ಬೆಂಗಳೂರು: ಹೊಸ ಪ್ರತಿಭೆ ಶರತ್ ಕೃಷ್ಣ ನಟಿಸಿ, ನಿರ್ದೇಶಿಸಿರುವ ಸಿನಿಮಾ ‘ದೊಡ್ಮನ್ಸ’. ಸಾಮಾನ್ಯ ಆಟೋ ಚಾಲಕನೊಬ್ಬ ದೊಡ್ಡ ವ್ಯಕ್ತಿಯಾಗುವ ಕಥಾ ಹಂದರ ಹೊಂದಿರುವ ಚಿತ್ರವಿದು. ಇಲ್ಲಿ ಶರತ್‌ಗೆ ಇಬ್ಬರು ನಾಯಕಿಯರಿದ್ದು, ರೇಷ್ಮಾ, ಶಿಲ್ಪಾ ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತಾಗಿದ್ದರೆ, ಸಿನಿಮಾ ಮೇ 29ಕ್ಕೆ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಜೂನ್ ಮೊದಲ ವಾರ ಪ್ಯಾನ್ ಇಂಡಿಯಾ ‘ಪೆದ್ದಿ’, ಕನ್ನಡದ ‘ಮ್ಯಾಂಗೋ ಪಚ್ಚ’, ಹಾಲಿವುಡ್‌ನ ‘ಹಿ-ಮ್ಯಾನ್’ ಚಿತ್ರಗಳು ರಿಲೀಸ್ ಆಗುತ್ತಿದ್ದು, ಒಂದೇ ವಾರದಲ್ಲಿ ಥಿಯೇಟರ್ ಸಮಸ್ಯೆ ಎದುರಿಸುವ ಆತಂಕದಿಂದ ಕೊನೆಯ ಹಂತದಲ್ಲಿ ‘ದೊಡ್ಮನ್ಸ’ ಬಿಡುಗಡೆ ಮುಂದೂಡಲಾಗಿದೆ. ಇದೀಗ ಮೇ 29ರ ಬದಲು ಜೂ. 19ಕ್ಕೆ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಹಾಗೆಯೇ, ಇತ್ತೀಚೆಗೆ ಚಿತ್ರದ ‘ಹಾಜರಿ ಹಾಕು’ ಶೀರ್ಷಿಕೆಯ ಸಾಂಗ್ ಬಿಡುಗಡೆ ಮಾಡಲಾಗಿದೆ. ಗುಜರಾತ್‌ನಲ್ಲಿ ಈ ಹಾಡಿನ ಶೂಟ್ ಮಾಡಲಾಗಿದೆ. ಶರತ್ ಕೃಷ್ಣ, ‘ದೊಡ್ಮನ್ಸ’ ಟೈಟಲ್ ನೋಡೋಕೆ ಖುಷಿಯಾಗುತ್ತದೆ. ವಿಷ್ಣು ಸರ್‌ಗೆ ಇದ್ದ ಟೈಟಲ್ ನಮಗೆ ಸಿಕ್ಕಿದ್ದೇ ಅತ್ಯಂತ ಸಂತಸದ ವಿಷಯ. ಇದು ಆಟೋ ಡ್ರೈವರ್ ಕಥೆಯಾಗಿರುವುದರಿಂದ ರಾಜ್ಯದ ಎಂಟು ಜಿಲ್ಲೆಗಳಿಗೆ ಆಟೋ ಚಾಲಕರಿಗಾಗಿ ವಿಶೇಷ ಶೋ ಏರ್ಪಡಿಸಲಿದ್ದೇವೆ. ಅವರಿಗಾಗಿ ಲಕ್ಕಿ ಡಿಪ್ ಆಯೋಜಿಸಲಿದ್ದು, ಅದರಲ್ಲಿ ವಿಜೇತ ಚಾಲಕನಿಗೆ ಆಟೋ ಉಡುಗೊರೆಯಾಗಿ ನೀಡಲಿದ್ದೇವೆ’ ಎಂದು ಭರವಸೆ ನೀಡಿದರು. ಬಲರಾಜವಾಡಿ, ಹುಲಿ ಕಾರ್ತಿಕ್ ತಾರಾಗಣದಲ್ಲಿದ್ದಾರೆ.