ಫೆ.21 ರಿಂದ 24ರ ನಡುವೆ ಭಾರತಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭೇಟಿ: ಪ್ರಮುಖ ವ್ಯಾಪಾರ ಒಪ್ಪಂದಕ್ಕೆ ಸಹಿ ಸಾಧ್ಯತೆ

donald trump
Published on

ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಫೆ. 21 ರಿಂದ 24ರ ನಡುವೆ ರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ.

ಫೆಬ್ರವರಿ 21 ರಿಂದ 24 ರವರೆಗೆ ದೆಹಲಿಯ ಐಟಿಸಿ ಮೌರ್ಯ ಹೋಟೆಲ್ ನಲ್ಲಿ ಕೊಠಡಿಗಳನ್ನು ಬುಕ್​ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಟ್ರಂಪ್​ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜಂಟಿ ಸಾರ್ವಜನಿಕ ಸಮಾರಂಭಕ್ಕೆ ಒಂದು ದಿನ ಮೀಸಲಿಡಲಾಗಿದೆ. ಈ ಕಾರ್ಯಕ್ರಮ ಎಲ್ಲಿ ನಡೆಯಲಿದೆ ಎಂಬುದು ಇನ್ನು ನಿಗದಿಯಾಗಿಲ್ಲ. ಅಹಮದಾಬಾದ್​ನಲ್ಲಿ ಕಾರ್ಯಕ್ರಮ ನಡೆಯುವ ಸೂಚನೆ ಸಿಕ್ಕಿದೆ.

ಐಷಾರಾಮಿ ಐಟಿಸಿ ಮೌರ್ಯ ಹೋಟೆಲ್​ ಹಿಂದಿನ ಅಮೆರಿಕಾ ಅಧ್ಯಕ್ಷರಾದ ಬರಾಕ್​ ಒಬಾಮ ಹಾಗೂ ಬಿಲ್​ ಕ್ಲಿಂಟನ್​ ರಾಷ್ಟ್ರಕ್ಕೆ ಆಗಮಿಸಿದ್ದ ವೇಳೆ ಆತಿಥ್ಯ ನೀಡಿತ್ತು.

ಟ್ರಂಪ್ ಅವರ ಭಾರತ ಭೇಟಿಯ ಪ್ರಮುಖ ಉದ್ದೇಶ ವ್ಯಾಪಾರ ಒಪ್ಪಂದ ಎಂದು ನಿರೀಕ್ಷಿಸಲಾಗಿದೆ. ಉಭಯ ನಾಯಕರು ಇಂಡೋ-ಪೆಸಿಫಿಕ್, ಅಫ್ಘಾನಿಸ್ತಾನ, ಇರಾನ್ ಮತ್ತು ಪಾಕಿಸ್ತಾನ ಭಯೋತ್ಪಾದನೆ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರು ಅಫ್ಘಾನಿಸ್ತಾನದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಭಾರತದೊಂದಿಗೆ ಹಂಚಿಕೊಳ್ಳುವ ನಿರೀಕ್ಷೆಯಿದೆ. ಟ್ರಂಪ್ ಭೇಟಿಯ ಸಮಯದಲ್ಲಿ ಯಾವುದೇ ಹೊಸ ಸೇನಾ ಒಪ್ಪಂದ ನಡೆಯುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೀಗಿದ್ದರೂ ದಾಳಿಗೆ ಬಳಸುವ ಹೆಲಿಕಾಪ್ಟರ್‌ಗಳು, ಭಾರತೀಯ ನೌಕಾಪಡೆಗೆ ಅಗತ್ಯವಾದ ಬಹುಪಯೋಗಿ ಹೆಲಿಕಾಪ್ಟರ್‌ಗಳು ಮತ್ತು ಪಿ 8 ಐ ಮಲ್ಟಿ-ಮಿಷನ್ ವಿಮಾನಗಳನ್ನು ಅಮೆರಿಕದ ರಕ್ಷಣಾ ಗುತ್ತಿಗೆದಾರರಿಂದ ಖರೀದಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫೆಬ್ರವರಿ 24 ರಿಂದ ಮಾರ್ಚ್ 30 ರವರೆಗೆ ಜಿನೀವಾದಲ್ಲಿ ನಡೆಯಲಿರುವ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (ಯುಎನ್‌ಹೆಚ್‌ಆರ್‌ಸಿ) ಅಧಿವೇಶನದಲ್ಲಿ ಪಾಕಿಸ್ತಾನ ಪಾಲ್ಗೊಂಡು ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡಿದ್ದ ಸಂವಿಧಾನದ 370 ವಿಧಿ ರದ್ದು ಪಡಿಸಿರುವ ಬಗ್ಗೆ ತೀವ್ರ ವಾಗ್ದಾಳಿ ನಡೆಸುವ ಮಾಹಿತಿ ಇದ್ದು. ಇದೆ ವೇಳೆ ಅಮೆರಿಕಾದ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡುತ್ತಿರುವುದು ಮಹತ್ವ ಪಡೆದುಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net