ಭಾರತದ ಜತೆ ವ್ಯಾಪಾರ ಯುದ್ಧ: ಟ್ರಂಪ್​ ಬಗ್ಗೆ ಅಮೆರಿಕದ ಖ್ಯಾತ ಅರ್ಥಶಾಸ್ತ್ರಜ್ಞ ಕೊಟ್ಟ ಹೇಳಿಕೆ ವೈರಲ್​! Donald Trump

Donald Trump
Published on

Donald Trump : ವಿಶ್ವದ ಇತರ ದೇಶಗಳ ವಿರುದ್ಧ ವ್ಯಾಪಾರ ಯುದ್ಧವನ್ನು ಪ್ರಾರಂಭಿಸುವ ಮೂಲಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮನ್ನು ತಾವೇ ನಾಶಮಾಡಿಕೊಳ್ಳುತ್ತಿದ್ದಾರೆ ಎಂದು ಅಮೆರಿಕದ ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸ್ಟೀವ್ ಹ್ಯಾಂಕೆ ಹೇಳಿದ್ದಾರೆ.

ಎನ್​ಡಿಟಿವಿಗೆ ಜೊತೆ ಮಾತನಾಡಿರುವ ಸ್ಟೀವ್ ಹ್ಯಾಂಕೆ, ಡೊನಾಲ್ಡ್​ ಟ್ರಂಪ್ ಅವರ ಸುಂಕ ನಿರ್ಧಾರವು ಸಂಪೂರ್ಣವಾಗಿ ಅಸಂಬದ್ಧ ಮತ್ತು ದುರ್ಬಲವಾದದ್ದು. ಟ್ರಂಪ್​ ಅವರ ಅರ್ಥಶಾಸ್ತ್ರವು ಸಂಪೂರ್ಣವಾಗಿ ತಪ್ಪಾಗಿದೆ ಎಂದು ಟೀಕಿಸಿದ್ದಾರೆ. ಅಂದಹಾಗೆ, ರಷ್ಯಾ ಜೊತೆ ತೈಲ ಖರೀದಿ ವ್ಯವಹಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಭಾರತದ ಮೇಲೆ ಅಮೆರಿಕ ಹೆಚ್ಚುವರಿ 25 ರಷ್ಟು ಸುಂಕ ವಿಧಿಸಿರುವ ಬೆನ್ನಲ್ಲೇ ಸ್ಟೀವ್ ಹ್ಯಾಂಕೆ ಅವರಿಂದ ಈ ಹೇಳಿಕೆ ಬಂದಿದೆ.

ಇಲ್ಲಿ ನನ್ನ ಮುಖ್ಯ ವಿಷಯವೇನೆಂದರೆ ನೆಪೋಲಿಯನ್ ಸಲಹೆಯನ್ನು ಅನುಸರಿಸುವುದು ಉತ್ತಮ. ತನ್ನನ್ನು ತಾನೇ ನಾಶಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಶತ್ರುಗಳ ಜೊತೆಗೆ ಎಂದಿಗೂ ಹಸ್ತಕ್ಷೇಪ ಮಾಡಬೇಡಿ ಎಂದು ನೆಪೋಲಿಯನ್​​ ಹೇಳಿದ್ದರು. ಅದೇ ರೀತಿ ಟ್ರಂಪ್ ಅವರು ತನ್ನನ್ನು ತಾನು ನಾಶಪಡಿಸಿಕೊಳ್ಳುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ ಅಂತ ಪ್ರೊಫೆಸರ್ ಹಾಂಕೆ ತಿಳಿಸಿದರು.

ಭಾರತದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ತಮ್ಮ ಕಾರ್ಡ್‌ಗಳನ್ನು ಎದೆಯ ಹತ್ತಿರ ಇಟ್ಟುಕೊಂಡು ಸ್ವಲ್ಪ ಸಮಯದವರೆಗೆ ತಾಳ್ಮೆಯಿಂದ ಕಾಯಬೇಕೆಂದು ನಾನು ಭಾವಿಸುತ್ತೇನೆ. ನಾನು ಈ ರೀತಿ ಹೇಳಲು ಒಂದು ಕಾರಣವಿದೆ. ಅದೇನೆಂದರೆ, ಟ್ರಂಪ್ ಅವರ ಕಾರ್ಡ್‌ಗಳ ಮನೆ ಆದಷ್ಟು ಬೇಗ ಕುಸಿಯುತ್ತದೆ ಎಂದು ಭಾವಿಸಿದ್ದೇವೆ. ಆರ್ಥಿಕತೆ ಮೇಲಿನ ಅಮೆರಿಕ ಸುಂಕ ಸಮರ ಮರಳಿನ ಮೇಲೆ ನಿಂತಿದೆ ಎಂದು ಹಾಂಕೆ ಹೇಳಿದರು. ಇದರ ಅರ್ಥ ಕೇವಲ ಮರಳಿಂದ ಕಟ್ಟಿದ ಮನೆ ಬೇಗ ಕುಸಿಯುತ್ತದೆ ಎಂಬುದು.

