

ಹನಗೋಡು: ಹೋಬಳಿಯ ದೊಡ್ಡಹೆಜ್ಜೂರಿನ ಇತಿಹಾಸ ಪ್ರಸಿದ್ಧ ಶ್ರೀ ವೀರಾಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಜ.14ರಿಂದ 18ರವರೆಗೆ ಜರುಗಲಿದ್ದು, ಭರದ ಸಿದ್ಧತೆ ನಡೆಯುತ್ತಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನಲ್ಲಿರುವ ದೊಡ್ಡಹೆಜ್ಜೂರು ಗ್ರಾಮ ಲಕ್ಷ್ಮಣತೀರ್ಥ ನದಿ ದಂಡೆ ಮೇಲಿದ್ದು, ಶ್ರೀ ವೀರಾಂಜನೇಯಸ್ವಾಮಿ ದೇವಾಲಯ ಜಾತ್ರೆ ಅತ್ಯಂತ ವಿಶೇಷವಾಗಿದೆ. ಸಂಪ್ರದಾಯದಂತೆ ಮಕರ ಸಂಕ್ರಾಂತಿ ಹಬ್ಬದ ಮಾರನೆಯ ದಿನ ಹಾಗೂ ಚುಂಚನಕಟ್ಟೆಯ ಶ್ರೀರಾಮ ದೇವರ ರಥೋತ್ಸವದಂದೇ ಇಲ್ಲಿಯೂ ರಥೋತ್ಸವ ನಡೆಯುತ್ತದೆ. ಕಳೆದ 60 ವರ್ಷಗಳಿಂದಲೂ ರಥೋತ್ಸವ ನಡೆಸಿಕೊಂಡು ಬರಲಾಗುತ್ತಿದೆ.
ಈ ದೇವಾಲಯ ಸುತ್ತಮುತ್ತಲಿನ 16 ಹಳ್ಳಿಗಳಿಗೆ ಸೇರಿದ್ದು, ಜಾತ್ರೆ ನಡೆಸಲು ಗ್ರಾಮಗಳು ಒಂದೊಂದು ಜವಾಬ್ದಾರಿ ವಹಿಸಿಕೊಳ್ಳುವುದು ವಿಶೇಷವಾಗಿದೆ. ಅಲ್ಲದೇ, ಹನಗೋಡು ಹೋಬಳಿ ವ್ಯಾಪ್ತಿಯಲ್ಲಿ ಗಿರಿಜನರೇ ಹೆಚ್ಚು ವಾಸವಿದ್ದು, ಗಿರಿಜನರು ಜಾತ್ರೆಗೆ ಹೆಚ್ಚಿನ ಸಂಖೆಯಲ್ಲಿ ಭಾಗವಹಿಸುತ್ತಿದ್ದರಿಂದ ‘ಹಾಡಿ ಕುರುಬರ ಜಾತ್ರೆ’ ಎಂದೇ ಪ್ರಸಿದ್ಧಿ ಪಡೆದಿತ್ತು. ಆದರೀಗ ಈ ಸಂಪ್ರದಾಯ ನಿಂತಿದ್ದರೂ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ದಂಡೇ ಹರಿದು ಬರುತ್ತಿದೆ.
ದೇವಾಲಯ ಶಿಥಿಲಗೊಂಡಿದ್ದರಿಂದ ನಾಲ್ಕು ವರ್ಷಗಳ ಹಿಂದೆ ಕೆಡವಿ ದಾನಿಗಳ ಸಹಕಾರದಿಂದ ಕೋಟಿ ರೂ. ವೆಚ್ಚದಲ್ಲಿ ನೂತನ ದೇವಾಲಯ ನಿರ್ಮಿಸಲಾಗಿದೆ. ಜಾತ್ರೆ ಸಮಿತಿಯವರು ಈಗಾಗಲೇ ಜಾತ್ರಾ ಆವರಣವನ್ನು ಸ್ವಚ್ಛಗೊಳಿಸಿ ಸಿಂಗಾರ ಮಾಡುತ್ತಿದ್ದಾರೆ. ಈಗಾಗಲೇ ಜಾತ್ರೆ ಮಾಳದಲ್ಲಿ ಸಿಹಿ ತಿಂಡಿ, ತಿನಿಸುಗಳ ಅಂಗಡಿಗಳ ಮಾಲೀಕರು ತಿಂಡಿ ತಯಾರಿಸುವಲ್ಲಿ ನಿರತರಾಗಿದ್ದಾರೆ.
