಯಸ್ಸಾಗಿದೆ. ಕರೊನಾ ಹೆಚ್ಚಾಗಿ ವಯಸ್ಕರಿಗೆ ತೊಂದರೆ ಉಂಟು ಮಾಡುವುದರಿಂದ ಟ್ರಂಪ್ ಅವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಅಲ್ಲದೆ, ಅಮೆರಿಕದಲ್ಲಿ ಕರೊನಾ ಮೃತ್ಯುಕೂಪವನ್ನೇ ನಿರ್ಮಿಸಿದ್ದು, ಈಗಾಗಲೇ ಮಹಾಮಾರಿಗೆ 2 ಲಕ್ಷಕ್ಕಿಂತ ಹೆಚ್ಚು ಮಂದಿ ಮೃತರಾಗಿದ್ದಾರೆ. (ಏಜೆನ್ಸೀಸ್)