ಅಮೆರಿಕನ್ನರ ಖರ್ಚು ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕಿಂತ ಹೆಚ್ಚಿರುವುದರಿಂದ ಅಮೆರಿಕದಲ್ಲಿ ಭಾರಿ ವ್ಯಾಪಾರ ಕೊರತೆ ಇದೆ ಎಂದು ಪ್ರೊಫೆಸರ್ ಹಾಂಕೆ ಹೇಳಿದ್ದಾರೆ. ಆದ್ದರಿಂದ ಟ್ರಂಪ್​ ಅವರ ಅರ್ಥಶಾಸ್ತ್ರವು ಸಂಪೂರ್ಣವಾಗಿ ತಪ್ಪಾಗಿದೆ ಎಂದು ಟೀಕಾ ಪ್ರಹಾರ ನಡೆಸಿದರು.

ಅಂದಹಾಗೆ, ಭಾರತ ಸರ್ಕಾರ ರಷ್ಯಾದ ತೈಲವನ್ನು ನಿರಂತರವಾಗಿ ಆಮದು ಮಾಡಿಕೊಳ್ಳುತ್ತಿರುವುದಕ್ಕೆ ಪ್ರತಿಯಾಗಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತದ ಮೇಲೆ ಡೊನಾಲ್ಡ್​ ಟ್ರಂಪ್​ ಹೆಚ್ಚುವರಿಯಾಗಿ ಶೇ. 25 ರಷ್ಟು ಸುಂಕವನ್ನು ವಿಧಿಸಿದರು. ಈ ಮೂಲಕ ಒಟ್ಟು 50 ರಷ್ಟು ಸುಂಕವನ್ನು ಭಾರತಕ್ಕೆ ವಿಧಿಸಲಾಗಿದೆ. ಅಲ್ಲದೆ, ರಷ್ಯಾ ಜೊತೆ ವ್ಯವಹಾರವನ್ನು ಮುಂದುವರಿಸಿದರೆ, ದ್ವಿತೀಯ ನಿರ್ಬಂಧಗಳನ್ನು ವಿಧಿಸುವುದಾಗಿ ಟ್ರಂಪ್​ ಎಚ್ಚರಿಸಿದ್ದಾರೆ ಮತ್ತು ಭಾರತದ ಜೊತೆ ಯಾವುದೇ ಸಂಧಾನ ಮಾತುಕತೆ ಇಲ್ಲ ಎಂದು ಹೇಳಿದೆ.

ಅಮೆರಿಕದ ಈ ಕ್ರಮವನ್ನು ಭಾರತ ಖಂಡಿಸಿದೆ. ಜವಳಿ, ಸಾಗರ ಮತ್ತು ಚರ್ಮದ ರಫ್ತುಗಳಂತಹ ಕ್ಷೇತ್ರಗಳ ಮೇಲೆ ಸುಂಕ ಹೆಚ್ಚಳ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಇದೊಂದು ಅನ್ಯಾಯಯುತ, ನ್ಯಾಯಸಮ್ಮತವಲ್ಲದ ಮತ್ತು ಅವಿವೇಕದ ಕ್ರಮ ಎಂದು ಭಾರತ ಟೀಕಿಸಿದೆ. ನಮ್ಮ ಮೇಲಿನ ಆರ್ಥಿಕ ಒತ್ತಡದ ನಡುವೆಯೂ ನಾವು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.

ಭಾರತದ ಮೇಲೆ ಅಕ್ರಮ ವ್ಯಾಪಾರ ಒತ್ತಡ ಹೇರುತ್ತಿರುವ ಟ್ರಂಪ್ ಅವರನ್ನು ರಷ್ಯಾ ಮತ್ತು ಚೀನಾ ಎರಡೂ ದೇಶಗಳು ಟೀಕಿಸಿವೆ. ರಷ್ಯಾದೊಂದಿಗಿನ ವ್ಯಾಪಾರ ಸಂಬಂಧವನ್ನು ನಿಲ್ಲಿಸುವಂತೆ ಬೇರೆ ದೇಶಗಳನ್ನು ಒತ್ತಾಯಿಸುತ್ತಿರುವ ಪ್ರಯತ್ನಗಳನ್ನು ನಾವು ನೋಡುತ್ತಿದ್ದೇವೆ. ಇದನ್ನು ನಾವು ಕಾನೂನುಬದ್ಧವೆಂದು ಪರಿಗಣಿಸುವುದಿಲ್ಲ ಎಂದು ರಷ್ಯಾದ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ವರದಿಗಾರರಿಗೆ ತಿಳಿಸಿದ್ದಾರೆ.

ಇತರ ದೇಶಗಳನ್ನು ನಿಗ್ರಹಿಸಲು ಸುಂಕಗಳನ್ನು ಅಸ್ತ್ರವಾಗಿ ಬಳಸುವುದು ವಿಶ್ವಸಂಸ್ಥೆಯ ನಿಯಮವನ್ನು ಉಲ್ಲಂಘಿಸುತ್ತದೆ ಮತ್ತು WTO ನಿಯಮಗಳನ್ನು ದುರ್ಬಲಗೊಳಿಸುತ್ತದೆ. ಇದೊಂದು ಸಮರ್ಥನೀಯವಲ್ಲದ ಕ್ರಮ ಆಗಿದೆ ಎನ್ನುವ ಮೂಲಕ ಚೀನಾದ ರಾಯಭಾರಿ ಕ್ಸು ಫೀಹಾಂಗ್ ಅವರು ಟ್ರಂಪ್ ಅವರನ್ನು ತರಾಟೆಗೆ ತೆಗೆದುಕೊಂಡರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net