ಹರಕೆ ಸಲ್ಲಿಕೆ: ಎಚ್.ಡಿ ಕೋಟೆ ಹಾಗೂ ಹುಣಸೂರು ತಾಲೂಕಿನ ಭಕ್ತರು ಆಗಮಿಸಿ 3-4 ದಿನ ಇದ್ದು, ಪರ ನಡೆಸಿ ಹರಕೆ ತೀರಿಸುತ್ತಾರೆ. ರಥೋತ್ಸವದ ಮಾರನೇ ದಿನ ಭಕ್ತರು ರಾಸುಗಳನ್ನು ದೇವಾಲಯದ ಸುತ್ತ ಪಂಜಿನ ಸೇವೆ ನಡೆಸಿ ರೋಗಗಳು ಬಾರದಂತೆ ಭಗವಂತನನ್ನು ಪ್ರಾರ್ಥಿಸುತ್ತಾರೆ. ಜಾತ್ರೆಗೆ ಬರುವ ಬಹುತೇಕ ಭಕ್ತರು ತಮ್ಮ ಮನೆಯಿಂದ ಫಲಹಾರ ತಂದು ಲಕ್ಷ್ಮಣತೀರ್ಥ ನದಿ ದಂಡೆ ಹಾಗೂ ಜಾತ್ರೆ ಮಾಳಕ್ಕೆ ಹೊಂದಿಕೊಂಡಿರುವ ಕೆರೆ ಅಂಗಳದಲ್ಲಿ ಸಾಮೂಹಿಕ ಭೋಜನ ಮಾಡುವುದು ವಿಶೇಷವಾಗಿದೆ.
ಆರೋಗ್ಯ ಇಲಾಖೆಯಿಂದ ಪರಿಸರ ನೈರ್ಮಲ್ಯ ಹಾಗೂ ಸ್ವಚ್ಛತೆ ಬಗ್ಗೆ ಗ್ರಾಮದ ಜನರಲ್ಲಿ ಅರಿವು ಮೂಡಿಸಲಾಗಿದೆ. ಜಾತ್ರೆ ಮಾಳದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆಯಲಾಗುವುದು. ಗ್ರಾಪಂ ವತಿಯಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾವುದು ಎಂದು ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಶೇಖರೇಗೌಡ ತಿಳಿಸಿದ್ದಾರೆ.
ಜಾತ್ರೆಯ ವಿವರ
ಜ.14ರಂದು ದೇವಸ್ಥಾನ ಶುದ್ಧೀಕರಣ, ಹೋಮ ಹಾಗೂ ಸಂಜೆ 7 ಗಂಟೆಗೆ ಗರುಡ ಪಟ ಪೂಜೆ ನೆರವೇರಲಿದೆ. ಜ.15ರಂದು ಸಂಜೆ 4.30 ರಿಂದ 5.45 ಗಂಟೆಯೊಳಗೆ ಕಲಶಾರೋಹಣ ಹಾಗೂ ಹೂವಿನ ಚಪ್ಪರ ಹಾಕಲಾಗುವುದು. ಜ.16ರಂದು ಮಧ್ಯಾಹ್ನ 1.30 ರಿಂದ 2.30 ಗಂಟೆಯೊಳಗೆೆ ರಥೋತ್ಸವ ಜರುಗಲಿದೆ. 17ರಂದು ಸಂಜೆ 7 ಗಂಟೆಗೆ ಗರುಡೋತ್ಸವ ಮತ್ತು ಪಂಜಿನ ಮೆರವಣಿಗೆ, ಪಾರುಪಟ್ಟೆ ಉತ್ಸವ ನೆರವೇರಲಿದೆ. ಜಾತ್ರೋತ್ಸವದ ಕೊನೆಯ ದಿನ 18ರಂದು ಸಂಜೆ 7.30 ಗಂಟೆಗೆ ಲಕ್ಷ್ಮಣತೀರ್ಥ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ ಎಂದು ಆಂಜನೇಯಸ್ವಾಮಿ ದೇವಸ್ಥಾನ ಸೇವಾ ಸಮಿತಿಯ ಕಾರ್ಯದರ್ಶಿ ದೊಡ್ಡಹೆಜ್ಜೂರು ನಟರಾಜ್ ತಿಳಿಸಿರುತ್ತಾರೆ
ಚಿತ್ರಗಳು.
ಚಿತ್ರ 01- ನೂತನವಾಗಿ ನಿರ್ಮಾಣಗೊಂಡಿರುವ ದೊಡ್ಡಹೆಜ್ಜೂರಿನ ವೀರಾಂಜನೇಯ ದೇವಾಲಯ
ಚಿತ್ರ 02 : ದೊಡ್ಡಹೆಜ್ಜೂರಿನ ಆಂಜನೇಯ ಸ್ವಾಮಿ ರಥ.
ಚಿತ್ರ-3 ದೊಡ್ಡಹೆಜ್ಜೂರಿನ ವೀರಾಂಜನೇಯ ಸ್ವಾಮಿ.
ಚಿತ್ರ 04 : ರಥೋತ್ಸವಕ್ಕೆ ಸಿಂಗಾರಗೊಳ್ಳುತ್ತಿರುವ ದೇವಾಲಯದ ಆವರಣ.
.