ನಾಯಿ ಕಡಿತಕ್ಕೆ ನಿರ್ಲಕ್ಷ್ಯ ಸಲ್ಲದು: ಡಾ. ಗುಡದಪ್ಪ ಕಸಬಿ ಎಚ್ಚರಿಕೆ

17 smg 13
Published on

ಶಿವಮೊಗ್ಗ: ನಾಯಿ ಕಡಿದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಕೂಡಲೇ ವೈದ್ಯರ ಮಾರ್ಗದರ್ಶನದಂತೆ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ ಹೇಳಿದರು.

ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವದಿಂದ ರೇಬಿಸ್ ಕಾಯಿಲೆಯ ಗುಣಲಕ್ಷಣಗಳು ಮತ್ತು ನಿಯಂತ್ರಣ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಯಿ ಕಚ್ಚಿದ ತಕ್ಷಣ ಗಾಯವನ್ನು ಸೋಪು ಮತ್ತು ನೀರಿನಿಂದ ಸತತ 15 ನಿಮಿಷಗಳ ಕಾಲ ತೊಳೆಯುವುದರಿಂದ ಶೇ.80ರಷ್ಟು ರೇಬಿಸ್ ಬರದಂತೆ ತಡೆಗಟ್ಟಲು ಸಾಧ್ಯ ಎಂದರು.

ರೇಬಿಸ್ ಕಾಯಿಲೆಯು ಲಿಸ್ಸಾ ವೈರಸ್ ಸೋಂಕಿನಿಂದ ಉಂಟಾಗುವ ಮೆದುಳು ಮತ್ತು ನರಮಂಡಲಕ್ಕೆ ಸಂಬಂಧಿಸಿದ ಕಾಯಿಲೆಯಾಗಿದೆ. ಕಾಯಿಲೆ ಗುಣಲಕ್ಷಣಗಳು ಕಾಣಿಸಿಕೊಂಡ ನಂತರ ಬದುಕುಳಿಯಲು ಸಾಧ್ಯವಿಲ್ಲದ ಭಯಾನಕ ಕಾಯಿಲೆ ಆಗಿದೆ. ಇದು ಸೋಂಕಿತ ನಾಯಿ ಕಚ್ಚುವುದರಿಂದ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ ಎಂದರು.

ಪ್ರತಿ ವರ್ಷ ವಿಶ್ವದ 150 ರಾಷ್ಟ್ರಗಳಲ್ಲಿ 59000 ಜನರು ರೇಬಿಸ್ ನಿಂದ ಮರಣ ಹೊಂದುತ್ತಿದ್ದಾರೆ. ಭಾರತದಲ್ಲಿ ಪ್ರತಿ ವರ್ಷ 20 ಸಾವಿರ ಜನರು ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ನಾಯಿ ಕಚ್ಚಿದ ತಕ್ಷಣ ಗಾಯವನ್ನು ಸೋಪು ಮತ್ತು ಹರಿಯುವ ನೀರಿನಿಂದ ಸ್ವಚ್ಚವಾಗಿ ತೊಳೆದು, ನಂಜು ನಿರೋಧಕಗಳಾದ ಡೆಟಾಲ್ ಅಥವಾ ಪಾವಿಡೋನ್ ಅಯೋಡಿನ್ ಹಚ್ಚುವುದರ ಜತೆಗೆ ವೈದ್ಯರನ್ನು ಭೇಟಿ ಮಾಡಿ ರೇಬಿಸ್ ರೋಗ ನಿರೋಧಕ ಲಸಿಕೆಯನ್ನು 0, 3, 7, 14 ಮತ್ತು 28ನೇ ದಿನದಂದು ತಪ್ಪದೇ ಪಡೆಯುವ ಮೂಲಕ ಭಯಾನಕ ಕಾಯಿಲೆಯಿಂದ ರಕ್ಷಣೆ ಪಡೆಯಬೇಕೆಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷೆ ಸುಮತಿ ಜಿ.ಕುಮಾರಸ್ವಾಮಿ ಮಾತನಾಡಿದರು. ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗದ ಅಧ್ಯಕ್ಷ ಡಾ. ಅರುಣ್ ಮೈಸೂರ್ ಮತ್ತು ಜಿಲ್ಲಾ ಒಕ್ಕಲಿಗರ ಸಂಘ ಶಿವಮೊಗ್ಗದ ಅಧ್ಯಕ್ಷ ಎಚ್.ಬಿ.ಆದಿಮೂರ್ತಿ, ರೋಟರಿ ಶಿವಮೊಗ್ಗ ಪೂರ್ವದ ಕಾರ್ಯದರ್ಶಿ ಕುಮಾರಸ್ವಾಮಿ, ಮಾಜಿ ಸಹಾಯಕ ಗವರ್ನರ್‌ಗಳಾದ ಜಿ.ವಿಜಯಕುಮಾರ್, ಚಂದ್ರಹಾಸ್ ಪಿ ರಾಯ್ಕರ್, ರೋಟರಿ ಶಿವಮೊಗ್ಗ ಪೂರ್ವದ ಕಡಿದಾಳ್ ಗೋಪಾಲ್, ಡಾ. ಪರಮೆಶ್ವರ್ ಡಿ. ಶಿಗ್ಗಾಂವ್, ಎನ್.ಎಚ್.ಶ್ರೀಕಾಂತ್, ಅರುಣ್ ದೀಕ್ಷಿತ್, ಚಂದ್ರಶೇಖರಯ್ಯ, ಸತೀಶ್ ಚಂದ್ರ, ಸಂತೋಷ್, ಕೃಷ್ಣಮೂರ್ತಿ, ಮುಕುಂದೇಗೌಡ, ಕೇಶವಪ್ಪ, ಇನ್ನರ್‌ವೀಲ್ ಕ್ಲಬ್‌ನ ಮಾಜಿ ಅಧ್ಯಕ್ಷೆ ರೂಪಾ ಗುಡದಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net