

ಯುದ್ಧಪೀಡಿತ ಅಫ್ಘಾನಿಸ್ತಾನದ ಸ್ಥಿತಿ ಹದಗೆಟ್ಟಿದೆ. ಅಮೆರಿಕದ ಹಲವು ವರ್ಷಗಳ ಸಮರದ ಬಳಿಕವೂ ತಾಲಿಬಾನಿಗಳ ಶಕ್ತಿ ಕುಂದಿಲ್ಲ. ಹಿಂದೊಮ್ಮೆ ಶಾಂತಿ ಮಾತುಕತೆಯನ್ನು ರದ್ದುಪಡಿಸಿದ್ದ ಟ್ರಂಪ್ ಶಾಂತಿಒಪ್ಪಂದಕ್ಕೆ ಹಸಿರು ನಿಶಾನೆ ತೋರಿದ್ದಾರೆ. ಇದು ಸಮರಪೀಡಿತ ಪ್ರದೇಶಕ್ಕೆ ಸಮಾಧಾನದ ಸಂಗತಿಯಾದರೂ, ತಾಲಿಬಾನ್ ಉಪಟಳ ಹಿನ್ನೆಲೆಯಲ್ಲಿ ಭಾರತಕ್ಕೆ ಆತಂಕ ಕಾಡುತ್ತಿದೆ.
ಯುದ್ಧ ಸಂತ್ರಸ್ತ ಅಫ್ಘಾನಿಸ್ತಾನದಲ್ಲಿ ಇರುವ ತನ್ನ ಸೇನಾಪಡೆಗಳನ್ನು ಹಿಂಪಡೆಯಲು ಬಯಸಿರುವ ಅಮೆರಿಕ, ಫೆಬ್ರವರಿ 29ರಂದು ತಾಲಿಬಾನ್ ಸಂಘಟನೆ ಜತೆ ಒಡಂಬಡಿಕೆ ಮಾಡಿಕೊಳ್ಳಲಿದೆ. ‘ಕಳೆದ ಹತ್ತು ದಿನಗಳಿಂದ ಆಫ್ಘನ್ನಲ್ಲಿ ಯಾವುದೇ ಹಿಂಸಾಚಾರ ಪ್ರಕರಣಗಳು ಸಂಭವಿಸಿಲ್ಲ. ಶಾಂತಿ ಒಪ್ಪಂದಕ್ಕೆ ಅಲ್ಲಿ ಈಗ ಅನುಕೂಲಕರ ವಾತಾವರಣ ನಿರ್ವಣಗೊಂಡಿದೆ. ತಾಲಿಬಾನ್ ಸಂಘಟನೆಯೂ ಒಡಂಬಡಿಕೆಗೆ ಒಲವು ತೋರಿದೆ’ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಇತ್ತೀಚೆಗೆ ಹೇಳಿದ್ದರು. ಇದರ ಬೆನ್ನಲ್ಲೇ ಭಾರತ ಭೇಟಿಗೆ ಆಗಮಿಸಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ತಾಲಿಬಾನ್ ಜತೆಗಿನ ಶಾಂತಿ ಒಪ್ಪಂದಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ’ ಎಂದಿದ್ದರು.
ಕಳೆದ 10 ವರ್ಷಗಳಲ್ಲಿ ಸಂಭವಿಸಿದ ಹಿಂಸಾಕೃತ್ಯಗಳಲ್ಲಿ ಅಫ್ಘಾನಿಸ್ತಾನದ ಒಂದು ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ. ಕಳೆದ ಹತ್ತೊಂಬತ್ತು ವರ್ಷಗಳಿಂದ ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಯುದ್ಧ ನಡೆಯುತ್ತಿದೆ. ‘ಹಿಂಸೆಯಿಂದ ಬಹುತೇಕ ಅಫ್ಘಾನಿಸ್ತಾನದ ಯಾವೊಬ್ಬ ನಾಗರಿಕನು ಪಾರಾಗಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಹಿಂಸೆಗೆ ಒಳಗಾಗಿದ್ದಾನೆ. ಎಲ್ಲ ನಾಗರಿಕರನ್ನು ರಕ್ಷಿಸುವ ಮತ್ತು ಶಾಂತಿ ಸ್ಥಾಪನೆಯ ಪ್ರಯತ್ನಗಳು ಈಗ ನಡೆಯುತ್ತಿದೆ’ ಎಂದು ತನ್ನ ವರದಿಯಲ್ಲಿ ವಿವರಿಸಿತ್ತು.
