doddmansa movie review: ಆಟೋ ಚಾಲಕ ಹೀರೋ ಆದಾಗ...

ದೊಡ್ಮನ್ಸ ಚಿತ್ರದ ಪೋಸ್ಟರ್​
ದೊಡ್ಮನ್ಸ ಚಿತ್ರದ ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ಆಟೋ ಡ್ರೈವರ್ ನ ಸಿನಿಮಾ ಕನಸು
  • ಶರತ್​ ಕೃಷ್ಣ ನಿರ್ದೇಶನ ಜತೆಗೆ ನಟನೆಯ ಜವಾಬ್ದಾರಿ
  • ದೀರ್ಘ ಕಥೆಯಲ್ಲಿ ಹೀರೋಯಿಸ್​ಂ ಗೆ ಅಧಿಕ ಒತ್ತು
ಚಿತ್ರ: ದೊಡ್ಮನ್ಸ
ನಿರ್ದೇಶನ: ಶರತ್ ಕೃಷ್ಣ
ತಾರಾಗಣ: ಶರತ್ ಕೃಷ್ಣ, ರೇಷ್ಮಾ ಲಿಂಗರಾಜಪ್ಪ, ಹುಲಿ ಕಾರ್ತಿಕ್, ಶಿಲ್ಪಾ ಶಿವಕುಮಾರ್, ಬಲ ರಾಜವಾಡಿ ಮತ್ತಿತರರು.
ಬೆಂಗಳೂರು: ಸಾಮಾನ್ಯ ವ್ಯಕ್ತಿಯೊಬ್ಬ ಹೀರೋ ಆಗುವ ಕಥೆಗಳು ಹಲವು ಬಂದಿವೆ. ಅದೇ ಹಾದಿಯಲ್ಲಿ ಶರತ್ ಕೃಷ್ಣ ನಿರ್ದೇಶನದ ‘ದೊಡ್ಮನ್ಸ’ ಕೂಡ ಮೂಡಿಬಂದಿದೆ. ಸಾಮಾನ್ಯ ಆಟೋ ಡ್ರೈವರ್ ಒಬ್ಬ ತನ್ನ ಆಸೆಯಂತೆ ಸಿನಿಮಾ ಹೀರೋ ಆಗುವುದೇ ಚಿತ್ರದ ಒನ್‌ಲೈನ್ ಸ್ಟೋರಿ.
ಶಿವು (ಶರತ್) ರಂಗಭೂಮಿ ಕಲಾವಿದ. ರಂಗತಂಡದಲ್ಲಿ ಮುಂಚೂಣಿಯಲ್ಲಿರುವ ಪ್ರತಿಭಾವಂತ. ಆತನ ಅಭಿನಯಕ್ಕೆ ಮನಸೋಲುವ ಗೆಳೆಯರು ಧಾರಾವಾಹಿ ಇಲ್ಲವೇ ಸಿನಿಮಾಗಳಲ್ಲಿ ನಟಿಸುವಂತೆ ತಿಳಿಸುತ್ತಾರೆ. ಹಿನ್ನೆಲೆ ಇರದ ಕಾರಣ ಶಿವು ಸುಮ್ಮನಾಗುತ್ತಾನೆ. ಆದರೆ, ಒಂದು ದಿನ ರಂಗನಿರ್ದೇಶಕರು ಆತನ ನಟನೆ ಕಂಡು ಬೆಂಗಳೂರಿಗೆ ತೆರಳಿ ಅಲ್ಲಿ ಸಿನಿಮಾ ನಿರ್ದೇಶಕನನ್ನು ಭೇಟಿಯಾಗುವಂತೆ ತಿಳಿಸುತ್ತಾರೆ. ಹೀರೋ ಆಗುವ ಆಸೆ ಹೊತ್ತು ಬೆಂಗಳೂರಿಗೆ ಬರುವ ಶಿವುಗೆ ಸಿಗುವುದು ಅವಮಾನ ಮತ್ತು ನಿರಾಸೆ. ಬಳಿಕ ಆತ ಸಿನಿಮಾದಿಂದ ದೂರವಾಗಿ ಜೀವನಕ್ಕಾಗಿ ಆಟೋ ಚಾಲಕನಾಗುತ್ತಾನೆ. ಹಾಗಾದರೆ, ಸಿನಿಮಾ ಹೀರೋ ಆಗಬೇಕೆಂಬ ಶಿವು ಕನಸು ಅಷ್ಟಕ್ಕೆ ನಿಲ್ಲುತ್ತದೆಯೇ? ಆತನ ಜೀವನದಲ್ಲಿ ಏನಾದರೂ ತಿರುವು ಸಿಗುತ್ತದೆಯೇ? ಆಟೋ ಡ್ರೈವರ್ ಶಿವು ಹೇಗೆ ‘ದೊಡ್ಮನ್ಸ’ ಆಗುತ್ತಾನೆ ಎಂಬುದೇ ಚಿತ್ರದ ಮುಂದುವರಿದ ಕಥೆ. ಮೊದಲು ಆಟೋ ಚಾಲಕನ ಜೀವನ ತೋರಿಸಿದ್ದು, ಈ ಹಿನ್ನೆಲೆಯಲ್ಲಿ ಸಿನಿಮಾ ಕನಸಿನ ಚಿತ್ರಣ ನೀಡಲಾಗಿದೆ. ಶರತ್ ಕೃಷ್ಣಗೆ ನಟನೆ ಜತೆಗೆ ನಿರ್ದೇಶನದ ಜವಾಬ್ದಾರಿ ಭಾರವಾಗಿದೆ ಅನಿಸುತ್ತದೆ. ದೃಶ್ಯಗಳು ದೀರ್ಘವಾಗಿದ್ದು, ಹೀರೋಯಿಸಂಗೆ ಹೆಚ್ಚು ಆದ್ಯತೆ ನೀಡಿದಂತಿದೆ. ಹಾಡು, ಹರಟೆಗೆ ಕತ್ತರಿ ಹಾಕಿ ಆಟೋ ಚಾಲಕನ ಸಿನಿಮಾ ಜರ್ನಿಯನ್ನು ಇನ್ನಷ್ಟು ಆಪ್ತವಾಗಿ ಸೆರೆಹಿಡಿಯುವ ಅವಕಾಶವಿತ್ತು. ಶರತ್ ಕೃಷ್ಣ ಚೆನ್ನಾಗಿ ಅಭಿನಯಿಸಿದರೂ, ಡಾನ್ಸ್, ಸಾಹಸ ದೃಶ್ಯಗಳಿಗೆ ಇನ್ನಷ್ಟು ತಯಾರಿ ಬೇಕಿತ್ತು. ರೇಷ್ಮಾ ಲಿಂಗರಾಜಪ್ಪ ಸರಳ ನಟನೆ ಮೂಲಕ ಗಮನ ಸೆಳೆಯುತ್ತಾರೆ. ಹುಲಿ ಕಾರ್ತಿಕ್ ನಗಿಸುತ್ತಾರೆ. ಹೊಸ ಕಲಾವಿದರು ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಆನಂದ್ ಇಳಯರಾಜ ಕ್ಯಾಮರಾ ವರ್ಕ್ ಚೆನ್ನಾಗಿ ಮೂಡಿಬಂದಿದೆ.
ರೇಟಿಂಗ್: 3
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net