ವೈದ್ಯರು ಪೋಸ್ಟ್‌ಮನ್ ಕೆಲಸ ಮಾಡ್ಬೇಡಿ; ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮನವಿ

DSC_7430
Published on

ತುಮಕೂರು: ಸರ್ಕಾರಿ ಆಸ್ಪತ್ರೆಗಳ ವೈದ್ಯರು ಜವಾಬ್ದಾರಿಯಿಂದ ನುಣುಚಿಕೊಳ್ಳಲು ರೋಗಿಗಳನ್ನು ಮೇಲ್ಮಟ್ಟದ ಆಸ್ಪತ್ರೆಗೆ ಶಿಫಾರಸು ಮಾಡುವ ಪೋಸ್ಟ್‌ಮನ್ ಕೆಲಸ ಮಾಡಬಾರದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮನವಿ ಮಾಡಿದರು.

ನಗರದ ಡಾ.ಎಚ್.ಎಂ.ಗಂಗಾಧರಯ್ಯ ಸಭಾಂಗಣದಲ್ಲಿ ಶನಿವಾರ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ 30ನೇ ರಾಜ್ಯ ಮಟ್ಟದ ಸಮ್ಮೇಳನ ‘ಕಲ್ಪತರು ವೈದ್ಯೋತ್ಸವ-2023’ಕ್ಕೆ ಚಾಲನೆ ನೀಡಿ ಮಾತನಾಡಿದರು.

ಜನರ ದೃಷ್ಟಿಯಲ್ಲಿ ದೇವರಾಗಿರುವ ವೈದ್ಯರು ಪೋಸ್ಟ್‌ಮನ್ ಕೆಲಸದ ಬದಲು, ತಮ್ಮ ಶಕ್ತಿ ಅರಿತು, ಅದರ ಪೂರ್ಣ ಸದ್ವಿನಿಯೋಗಕ್ಕೆ ಮುಂದಾದರೆ, ದೇವರ ಮಕ್ಕಳಾದ ಬಡವರ ಕಣ್ಣಿಗೆ ನೀವೇ ನೈಜ ದೇವರಾಗುತ್ತೀರಿ ಎಂದರು.

ಕಲಿತ ವಿದ್ಯೆಯ ಸಂಪೂರ್ಣ ಬಳಕೆಗೆ ಮುಂದಾದರೆ ನಿಮ್ಮ ಪರವಾಗಿ ಕಾನೂನು ಮಂತ್ರಿಯಾಗಿ ನಾನು ನಿಲ್ಲಲು ಸಿದ್ಧ ಎಂದು ಭರವಸೆ ನೀಡಿದರು.

ವೈದ್ಯರ ಕೆಲಸ ಅವಿರತ ಶ್ರಮವಿರುವ ಕೆಲಸ, ಕರೊನಾ ಸಂದರ್ಭದಲ್ಲಿ ನಮ್ಮ ಸರ್ಕಾರಿ ವೈದ್ಯರು ಹಾಗೂ ಅವರ ಸಿಬ್ಬಂದಿ ವರ್ಗ ತೆಗೆದುಕೊಂಡ ಪರಿಶ್ರಮದ ಫಲವಾಗಿ ಬಹುಬೇಗ ಸಾಂಕ್ರಾಮಿಕ ರೋಗವನ್ನು ಹತೋಟಿಗೆ ತರಲು ಸಾಧ್ಯವಾಯಿತು ಎಂದರು.