ಆಫ್ಘನ್ನಲ್ಲಿ ಪ್ರಸಕ್ತ ಅಮೆರಿಕದ 14000 ಸೈನಿಕರು ಶಾಂತಿಪಾಲನೆ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಫೆಬ್ರವರಿ 29ರ ಒಪ್ಪಂದ ಅಂತಿಮಗೊಂಡರೆ ಈಗಿರುವ ಇಷ್ಟೂ ಪಡೆಗಳು ಅಮೆರಿಕಕ್ಕೆ ವಾಪಸಾಗಲಿವೆ. ಆದರೆ, ಅಮೆರಿಕ ಶಾಂತಿಪಾಲನಾ ಪಡೆಗಳು ನಿರ್ಗಮಿಸುವುದರಿಂದ ಭಾರತಕ್ಕೆ ತಲೆನೋವು ಹೆಚ್ಚಲಿದೆ.
ಪಾಕ್ ಸೇನೆಯಲ್ಲಿನ ಶಕ್ತಿಗಳು ಈಗಲೂ ಜಿಹಾದಿ ಸಿದ್ಧಾಂತಕ್ಕೇ ಅಂಟಿಕೊಂಡಿದ್ದು, ಅಮೆರಿಕ ಪಡೆಗಳ ಹಿಂದೆಗೆತವಾಗುತ್ತಿದ್ದಂತೆ ಭಾರತದ ಮೇಲೆ ದಾಳಿಯೆಸಗುವಂತೆ ಜಿಹಾದಿ ಗುಂಪುಗಳನ್ನು ಪ್ರಚೋದಿಸಲು ಸಾಧ್ಯವಿರುವುದರಿಂದ ಭಾರತ-ಪಾಕ್ ನಡುವೆ ಹೊಸದಾಗಿ ತಿಕ್ಕಾಟ ಹುಟ್ಟಿಕೊಳ್ಳುವ ಅಪಾಯವೂ ಇದೆ.
ಅಮೆರಿಕ ಶಾಂತಿಪಾಲನಾ ಪಡೆಗಳು ನಿರ್ಗಮಿಸುವುದರಿಂದ ಭಾರತ ಸಮಸ್ಯೆ ಎದುರಿಸಲಿದೆ. ಈಗ ಅಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಭಾರತ ಕೈಗೊಂಡಿದ್ದು, ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ಹಲವು ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ಆದರೆ, ಅವುಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ರಾಜತಾಂತ್ರಿಕ ಪರಿಣಿತರು ಕಳವಳ ವ್ಯಕ್ತಪಡಿಸಿದ್ದಾರೆ.
ಅಮೆರಿಕದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಅಫ್ಘಾನಿಸ್ತಾನದಲ್ಲಿ ಹಿಂಸಾಚಾರವನ್ನು ಕಡಿಮೆ ಮಾಡಲು ತಾಲಿಬಾನ್ ನಾಯಕ ಮುಲ್ಲಾ ಹಿಬತುಲ್ಲಾ ಅಖುಂಡ್ಜಾಡಾ ಒಪ್ಪಿಕೊಂಡಿದ್ದಾನೆ ಎಂದು ಇತ್ತೀಚೆಗೆ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿತ್ತು. ಶಾಂತಿ ಮಾತುಕತೆ ಕುರಿತು ಸಮನ್ವಯ ಸಮಿತಿಯನ್ನು ರಚಿಸಿದ್ದು, ಫಲಪ್ರದವಾಗಿದೆ ಎಂದು ಅಫ್ಘಾನಿಸ್ತಾನ ಸರ್ಕಾರ ತಿಳಿಸಿದೆ. ಶಾಂತಿ ಕುರಿತ ಎಲ್ಲ ಕ್ರಮಗಳು ಮತ್ತು ನಿಲುವುಗಳನ್ನು ರಾಜ್ಯ ಸಚಿವಾಲಯದ ಸಮನ್ವಯದೊಂದಿಗೆ ಕೈಗೊಳ್ಳಬೇಕು ಎಂದು ಅಧ್ಯಕ್ಷ ಅಶ್ರಫ್ ಘನಿ ಸುಗ್ರೀವಾಜ್ಞೆಯಲ್ಲಿ ಹೇಳಿದ್ದಾರೆ. ಶಾಂತಿ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ 14 ಸರ್ಕಾರಿ ಸಂಸ್ಥೆಗಳ ನಡುವಿನ ಪ್ರಯತ್ನಗಳನ್ನು ಸಚಿವಾಲಯದ ನೇತೃತ್ವದ ಸಮಿತಿ ಸಮನ್ವಯಗೊಳಿಸಲಿದೆ.
