Darshan ಎಡಗಾಲಿನಲ್ಲಿ ವೀಕ್​ನೆಸ್​ ಇದೆ; ದಾಸನ ಆರೋಗ್ಯದ ಕುರಿತು ವೈದ್ಯರು ಹೇಳಿದ್ದಿಷ್ಟು

Darshan Doctor
Published on

ಬೆಂಗಳೂರು: ಬೆನ್ನು ನೋವಿನ ಕಾರಣದಿಂದಾಗಿ ನಟ ದರ್ಶನ್ (Darshan)​ ಕೆಂಗೇರಿ ಬಳಿ ಇರುವ ಬಿಜಿಎಸ್​ ಆಸ್ಪತ್ರೆಗೆ (BGS Hospital) ದಾಖಲಾಗಿದ್ದು, ವೈದ್ಯರು ಚಿಕಿತ್ಸೆ ಆರಂಭಿಸಿದ್ದಾರೆ. ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್​ (Darshan) ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪಡೆದ ಆರೋಪದ ಮೇಲೆ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡಿದ್ದರು. ಬಳ್ಳಾರಿಗೆ ಸ್ಥಳಾಂತರಗೊಂಡ ನಂತರ ಅವರಿಗೆ ಬೆನ್ನು ನೋವು (Back Pain) ತೀವ್ರವಾಗಿ ಕಾಡಿದ ಪರಿಣಾಮ ನ್ಯಾಯಾಲಯ ಅವರಿಗೆ ಆರು ವಾರಗಳ ಕಾಲ ಮಧ್ಯಂತರ ಜಾಮೀನನ್ನು ನೀಡಿದ್ದು, ವಾರಕ್ಕೊಮ್ಮೆ ಮೆಡಿಕಲ್​ ರಿಪೋರ್ಟ್​ (Medical Report) ಸಲ್ಲಿಸುವಂತೆ ಸೂಚಿಸಿದೆ.

ಇನ್ನೂ ದರ್ಶನ್​ (Darshan) ಆರೋಗ್ಯದ ಕುರಿತು ಕೆಂಗೇರಿ ಬಿಜಿಎಸ್​ ಆಸ್ಪತ್ರೆಯೆ ವೈದ್ಯ ನವೀನ್​ ಅಪ್ಪಾಜಿಗೌಡ (Naveen AppajiGowda)  ಮಾತನಾಡಿದ್ದು, ದರ್ಶನ್​ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ದರ್ಶನ್​ (Darshan) ಇಂದು (ನವೆಂಬರ್​ 01) 3.30ರ ಸುಮಾರಿಗೆ ಬಂದು ಅಡ್ಮಿಟ್ ಆಗಿದ್ದಾರೆ. ನಾವು ತಪಾಸಣೆ ಮಾಡಿದ್ದೇನೆ. ಕಾಲು ನೋವು ಇದೆ. ಅದರಿಂದ ಬೆನ್ನು ನೋವು ಕೂಡ ಇದೆ. ಎಡಗಡೆ ಕಾಲಿನಲ್ಲಿ ವೀಕ್​ನೆಸ್​ ಇದೆ. ಆ ಕಾಲು ಆಡುವುದು ಸ್ವಲ್ಪ ಕಮ್ಮಿ ಆಗಿದೆ. ಹೆಚ್ಚಿನ ತಪಾಸಣೆ ಮಾಡಿ, ಯಾವ ರೀತಿ ಚಿಕಿತ್ಸೆ ಬೇಕು ಎಂಬುದನ್ನು ನಿರ್ಧರಿಸುತ್ತೇವೆ. ಪೂರ್ತಿ ತಪಾಸಣೆ (Tests) ಆದ ನಂತರ ಏನಾಗಿದೆ ಎಂಬುದು ನಮಗೆ ಗೊತ್ತಾಗುತ್ತದೆ.