ಬಡವರು ಹಾಗೂ ಅವರ ಮಕ್ಕಳಿಗೆ ಒಳ್ಳೆಯ ಸೇವೆ ನಿಮ್ಮಿಂದ ದೊರೆತರೆ ಅದು ಭಗವಂತನಿಗೆ ಪ್ರೀತಿಯಾಗುತ್ತದೆ. ಜನರ ಹೃದಯದಲ್ಲಿ ಸ್ಥಾನಗಳಿಸುತ್ತೀರಿ. ರೋಗಿಗಳ ಬಗ್ಗೆ ಅಸಡ್ಡೆ ತೊರದೆ, ಆತನನ್ನು ಪರೀಕ್ಷಿಸಿ ನಾಲ್ಕು ಸಾಂತ್ವನದ ಮಾತುಗಳನ್ನು ಹೇಳುವುದರಿಂದ ನೀವು ನೀಡುವ ಚಿಕಿತ್ಸೆ ದೇಹಕ್ಕಿಂತ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಕರೊನಾ ಸಮಯದಲ್ಲಿ ಎರಡು ವರ್ಷ ನಿಮ್ಮ ಜತೆ ಕೆಲಸ ಮಾಡಿ, ನಿಮ್ಮ ಕಷ್ಟ, ಸುಖಗಳ ಅರಿವಾಗಿದೆ. ಸಿಬ್ಬಂದಿ ಕೊರತೆ ನಡುವೆಯೂ ನಿಮ್ಮ ಸೇವೆ ಶ್ಲಾಘನೀಯ, ಸಿಎಂಗೂ ನಿಮ್ಮ ಕಷ್ಟದ ಅರಿವಿದೆ, ನಿಮ್ಮ ನೆರವಿಗೆ ಬರಲಿದ್ದಾರೆ ಎಂಬ ನಂಬಿಕೆ ನಮಗಿದೆ ಎಂದರು.

ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ಎ.ಎನ್.ದೇಸಾಯಿ ಮಾತನಾಡಿ, ಸರ್ಕಾರ ವೈದ್ಯರು ನೀಡಿದ ಪ್ರಮುಖ ಬೇಡಿಕೆಗಳಲ್ಲಿ ಎರಡನ್ನು ಈಡೇರಿಸಿದೆ. ಜುಲೈ 1ರಂದು ‘ವೈದ್ಯರ ದಿನ’ವಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಬೇಕು ಹಾಗೂ ಶಿಥಿಲವಾಗಿರುವ ಆರೋಗ್ಯ ಭವನ ಸರಿಪಡಿಸಬೇಕು ಎಂದರು.

ವೈದ್ಯಾಧಿಕಾರಿಗಳ ಸಿ ಆರ್ ರೂಲ್ಸ್ 20 ವರ್ಷಗಳಿಂದ ಪರಿಷ್ಕರಣೆಗೊಂಡಿಲ್ಲ, ಇದು ವೈದ್ಯರ ಮುಂಬಡ್ತಿಗೆ ತೊಂದರೆಯಾಗಿದೆ. ಐಪಿಎಚ್‌ಎಸ್ ಮಾನದಂಡಕ್ಕೆ ಅನುಗುಣವಾಗಿ ವೈದ್ಯಕೀಯ ಸಿಬ್ಬಂದಿ ನೇಮಕ, ಕೌನ್ಸಿಲಿಂಗ್ ಮೂಲಕ ವೈದ್ಯರ ವರ್ಗಾವಣೆ ಮತ್ತಿತರರ ಬೇಡಿಕೆಗಳ ಮನವಿಯನ್ನು ಜೆ.ಸಿ.ಮಾಧುಸ್ವಾಮಿಗೆ ಸಲ್ಲಿಸಿದರು.

ಆರೋಗ್ಯ ಇಲಾಖೆ ನಿರ್ದೇಶಕಿ ಡಾ.ಎಂ.ಇಂದುಮತಿ, ಡಾ.ಪ್ರಮಿಳಾ ಮರೂರ್ ಮಾತನಾಡಿದರು. ವೇದಿಕೆಯಲ್ಲಿ ವೀಕ್ಷಕರಾದ ಡಾ.ರವಿ, ಮಾಜಿ ಅಧ್ಯಕ್ಷ ಡಾ.ರಂಗನಾಥ್, ಡಾ.ಸೈಯದ್ ಮದಿನಿ, ಡಾ.ಮೇಟಿ, ಜಿಲ್ಲಾಧ್ಯಕ್ಷ ಡಾ.ಚೇತನ್, ಡಾ.ಡಿ.ಎಂ.ಗೌಡ, ಡಾ.ಚಂದನ್, ಡಿಎಚ್‌ಒ ಡಾ.ಮಂಜುನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ವೀಣಾ, ಡಾ.ರಜಿನಿ ಡಾ.ದಿನೇಶ್, ಡಾ.ಸನತ್, ಡಾ.ಚಂದ್ರಶೇಖರ್ ಮತ್ತಿತರರು ಇದ್ದರು.

