ಜನರ ನೋವು ನಿವಾರಣೆ ವೈದ್ಯರ ಕರ್ತವ್ಯ: ಡಾ. ಶಾಂತರಾಮ ಶೆಟ್ಟಿ

Joint and Orthopedic Specialist Conference
ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಕೀಲು ಮತ್ತು ಮೂಳೆ ತಜ್ಞರ 48ನೇ ಸಮ್ಮೇಳನದಲ್ಲಿ ಪ್ರೊ. ಡಾ. ಎಂ.ಶಾಂತರಾಮಶೆಟ್ಟಿ, ಡಾ. ಪಿ.ಆರ್.ಸುಧೀಂದ್ರ, ಡಾ. ಎಡ್ವರ್ಡ್ ನಜರೆತ್, ಡಾ. ವಿನಯಾ ಶ್ರೀನಿವಾಸ್, ಡಾ. ಎನ್.ನಿತ್ಯಾನಂದ ರಾವ್, ಡಾ. ಜಿ.ಭರತ್ ರಾಜ್, ಡಾ. ಹರೀಶ್ ಪೈ, ಡಾ. ಸುರೇಶ್, ಡಾ. ನಂದಕಿಶೋರ್, ಡಾ. ಗಿರೀಶ್‌ಕುಮಾರ್ ಭಾಗವಹಿಸಿದ್ದರು.
Published on

ಶಿವಮೊಗ್ಗ: ವೈದ್ಯನಿಗೆ ರೋಗಿಗಳೇ ದೇವರು. ಅಂತಹ ರೋಗಿಗಳ ನೋವು ನಿವಾರಿಸುವ ಅವಕಾಶವೇ ನಮಗೆ ದೇವರು ಕೊಟ್ಟಿರುವ ದೊಡ್ಡ ಉಡುಗೊರೆ ಎಂದು ಖ್ಯಾತ ಕೀಲು ತಜ್ಞ ಮಂಗಳೂರಿನ ಪ್ರೊ. ಡಾ. ಎಂ.ಶಾಂತರಾಮ ಶೆಟ್ಟಿ ಅಭಿಪ್ರಾಯಪಟ್ಟರು.

ನಗರದಲ್ಲಿ ರಾಜ್ಯಮಟ್ಟದ ಕೀಲು ಮತ್ತು ಮೂಳೆ ತಜ್ಞರ 48ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ನಾವು ಎಲ್ಲವನ್ನೂ ಮಧ್ಯಮ ಮಟ್ಟದಲ್ಲಿ ಮಾಡುತ್ತೇವೆ. ಮಧ್ಯಮ ಮಟ್ಟದಲ್ಲಿ ಕಲಿಯುತ್ತೇವೆ ಹಾಗೂ ನಮ್ಮ ತೃಪ್ತಿಗಾಗಿ ನಾವು ಹೆಚ್ಚಿನ ಕೆಲಸಗಳನ್ನು ಮಾಡುತ್ತೇವೆ. ಆದರೆ ಅದೇ ನಮ್ಮ ವೃತ್ತಿ ಆಗಲ್ಲ. ಜನರ ನೋವು ನಿವಾರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಮೊಣಕಾಲು, ಕುತ್ತಿಗೆ ಸೇರಿ ಯಾವುದೇ ರೀತಿಯ ನೋವು ಇರಲಿ. ಅವುಗಳನ್ನು ನಿವಾರಿಸುವ ಪ್ರಯತ್ನ ಮಾಡುವ ಅವಕಾಶವನ್ನು ದೇವರು ನಮಗೆ ನೀಡಿದ್ದಾನೆ. ಅದನ್ನು ಮೂಳೆ ಮತ್ತು ಕೀಲು ತಜ್ಞರು ಅದರಲ್ಲೂ ಯುವ ವೈದ್ಯರು ಅತ್ಯಂತ ಸಮರ್ಥವಾಗಿ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಸುಮಾರು 53 ವರ್ಷದಿಂದ ಶಸ್ತಚಿಕಿತ್ಸಕನಾಗಿಯೂ ವಿದ್ಯಾರ್ಥಿಗಳಿಗೆ ಪಾಠವನ್ನೂ ಮಾಡಿದ್ದೇನೆ. ಸಾಕಷ್ಟು ಹೆಸರು ಹಾಗೂ ಹಣ ಮಾಡಿದ್ದೇನೆ. ಇವೆಲ್ಲಕ್ಕೂ ಮಿಗಿಲಾಗಿ ರೋಗಿಗಳ ನೋವು ನಿವಾರಣೆ ಮಾಡುವ ಕಾರ್ಯದಿಂದ ನನಗೆ ತೃಪ್ತಿ ಸಿಕ್ಕಿದೆ. ಇದೇ ನಿಜವಾದ ಆತ್ಮತೃಪ್ತಿ. ಇದನ್ನು ಇಂದಿನ ಯುವ ವೈದ್ಯರು ಅಳವಡಿಸಿಕೊಳ್ಳಬೇಕು ಎಂದರು.
ಸಮ್ಮೇಳನದ ಸಂಘಟನಾಧ್ಯಕ್ಷ ಡಾ. ಪಿ.ಆರ್.ಸುಧೀಂದ್ರ ಮಾತನಾಡಿ, ಪ್ರತಿವರ್ಷ ಸಮ್ಮೇಳನ ನಡೆಸಲಾಗುತ್ತಿದೆ. 2004ರಲ್ಲಿ ಶಿವಮೊಗ್ಗದಲ್ಲಿ ನಡೆದಿತ್ತು. 20 ವರ್ಷಗಳ ನಂತರ ನಮ್ಮ ಸಂಘಕ್ಕೆ ಅವಕಾಶ ಸಿಕ್ಕಿದೆ ಎಂದರು.
ರಾಜ್ಯ ಮತ್ತು ಹೊರರಾಜ್ಯದ ಸುಮಾರು 1 ಸಾವಿರಕ್ಕೂ ಹೆಚ್ಚು ಕೀಲು ಮತ್ತು ಮೂಳೆ ತಜ್ಞರು ಹಾಗೂ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ರಾಜ್ಯ, ಹೊರರಾಜ್ಯ ಹಾಗೂ ವಿದೇಶದಿಂದ ಸುಮಾರು 200ಕ್ಕೂ ಹೆಚ್ಚು ಸಂಪನ್ಮೂಲ ತಜ್ಞ ವೈದ್ಯರು ಭಾಗವಹಿಸಿ ಮಾರ್ಗದರ್ಶನ ನೀಡುತ್ತಿದ್ದಾರೆ. ಸುಮಾರು 400ಕ್ಕೂ ಸಂಶೋಧನಾ ಪ್ರಬಂಧಗಳು ಮಂಡನೆಯಾಗುತ್ತಿವೆ ಎಂದರು.
ರಾಜ್ಯ ಸಂಘದ ಡಾ. ಎಡ್ವರ್ಡ್ ನಜರೆತ್ ಮತ್ತು ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ವಿನಯಾ ಶ್ರೀನಿವಾಸ್ ಮಾತನಾಡಿದರು. ಮೈಸೂರಿನ ಖ್ಯಾತ ವೈದ್ಯ ಡಾ. ಎನ್.ನಿತ್ಯಾನಂದ ರಾವ್, ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಜಿ.ಭರತ್ ರಾಜ್, ವೈದ್ಯರಾದ ಡಾ. ಹರೀಶ್ ಪೈ, ಡಾ. ಸುರೇಶ್, ಡಾ. ನಂದಕಿಶೋರ್, ಡಾ. ಗಿರೀಶ್‌ಕುಮಾರ್ ಸೇರಿ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net