ಎಂಆರ್​ಐ, ಎಕ್ಸ್​ರೇ ಮತ್ತು ರಕ್ತದ ಪರೀಕ್ಷೆ ಮಾಡಬೇಕಾಗುತ್ತದೆ. 48 ಗಂಟೆ ಬಳಿಕ ಒಟ್ಟಾರೆ ರಿಪೋರ್ಟ್ ಸಿಗಲಿದೆ. ತಪಾಸಣೆಗೆ 24 ಗಂಟೆಗಳ ಕಾಲಬೇಕು ಎಂದು ಹೇಳಿದ್ದಾರೆ. ಒಂದು ವಾರದ ಹಿಂದೆ ಮಾಡಿದ ಎಂಆರ್​ಐ ಫಿಲ್ಮ್​ ನಮಗೆ ಲಭ್ಯವಾಗಿಲ್ಲ. ಆದ್ದರಿಂದ ಇನ್ನೊಮ್ಮೆ ಎಂಆರ್​ಐ ಮಾಡಬೇಕಾಗುತ್ತದೆ. ಸದ್ಯಕ್ಕೆ ಅವರಿಗೆ ತುಂಬ ನೋವು (Pain) ಇದೆ. ಶಸ್ತ್ರಚಿಕಿತ್ಸೆಯ (Operation) ಅಗತ್ಯ ಇದೆಯೋ ಇಲ್ಲವೋ ಎಂಬುದು ಈಗಲೇ ಹೇಳೋಕೆ ಆಗಲ್ಲ. 24ರಿಂದ 48 ಗಂಟೆಯ ಒಳಗೆ ಎಲ್ಲ ರಿಪೋರ್ಟ್​ಗಳು ಸಿಗುತ್ತವೆ. ತುಂಬಾ ನೋವು ಇರುವುದರಿಂದ ಔಷಧಿ ನೀಡಲು ಆರಂಭಿಸಿದ್ದೇವೆ ಎಂದು ಬಿಜಿಎಸ್​ ಆಸ್ಪತ್ರೆಯ ವೈದ್ಯ ನವೀನ್​ ಅಪ್ಪಾಜಿಗೌಡ ತಿಳಿಸಿದ್ದಾರೆ.

Darshan

ಇದೇ ಆಸ್ಪತ್ರೆ ಯಾಕೆ? 

ನಟ ದರ್ಶನ್ (Darshan)​ ಬಿಜಿಎಸ್​ (BGS) ಆಸ್ಪತ್ರೆಯನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ ಇದೆ. ದರ್ಶನ್ ಮೊದಲು ಮೈಸೂರಿನಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ರು. ಆದರೆ ಕೋರ್ಟ್​ ವ್ಯಾಪ್ತಿ ಬಿಟ್ಟು ಹೊರಗೆ ಹೋಗದಂತೆ ನ್ಯಾಯಾಲಯ ವಿಧಿಸಿದ ಷರತ್ತು ವಿಧಿಸಿದೆ. ಹೀಗಾಗಿ ಅವರು ಬೆಂಗಳೂರಿನ್ಲಲೇ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದಾರೆ.

ಈ ಹಿಂದೆ ಬೆನ್ನು ನೋವು ಕಾಣಿಸಿಕೊಂಡಿದ್ದಾಗ ನಟ ದರ್ಶನ್​ (Darshan) ಮೈಸೂರಿನ ಅಪೋಲೋದಲ್ಲಿ ಚಿಕಿತ್ಸೆ ಪಡೆದಿದ್ದರು. ಮೈಸೂರು ಅಪೋಲೋದಲ್ಲೇ ಇದ್ದ ವೈದ್ಯರು ಇದೀಗ ಬಿಜಿಎಸ್​ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆಗೆ ಸಹಕಾರಿ ಆಗುತ್ತೆ ಎಂಬ ಕಾರಣಕ್ಕೆ ಅವರು ಬಿಜಿಎಸ್​ (BGS)  ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net