

ಭೂಪಾಲ್: ನಾಯಿಯೊಂದರ ಮಾಲೀಕತ್ವಕ್ಕೆ ಸಂಬಂಧಪಟ್ಟಂತೆ ಉಂಟಾದ ವ್ಯಾಜ್ಯ ಕಡೆಗೆ ನಾಯಿಯ ಡಿಎನ್ಎ ಪರೀಕ್ಷೆಯಲ್ಲಿ ಸುಖಾಂತ್ಯಗೊಂಡ ಘಟನೆ ಮಧ್ಯಪ್ರದೇಶದ ಹೋಶಂಗಾಬಾದ್ (ನರ್ಮದಾಪುರ) ನಲ್ಲಿ ನಡೆದಿದೆ.
ಲ್ಯಾಬ್ರಡಾರ್ ತಳಿಯ ಶ್ವಾನವೊಂದು ಕಳುವಾಗಿದೆ ಎಂದು ಕಳೆದ ತಿಂಗಳು ಹೋಶಂಗಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ಶಹಬಾದ್ ಖಾನ್ ಎನ್ನುವರು ದೂರು ದಾಖಲಿಸಿದ್ದರು. ಇದೇ ವೇಳೆ ಕಾರ್ತಿಕ್ ಎನ್ನುವರು ಕೂಡ ತನ್ನದೂ ನಾಯಿ ಕಳುವಾಗಿದೆ ಎಂದು ಅದೇ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ನಿಜವಾದ ವಿವಾದ ಶುರುವಾಗಿದ್ದು, ನಾಯಿ ಸಿಕ್ಕ ಮೇಲೆ.
ಹೌದು ನಾಯಿ ಸಿಕ್ಕ ಮೇಲೆ ಕಾರ್ತಿಕ್ ಹಾಗೂ ಶಹಬಾದ್ ಖಾನ್ ಅವರು ಸಿಕ್ಕಿರುವ ನಾಯಿಯ ಮಾಲೀಕ ತಾನು ಎಂದು ಪರಸ್ಪರ ಜಗಳವಾಡಿಕೊಂಡಿದ್ದರು. ಇದರಿಂದ ಗೊಂದಲಕ್ಕೆ ಒಳಗಾದ ಪೊಲೀಸರು, ನಾಯಿಯ ಮೂಲವನ್ನು ಶೋಧಿಸಿದ್ದಾರೆ. ಶಹಬಾದ್ ಖಾನ್ ಹೇಳುವ ಪ್ರಕಾರ ನಾಯಿಯ ಮೂಲ ಹೈದರಾಬಾದ್ ಎಂದು ಗೊತ್ತಾದ ತಕ್ಷಣ ಹೈದರಾಬಾದ್ನಲ್ಲಿ ಅದರ ಡಿಎನ್ಎ ಪರೀಕ್ಷೆ ಮಾಡಿಸಿದ್ದಾರೆ.
ಡಿಎನ್ಎ ಪರೀಕ್ಷೆಯಿಂದ ನಾಯಿ ಶಹಬಾದ್ ಖಾನ್ ಅವರಿಗೇ ಸೇರಿದ್ದು ಎಂದು ಖಚಿತವಾದ ನಂತರ ಆ ಮುದ್ದು ನಾಯಿಯನ್ನು ಪೊಲೀಸರು ಮಾಲೀಕನಿಗೆ ಹಸ್ತಾಂತರಿಸಿದ್ದಾರೆ. ಅಚ್ಚರಿಯಂದರೆ, ಇಷ್ಟೇಲ್ಲಾ ಮಾಡಲು ಶಹಬಾದ್ ಖಾನ್ 50 ಸಾವಿರ ರೂಪಾಯಿ ಖರ್ಚು ಮಾಡಿದ್ದರಂತೆ. (ಏಜೇನ್ಸಿಸ್).