

ವಾಷಿಂಗ್ಟನ್: ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲೇ ವೈಟ್ಹೌಸ್ ಹೊರಗೆ ಶೂಟೌಟ್ ನಡೆದಿದೆ. ತತ್ಕ್ಷಣವೇ ಸುದ್ದಿಗೋಷ್ಠಿ ಸ್ಥಗಿತಗೊಳಿಸಿದ ಅಧ್ಯಕ್ಷ ಟ್ರಂಪ್ ಶ್ವೇತಭವನದೊಳಕ್ಕೆ ಹೋದರು. ಅಮೆರಿಕದ ಸೀಕ್ರೆಟ್ ಸರ್ವೀಸ್ ಏಜೆಂಟ್ಸ್ ಬಂದೂಕುಧಾರಿ ವ್ಯಕ್ತಿಯನ್ನು ಹೊಡೆದುರುಳಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಧ್ಯಕ್ಷ ಟ್ರಂಪ್ ಅವರು, ಶ್ವೇತ ಭವನದ ಹೊರಗೆ ಶೂಟ್ ಔಟ್ ಆಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸೀಕ್ರೆಟ್ ಸರ್ವೀಸ್ ಏಜೆಂಟ್ಸ್ಗೆ ಧನ್ಯವಾದ ಹೇಳುತ್ತೇನೆ. ದೊಡ್ಡ ಅನಾಹುತವನ್ನು ಅವರು ಕ್ಷಿಪ್ರವಾಗಿ ತಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಣದಲ್ಲಿರಿಸಿಕೊಂಡಿದ್ಧಾರೆ. ಯಾರನ್ನೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಹುಶಃ ಸೀಕ್ರೆಟ್ ಸರ್ವೀಸ್ ಏಜೆಂಟ್ಸ್ ಹೊಡೆದುರುಳಿಸಿದ ಬಂದೂಕುಧಾರಿ ವ್ಯಕ್ತಿಯೇ ಇರಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
ಶ್ವೇತಭವನದ ಆವರಣದಿಂದ ಹೊರಗೆ ನಡೆದ ಘಟನೆ ಇದಾಗಿದ್ದು, ಇದು ನನ್ನನ್ನು ಗುರಿಯಾಗಿಸಿದ್ದಲ್ಲ ಎಂದು ಭಾವಿಸಿದ್ದೇನೆ. ಯಾವುದೇ ರೀತಿಯಲ್ಲೂ ವೈಟ್ಹೌಸ್ನ ಭದ್ರತಾ ಲೋಪವಾಗಿಲ್ಲ ಎಂದು ನಂಬಿದ್ದೇನೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಸೀಕ್ರೆಟ್ ಸರ್ವೀಸ್ ನೀಡಿರುವ ಮಾಹಿತಿ ಪ್ರಕಾರ, ಹದಿನೇಳನೇ ರಸ್ತೆ ಮತ್ತು ಪೆನ್ಸಿಲ್ವೇನಿಯಾ ಏವ್ ನಡುವೆ ಈ ಶೂಟೌಟ್ ಆಗಿದ್ದು. ಅದರಲ್ಲಿ ಭಾಗಿಯಾದ ಅಧಿಕಾರಿ ಮಾಹಿತಿ ನೀಡಿದ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ. ಬಂದೂಕುಧಾರಿ ವ್ಯಕ್ತಿ ಮತ್ತು ಸೀಕ್ರೆಟ್ ಸರ್ವೀಸ್ ಆಫೀಸರ್ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಭಾಗದ ರಸ್ತೆಯನ್ನು ಬಂದ್ ಮಾಡಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. (ಏಜೆನ್ಸೀಸ್)