ರೋಗಿಗಾಗಿ ಮನಮಿಡಿದು 540ಕಿ.ಮೀ ಪ್ರಯಾಣ ಮಾಡಿದ ವೈದ್ಯ: ಜಾಲತಾಣದಲ್ಲಿ ಭಾರಿ ಶ್ಲಾಘನೆ

Doctor
Published on

ಕೋಲ್ಕತಾ: ವೈದ್ಯೋ ನಾರಾಯಣ ಹರಿಃ ಎನ್ನುತ್ತಾರೆ. ಅದಕ್ಕೆ ಅನ್ವಯಿಸುವಂತೆ ಇಲ್ಲಿಯ ವೈದ್ಯರೊಬ್ಬರು ಬಡ ಬಾಲಕಿಗೆ ಚಿಕಿತ್ಸೆ ನೀಡಿದ್ದೂ ಮಾತ್ರವಲ್ಲದೇ ಲಾಕ್‌ಡೌನ್‌ ಸಮಯವಾದ್ದರಿಂದ 270 ಕಿ.ಮೀ ದೂರದಲ್ಲಿ ಆಕೆಯನ್ನು ಕಾರಿನಲ್ಲಿ ಕೂರಿಸಿಕೊಂಡು ಮನೆಗೆ ಬಿಟ್ಟು ಬಂದಿದ್ದಾರೆ. ಬಾಲಕಿಯನ್ನು ಬಿಟ್ಟು ಪುನಃ ಮನೆಗೆ ವಾಪಸಾಗಲು ಸುಮಾರು 540 ಕಿ.ಮೀ ಪ್ರಯಾಣ ಬೆಳೆಸಿದ ವೈದ್ಯರೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ಗಳಿಸುತ್ತಿದ್ದಾರೆ.

ಈ ವೈದ್ಯರ ಹೆಸರ ಡಾ. ಬಬ್ಲು ಸರದಾರ್‌. ದಿನಗೂಲಿ ನೌಕರರಾಗಿರುವ ರಾಜೇಶ್‌ ಬಸ್ಕೆ ಎನ್ನುವವರು ತಮ್ಮ ಎಂಟು ವರ್ಷದ ಮಗಳಿಗೆ ಕರುಳಿನ ಚಿಕಿತ್ಸೆ ಕೊಡಿಸುವ ಸಂಬಂಧ ಕೋಲ್ಕತಾದ ಎಸ್‌.ಎಸ್‌.ಕೆ.ಎಂ. ಆಸ್ಪತ್ರೆಗೆ ದಾಖಲಿದ್ದರು. ಚಿಕಿತ್ಸೆ ಬಳಿಕ ಬಾಲಕಿಯನ್ನು ಡಿಸಾcರ್ಜ್‌ ಮಾಡಲಾಗಿತ್ತು. ಆದರೆ ಇದೇ ವೇಳೆಗೆ ಲಾಕ್‌ಡೌನ್‌ ಘೋಷಣೆಯಾಗಿಬಿಟ್ಟಿತು. ಜಾರ್ಖಂಡ್‌ನ ಬಿರ್ಬೂಮ್‌ ಗ್ರಾಮ ಸೇರಲು ಆ್ಯಂಬುಲೆನ್ಸ್‌ ಚಾಲಕನನ್ನು ಸಂಪರ್ಕಿಸಿದರು ರಾಜೇಶ್‌. ಆದರೆ ಅವರು ದುಬಾರಿ ಹಣ ಕೇಳಿದರು. ಈಗಾಗಲೇ ಚಿಕಿತ್ಸೆಗೆ ಇದ್ದ ಹಣವನ್ನೆಲ್ಲಾ ಖರ್ಚು ಮಾಡಿದ್ದ ಅವರಿಗೆ ಅಷ್ಟು ದೊಡ್ಡ ಮೊತ್ತವನ್ನು ನೀಡಲು ಸಾಧ್ಯವಾಗಲಿಲ್ಲ. ಆಗ ಅಸಹಾಯಕರಾಗಿ ನಿಂತಿದ್ದರು. ಅಲ್ಲಿಯೇ ಹೋಗುತ್ತಿದ್ದ ಡಾ. ಬಬ್ಲು ಸರ್ದಾರ್‌ ರಾಜೇಶ್‌ ಅವರಲ್ಲಿ ವಿಚಾರಿಸಿದಾಗ, ಅವರು ವಿಷಯ ತಿಳಿಸಿದರು.

ಆಗ ಅವರು, ಚಿಂತೆ ಮಾಡದಂತೆ ರಾಜೇಶ್‌ಗೆ ಧೈರ್ಯ ತುಂಬಿದರು. ಅದಾಗಲೇ ಸಂಜೆ 6 ಗಂಟೆಯಾಗಿತ್ತು. ತಡ ಮಾಡದ ಅವರು ತಮ್ಮ ಕಾರನ್ನು ತಂದು, ಅಪ್ಪ-ಮಗಳನ್ನು ಕುಳ್ಳರಿಸಿಕೊಂಡು ಮಧ್ಯರಾತ್ರಿ 3 ಗಂಟೆಗೆ ಬಿರ್ಬೂಮ್‌ಗೆ ಬಿಟ್ಟು ಬಂದರು. ತಲುಪಿದ್ದಾರೆ. ಇದು ಜಾರ್ಖಂಡ್‌ನ ಗಡಿಭಾಗದಲ್ಲಿದೆ. ಊಟವನ್ನೂ ಮಾಡದೇ ತಮ್ಮದೇ ಖರ್ಚಿನಲ್ಲಿ ಮನೆ ಬಿಟ್ಟು ಬಂದದ್ದರಿಂದ ರಾಜೇಶ್‌ ಈ ವಿಷಯವನ್ನು ಎಲ್ಲರಿಗೂ ತಿಳಿಸಿದರು. ಅದು ಭಾರಿ ಸುದ್ದಿಯಾಗಿ, ಜಾಲತಾಣಗಳಲ್ಲಿಯೂ ಶ್ಲಾಘನೆ ವ್ಯಕ್ತವಾಗಿದೆ. (ಏಜನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net