ಆಪರೇಷನ್ ನಡುವೆಯೇ ವೈದ್ಯರಿಬ್ಬರ ಜಗಳ! ವೈರಲ್​ ವಿಡಿಯೋ ನೋಡಿ ನೆಟ್ಟಿಗರ ಆಕ್ರೋಶ

Operation Theater
Published on

ನವದೆಹಲಿ: ಆಪರೇಷನ್​ ಥಿಯೇಟರ್​ ಒಳಗಡೆ ಬೆಡ್​ ಮೇಲೆ ರೋಗಿಯೊಬ್ಬರನ್ನು ಮಲಗಿಸಿ ವೈದ್ಯರಿಬ್ಬರು ವಾಗ್ವಾದಕ್ಕಿಳಿದಿರುವ ಆತಂಕಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಆಪರೇಷನ್​ ಥಿಯೇಟರ್​ ಅಂದರೆ ತುಂಬಾ ಗಂಭೀರತೆ ಕಾಪಾಡಿಕೊಳ್ಳಬೇಕು. ಏಕೆಂದರೆ, ರೋಗಿಯ ಜೀವ ಅಲ್ಲಿನ ವೈದ್ಯರ ಕೈಯಲ್ಲಿ ಇರುತ್ತದೆ. ಹೀಗಾಗಿ ವೈದ್ಯರ ಗಮನವೆಲ್ಲ ರೋಗಿಯ ಮೇಲಿರಬೇಕು. ಆದರೆ, ರೋಗಿಯನ್ನೇ ಮರೆತು ವೈದ್ಯರಿಬ್ಬರು ಮಾತಿನ ಚಕಮಕಿ ನಡೆಸಿರುವುದು ಅವರ ವೃತ್ತಿಪರತೆಯನ್ನು ಪ್ರಶ್ನೆ ಮಾಡಿದಂತಿದೆ.

ವಿಡಿಯೋದಲ್ಲಿ ಏನಿದೆ?

ರೋಗಿಯನ್ನು ಆಪರೇಷನ್​ ಥಿಯೇಟರ್​ ಬೆಡ್​ ಮೇಲೆ ಮಲಗಿಸಿ ಸುತ್ತಲೂ ವೈದ್ಯರು ನಿಂತು ಶಸ್ತ್ರಚಿಕಿತ್ಸೆ ಮಾಡುತ್ತಿರುವಂತೆ ಕಾಣುತ್ತದೆ. ಈ ವೇಳೆ ವೈದ್ಯರಿಬ್ಬರು ಮಾತಿನ ಚಕಮಕಿ ನಡೆಸಿದ್ದಾರೆ. ಇಬ್ಬರು ಜಗಳ ಆಡುವುದನ್ನು ಉಳಿದ ವೈದ್ಯರು ಮೂಕ ಪ್ರೇಕ್ಷರಂತೆ ನೋಡುತ್ತಾ ನಿಂತಿದ್ದಾರೆ. ಇನ್ನೊಂದೆಡೆ ರೋಗಿ ಬೆಡ್​ ಮೇಲೆ ನಿತ್ರಾಣ ಸ್ಥಿತಿಯಲ್ಲಿ ಮಲಗಿದ್ದಾನೆ.

ಆಪರೇಷನ್​ ಥಿಯೇಟರ್​ ಒಳಗಡೆ ಇದ್ದವರು ಮೊಬೈಲ್​ನಲ್ಲಿ ವಿಡಿಯೋ ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ರೋಗಿಯು ಹಾಗೂ ಇತರೆ ವೈದ್ಯರು ಕೋರಿ ಕೊಂಡರು ಅದನ್ನು ಕಡೆಗಣಿಸಿ ವೈದ್ಯರಿಬ್ಬರು ತಮ್ಮ ಜಗಳವನ್ನು ಮುಂದುವರೆಸಿದ್ದಾರೆ. ಇಬ್ಬರ ನಡುವೆ ಅಹಂ ಭಾವ ಮಾತಿನ ಚಕಮಕಿಗೆ ಕಾರಣ ಎನ್ನಲಾಗಿದೆ.

ಘರ್​ ಕೆ ಕಲೇಶ್​ (Ghar Ke Kalesh) ಎಂಬುವರು ತಮ್ಮ ಟ್ವಿಟರ್​ನಲ್ಲಿ ವಿಡಿಯೋ ಶೇರ್​ ಮಾಡಿದ್ದು ಈವರೆಗೂ 70 ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದೆ. ವಿಡಿಯೋ ನೊಡಿದ ನೆಟ್ಟಿಗರು ವೈದ್ಯರ ವರ್ತನೆಯನ್ನು ಖಂಡಿಸಿದ್ದಾರೆ. ವೈದ್ಯರು ತಮ್ಮ ಜಗಳಗಳನ್ನು ಹೊರಗಡೆ ಇಟ್ಟುಕೊಳ್ಳಬೇಕು. ಅದನ್ನು ಬಿಟ್ಟು ಆಪರೇಷನ್​ ಥಿಯೇಟರ್​ ಒಳಗೆ ಇಟ್ಟುಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net