ಅಫ್ಘಾನಿಸ್ತಾನದ ದೀರ್ಘಕಾಲದ ಬಿಕ್ಕಟ್ಟಿಗೆ ಮಾತುಕತೆಯ ಮೂಲಕ ರಾಜಿ ಸೂತ್ರವನ್ನು ಕಂಡುಕೊಳ್ಳಲು 2018ರ ಅಕ್ಟೋಬರ್ನಲ್ಲಿ ದೋಹಾದಲ್ಲಿ ಅಮೆರಿಕ ಮತ್ತು ತಾಲಿಬಾನ್ ನಡುವೆ ಹಲವು ಸುತ್ತಿನ ಮಾತುಕತೆ ಪ್ರಾರಂಭವಾಯಿತು. ಕಾಬೂಲ್ನಲ್ಲಿ ಅಮೆರಿಕದ ಸೈನಿಕರು ಸೇರಿ 10 ಜನರನ್ನು ಕೊಂದ ತಾಲಿಬಾನ್ ನೀತಿಯಿಂದ ಸಂಬಂಧ ಮುರಿದುಹೋಗಿತ್ತು. ಅಮೆರಿಕ ಮತ್ತಷ್ಟು ಕಠಿಣಕ್ರಮಕ್ಕೆ ಮುಂದಾಗಿತ್ತು.
ಸೇನಾಪಡೆಗಳ ಹಿಂತೆಗೆತದ ನಂತರ ಅಫ್ಘಾನಿಸ್ತಾನದಾದ್ಯಂತ ತಾಲಿಬಾನ್ ಹತೋಟಿ ನೆಲೆಗೊಳ್ಳುವುದು ಅಸಂಭವವೇ. ಈ ಬಾರಿ ಜನಾಂಗೀಯ ಅಲ್ಪಸಂಖ್ಯಾತರು ಅಮೆರಿಕದ ನಿರ್ಗಮನಾನಂತರ ತಮ್ಮ ಹಿತಾಸಕ್ತಿಗಳ ರಕ್ಷಣೆಗೆ ಸಿದ್ಧರಾಗಿದ್ದಾರೆ ಮತ್ತು ಶಸ್ತ್ರಸಜ್ಜಿತರಾಗಿದ್ದಾರೆ. ಅಫ್ಘಾನಿಸ್ತಾನದಲ್ಲಿ ಶಾಂತಿಯುತ ಇತ್ಯರ್ಥವಾಗದೆ ವಾಯವ್ಯದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯ ಹಾಗೂ ಒಕ್ಕೂಟದ ರೀತಿಯಲ್ಲಿ ಆಡಳಿತಕ್ಕೊಳಗಾದ ಪ್ರದೇಶಗಳಲ್ಲಿ ಶಾಂತಿ ನೆಲೆಗೊಳ್ಳುವುದು ಸಾಧ್ಯವಿಲ್ಲ ಎಂಬ ಅರಿವು ಪಾಕಿಸ್ತಾನದಲ್ಲಿ ಹೆಚ್ಚುತ್ತಿದೆ. ತನ್ನ ಪಡೆಗಳ ಹಿಂತೆಗೆತದ ನಂತರ ಆಫ್ಘನ್ ರಾಷ್ಟ್ರೀಯ ಸೇನೆ (ಆಫ್ಘನ್ ನ್ಯಾಷನಲ್ ಆರ್ವಿು) ಪರಿಸ್ಥಿತಿ ಹತೋಟಿಗೆ ತೆಗೆದುಕೊಳ್ಳಬಲ್ಲದು ಎಂಬ ಭರವಸೆ ಅಮೆರಿಕದ್ದು. ಆದರೆ ಈ ಸೇನೆಯ ಈವರೆಗಿನ ಕಾರ್ಯಸಾಧನೆ ಈ ನಿರೀಕ್ಷೆಗೆ ತಕ್ಕಂತಿಲ್ಲ. ಅಫ್ಘಾನಿಸ್ತಾನ ಅಸ್ಥಿರವಾದರೆ ಬೇರಾವುದೇ ದೇಶಕ್ಕಿಂತ ಪಾಕಿಸ್ತಾನಕ್ಕೆ ಹೆಚ್ಚು ಧಕ್ಕೆಯಾಗುತ್ತದೆ. ಭಾರತದ ವಿಷಯಕ್ಕೆ ಬಂದರೆ, ಅಫ್ಘಾನಿಸ್ತಾನದಲ್ಲಿನ ಅಮೆರಿಕ ಪಡೆಗಳ ಹಿಂದೆಗೆತ ವಿದೇಶಾಂಗ ನೀತಿಗೆ ಸಂಬಂಧಿಸಿ ಅತಿದೊಡ್ಡ ಸವಾಲಾಗಿ ಪರಿಣಮಿಸಲಿದೆ. ಅಫ್ಘಾನಿಸ್ತಾನ ಕುರಿತಂತೆ ಅಮೆರಿಕ ತೀರಾ ಇತ್ತೀಚಿನವರೆಗೂ ಭಾರತದ ನಿಕಟ ಸಹಭಾಗಿಯಾಗಿತ್ತಾದರೂ, ಈಗ ಪಾಕಿಸ್ತಾನದೆಡೆಗೆ ‘ಸ್ನೇಹನೋಟ’ ಬೀರುತ್ತಿದೆ. ತಾಲಿಬಾನ್ ಪೂರ್ಣಪ್ರಮಾಣದ ರಾಜಕೀಯ ಪಕ್ಷವಾಗಲಿದೆ ಮತ್ತು ತನ್ನ ಸಿದ್ಧಾಂತವನ್ನಿಟ್ಟುಕೊಂಡು ಅಲ್ಲಿನ ಸರ್ಕಾರದ ಹುಟ್ಟಡಗಿಸಲು ಮುಂದಾಗುವುದಿಲ್ಲ ಎಂಬ ನಿರೀಕ್ಷೆಗೆ ಭಾರತದ ಸಹಮತವಿಲ್ಲ. ಅಲ್ ಖೈದಾ ತೊರೆದು ಆಫ್ಘನ್ ಸಂವಿಧಾನಕ್ಕೆ ಸಮ್ಮತಿಸುವ ಸಾಮರಸ್ಯ ಸೂತ್ರದ ಅನುಷ್ಠಾನವಾಗಬೇಕೆಂಬ ಪಟ್ಟನ್ನು ಭಾರತ ಮುಂದುವರಿಸಲಿದೆ.
ದಶಕಗಳಿಂದ ತಾಲಿಬಾನ್ ಹೋರಾಟ ಮಾಡುತ್ತಿದೆ. ಕಳೆದ 19 ವರ್ಷಗಳಿಂದ ನಾವು ಅಫ್ಘನ್ನಲ್ಲಿ ಶಾಂತಿಪಾಲನೆಗೆ ಶ್ರಮಿಸಿದ್ದೇವೆ. ಈಗ ಅಲ್ಲಿನ ವಾತಾವರಣ ತಿಳಿಯಾಗಿದೆ. ನಮ್ಮ ಪಡೆಗಳನ್ನು ಅಮೆರಿಕಕ್ಕೆ ವಾಪಸ್ ಕರೆಸಿಕೊಳ್ಳುವ ಕಾಲ ಕೂಡಿ ಬಂದಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಿದ್ದೇವೆ. ಫೆ.29ರಂದು ಅಂತಿಮ ಒಪ್ಪಂದ ಏರ್ಪಡಲಿದೆ.