ಪ್ರತಿಭಾವಂತರಷ್ಟೇ ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ಸರ್ಕಾರಿ ಆಸ್ಪತ್ರೆಯ ವೈದ್ಯರಾಗಿದ್ದಾರೆ. ಆದರೆ, ಅವರ ಪ್ರತಿಭೆಯನ್ನು ಒರೆಗೆ ಹಚ್ಚಲು ಹಿಂದೇಟು ಹಾಕುವ ಪರಿಣಾಮ, ಈ ವಲಯಗಳಲ್ಲಿ ಖಾಸಗಿ ಶಾಲೆಗಳು, ಖಾಸಗಿ ಆಸ್ಪತ್ರೆಗಳಷ್ಟೇ ವಿಜೃಂಭಿಸುತ್ತಿವೆ. | ಜೆ.ಸಿ.ಮಾಧುಸ್ವಾಮಿ ಸಚಿವ

ಒಂದೇ ವಾರದಲ್ಲಿ ಮಂಜೂರಿಗೆ ಸಿದ್ಧ: ವೃತ್ತಿ ಜೀವನದ ಸವಾಲುಗಳನ್ನು ಎದುರಿಸಲು ವೈದ್ಯರು ಸಲ್ಲಿಸಿರುವ ಮನವಿಯನ್ನು ಸರ್ಕಾರದ ಸಂಬಂಧಪಟ್ಟ ಮಂತ್ರಿಗಳಿಗೆ ಸಲ್ಲಿಸುವ ಕೆಲಸ ಮಾಡುತ್ತೇನೆ. ಜತೆಗೆ ಸರ್ಕಾರ ಸಿಆರ್ ನಿಯಮ ರೂಪಿಸಿ ಕಾನೂನು ಇಲಾಖೆಗೆ ಕಳುಹಿಸಿದರೆ ಒಂದೇ ವಾರದಲ್ಲಿ ಅದನ್ನು ಮಂಜೂರು ಮಾಡಿ ಕಳುಹಿಸಲು ನಾನು ಸಿದ್ಧನಿದ್ದೇನೆ ಎಂದು ಮಾಧುಸ್ವಾಮಿ ಭರವಸೆ ನೀಡಿದರು. ಕರೊನಾ ನಂತರದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚು ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ, ಪ್ರತಿ ತಾಲೂಕಿನಲ್ಲಿ ಕನಿಷ್ಠ 100 ಬೆಡ್ ಹಾಸಿಗೆಯ ಆಸ್ಪತ್ರೆ ಜತೆಗೆ ಆಕ್ಸಿಜನ್ ಪ್ಲಾಂಟ್ ಕಡ್ಡಾಯಗೊಳಿಸಿದೆ. ಇದರ ಜತೆಗೆ ಸಮುದಾಯ ಆಸ್ಪತ್ರೆಗಳನ್ನು ಶಕ್ತಿ ಶಾಲಿಯಾಗಿಸಲು ಎಲ್ಲ ರೀತಿ ಕ್ರಮ ಕೈಗೊಂಡಿದೆ ಆದರೆ, ಮಾನವ ಸಂಪನ್ಮೂಲದ ಕೊರತೆ ಸರಿದೂಗಿಸುವ ಕೆಲಸ ಆಗಬೇಕಾಗಿದೆ ಎಂದರು.

ಸರ್ಕಾರಿ ವೈದ್ಯರ ಬೇಡಿಕೆ:

  • ಜುಲೈ 1ರಂದು ‘ವೈದ್ಯರ ದಿನ’ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜನೆ.
  • ಶಿಥಿಲವಾಗಿರುವ ಆರೋಗ್ಯ ಭವನಕ್ಕೆ ಕಾಯಕಲ್ಪ
  • ವೈದ್ಯಾಧಿಕಾರಿಗಳ ಸಿ ಆರ್ ರೂಲ್ಸ್ ಪರಿಷ್ಕರಣೆ, ವೈದ್ಯರ ಮುಂಬಡ್ತಿ.
  • ಐಪಿಎಚ್‌ಎಸ್ ಮಾನದಂಡಕ್ಕೆ ಅನುಗುಣವಾಗಿ ವೈದ್ಯಕೀಯ ಸಿಬ್ಬಂದಿ ನೇಮಕ.
  • ಕೌನ್ಸಿಲಿಂಗ್ ಮೂಲಕ ವೈದ್ಯರ ವರ್ಗಾವಣೆ

ಆಮಂತ್ರಣವಿಲ್ಲದೆ ಹೋಗುವ ಎರಡು ಜಾಗಗಳೆಂದರೆ ಒಂದು ಆಸ್ಪತ್ರೆ, ಮತ್ತೊಂದು ಸ್ಮಶಾನ. ಆಸ್ಪತ್ರೆಗೆ ಅಶಕ್ತನಾಗಿ ಬಂದ ವ್ಯಕ್ತಿ ನಿಮ್ಮ ಸೇವೆಯಿಂದ ಶಕ್ತನಾಗಿ ಹೊರಬರುತ್ತಾನೆ. ತಾಯಿ ಜನ್ಮ ನೀಡಿದರೆ, ವೈದ್ಯರು ಮರು ಜನ್ಮ ನೀಡುತ್ತಾರೆ ಎಂದು ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ವೈದ್ಯರನ್ನು ನಾರಾಯಣನಿಗೆ ಹೋಲಿಸಲಾಗಿದೆ, ಖಾಸಗಿ ವೈದ್ಯರಿಗಿಂತ ಸರ್ಕಾರಿ ವೈದ್ಯರ ಜವಾಬ್ದಾರಿ ಹೆಚ್ಚಿದೆ. ಸರ್ಕಾರಿ ಶಾಲೆ, ಬಸ್, ಆಸ್ಪತ್ರೆ ಚೆನ್ನಾಗಿಲ್ಲ ಎಂಬ ಟ್ರೆಂಡ್ ಹೆಚ್ಚಾಗಿದೆ. ಇದನ್ನು ಹೋಗಲಾಡಿಸುವ ಕೆಲಸವನ್ನು ನೀವೆಲ್ಲರೂ ಮಾಡಬೇಕು ಎಂದರು.

ವೈದ್ಯೆಯರ ನೃತ್ಯ ತುಮಕೂರಿನಲ್ಲಿ ಆಯೋಜಿಸಿರುವ ಸರ್ಕಾರಿ

ವೈದ್ಯಾಧಿಕಾರಿಗಳ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಹೆಜ್ಜೆ ಹಾಕಿದ ವೈದ್ಯೆಯರು.

ಮರುಜನ್ಮ ನೀಡುವ ವೈದ್ಯರು: ಆಮಂತ್ರಣವಿಲ್ಲದೆ ಹೋಗುವ ಎರಡು ಜಾಗಗಳೆಂದರೆ ಒಂದು ಆಸ್ಪತ್ರೆ, ಮತ್ತೊಂದು ಸ್ಮಶಾನ. ಆಸ್ಪತ್ರೆಗೆ ಅಶಕ್ತನಾಗಿ ಬಂದ ವ್ಯಕ್ತಿ ನಿಮ್ಮ ಸೇವೆಯಿಂದ ಶಕ್ತನಾಗಿ ಹೊರಬರುತ್ತಾನೆ. ತಾಯಿ ಜನ್ಮ ನೀಡಿದರೆ, ವೈದ್ಯರು ಮರು ಜನ್ಮ ನೀಡುತ್ತಾರೆ ಎಂದು ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ವೈದ್ಯರನ್ನು ನಾರಾಯಣನಿಗೆ ಹೋಲಿಸಲಾಗಿದೆ, ಖಾಸಗಿ ವೈದ್ಯರಿಗಿಂತ ಸರ್ಕಾರಿ ವೈದ್ಯರ ಜವಾಬ್ದಾರಿ ಹೆಚ್ಚಿದೆ. ಸರ್ಕಾರಿ ಶಾಲೆ, ಬಸ್, ಆಸ್ಪತ್ರೆ ಚೆನ್ನಾಗಿಲ್ಲ ಎಂಬ ಟ್ರೆಂಡ್ ಹೆಚ್ಚಾಗಿದೆ. ಇದನ್ನು ಹೋಗಲಾಡಿಸುವ ಕೆಲಸವನ್ನು ನೀವೆಲ್ಲರೂ ಮಾಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net